ಶನಿವಾರ, ಸೆಪ್ಟೆಂಬರ್ 18, 2021
24 °C
ಹಿಂದೆಂದೂ ಕಂಡರಿಯದಂಥ ಭೂ ಕುಸಿತ: ಹತ್ತಾರು ಮನೆಗಳು, ನೂರಾರು ಎಕರೆ ಕೃಷಿ ನಾಶ

ಧರೆ ಕುಸಿದಾಗ... ಮಣ್ಣೊಳಗೆ ಹುದುಗಿ ಬಸವಳಿದ ‘ಕಳಚೆ’

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಸಹ್ಯಾದ್ರಿ ಬೆಟ್ಟಗಳ ಸಾಲಿನಲ್ಲಿ ಸುಂದರವಾಗಿ ನಳನಳಿಸುತ್ತಿದ್ದ ಈ ಊರಿನಲ್ಲಿ ಮೊನ್ನೆ ಮೊನ್ನೆಯವರೆಗೆ ಎಲ್ಲ ಮೂಲ ಸೌಕರ್ಯಗಳೂ ಇದ್ದವು. ತಮ್ಮ ಊರನ್ನು ‘ಕಾಶ್ಮೀರ’ ಎಂದು ಇಲ್ಲಿನವರು ಅಭಿಮಾನದಿಂದ ಕರೆದು ಹೆಮ್ಮೆ ಪಡುತ್ತಿದ್ದರು. ಇಲ್ಲಿನವರಿಗೆ ಜೀವನಕ್ಕಾಗಿ ಯಾರ ಮುಂದೆಯೂ ಕೈಚಾಚಬೇಕಾದ ಅನಿವಾರ್ಯತೆ ಇರಲಿಲ್ಲ. ಆದರೆ, ಜುಲೈ 22 ಹಾಗೂ 23ರಂದು ಸಂಭವಿಸಿದ ಭಾರಿ ಭೂ ಕುಸಿತವು ಇಡೀ ಪ್ರದೇಶದ ಚಿತ್ರಣವನ್ನೇ ಇನ್ನಿಲ್ಲದಂತೆ ಬದಲಿಸಿದೆ. ಮತ್ತೆ ಹಿಂದಿನ ಸ್ವರೂಪಕ್ಕೆ ತರಲು ಸಾಧ್ಯವೇ ಇಲ್ಲ ಎಂಬಂತೆ ಮಾಡಿದೆ.

ಇದು ಯಲ್ಲಾಪುರ ತಾಲ್ಲೂಕಿನ ವಜ್ರಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳಚೆಯ ದುಃಸ್ಥಿತಿ. ಅಂದು ರಾತ್ರಿ 12.30ರ ಸುಮಾರಿಗೆ ಶುರುವಾದ, ಹಿಂದೆಂದೂ ಕಾಣದಂಥ ಮಳೆ ಸುಮಾರು 10 ಕಿಲೋಮೀಟರ್ ವ್ಯಾಪ್ತಿಯಲ್ಲಿ ಗುಡ್ಡ, ಮನೆಗಳು, ಮರಗಳು, ಫಲವತ್ತಾದ ತೋಟ... ಎಲ್ಲವನ್ನೂ ಬಲಿ ಪಡೆದಿದೆ. ಸದಾ ಲವಲವಿಕೆಯಿಂದ ಕೂಡಿರುತ್ತಿದ್ದ, ಕಾಡಿನ ನಡುವಿನ ಊರನ್ನು ಸ್ಮಶಾನ ಮೌನಕ್ಕೆ ದೂಡಿದೆ. ಗ್ರಾಮಸ್ಥರ ವರ್ಷಾನುಗಟ್ಟಲೆ ಶ್ರಮವನ್ನು ಕೆಲವೇ ಗಂಟೆಗಳಲ್ಲಿ ನಿರ್ನಾಮ ಮಾಡಿದೆ.

ಗ್ರಾಮದ ಒಳಗೆ ಸಂಪರ್ಕ ಕಲ್ಪಿಸುವ ಸರ್ವಋತು ರಸ್ತೆಯಲ್ಲಿ ಭಾರಿ ಪ್ರಮಾಣದ ನೀರು ಹರಿದ ಪರಿಣಾಮ, ಈಗ ಬಲುದೊಡ್ಡ ಕಣಿವೆಗಳಂತಾಗಿವೆ. ಸಾರಿಗೆ, ವಿದ್ಯುತ್, ಅಂಚೆ, ದೂರವಾಣಿ ಸಂಪೂರ್ಣ ಸ್ತಬ್ಧಗೊಂಡಿವೆ. ಊರಿಗೆ ಹೊರ ಜಗತ್ತಿನೊಂದಿಗೆ ಸಂಪರ್ಕಿಸುವ ಏಕೈಕ ರಸ್ತೆಯು ತಳಕೇಬೈಲ್‌ ಎಂಬಲ್ಲಿ ಕುಸಿದು ಹೋಗಿದೆ. ಹೀಗಾಗಿ ಈಗ ಏನೇ ಬೇಕಿದ್ದರೂ ಎಂಟು ಕಿಲೋಮೀಟರ್ ನಡೆಯುವ ಅನಿವಾರ್ಯ ಗ್ರಾಮಸ್ಥರದ್ದಾಗಿದೆ.

ಪೀಡಿತ ಪ್ರದೇಶ ಎಲ್ಲಿದೆ?: ಜುಲೈ 22ರಂದು ರಾತ್ರಿ 12.30ರ ಸುಮಾರಿಗೆ ಶುರುವಾದ ಭಾರಿ ಮಳೆ ಮತ್ತು ಗುಡ್ಡ ಕುಸಿತ 23ರ ಮಧ್ಯಾಹ್ನದವರೆಗೂ ಮುಂದುವರಿಯಿತು. ಸುಮಾರು 300 ಎಕರೆ ಅಡಿಕೆ ತೋಟ, ಸಾವಿರಾರು ಎಕರೆ ಅರಣ್ಯ ಮಣ್ಣುಪಾಲಾಯಿತು. ಈ ಊರು ತಾಲ್ಲೂಕು ಕೇಂದ್ರ ಯಲ್ಲಾಪುರದಿಂದ 35 ಕಿ.ಮೀ. ದೂರದಲ್ಲಿದೆ. ಕಾಳಿ ಜಲವಿದ್ಯುತ್ ಯೋಜನೆಯ ಭಾಗವಾದ ಕೊಡಸಳ್ಳಿ ಜಲಾಶಯದ ಮೇಲ್ಭಾಗದಲ್ಲಿದೆ.

ಐದಾರು ಕಿಲೋಮೀಟರ್ ದೂರದಿಂದಲೂ ಗುಡ್ಡದ ಮಣ್ಣು ಜಾರಿಕೊಂಡು ಪ್ರಪಾತಕ್ಕೆ ಸಾಗಿದೆ ಎನ್ನುತ್ತಾರೆ ಸ್ಥಳೀಯರು. ಇದಕ್ಕೆ ಸಾಕ್ಷಿಯಾಗಿ ಕಣ್ಣು ಹಾಯಿಸಿದಷ್ಟು ದೂರಕ್ಕೂ ಕೆಸರು, ಮಣ್ಣು, ಕಲ್ಲುಗಳು ಮರಗಿಡಗಳನ್ನು ಮುರಿದು ಮುನ್ನುಗ್ಗಿರುವುದು ಕಾಣುತ್ತವೆ. ಈಗ ಕಾಲಿಟ್ಟಲೆಲ್ಲಾ ಹುಗಿದು ಹೋಗುವ ಕೆಸರು, ಜಿನುಗುವ ನೀರು ಕಾಣಿಸುತ್ತದೆ. ಬೆಟ್ಟ ಗುಡ್ಡದಿಂದ ಹರಿಯುವ ಒರತೆ ದಾರಿ ಬದಲಿಸಿದ ಪರಿಣಾಮ, ಕುಡಿಯುವ ನೀರಿಗೂ ಪರಿತಪಿಸುವಂತೆ ಆಗಿದೆ.

ಲೋಕೋಪಯೋಗಿ, ಅರಣ್ಯ ಇಲಾಖೆಗಳು, ಹೆಸ್ಕಾಂ, ಬಿ.ಎಸ್.ಎನ್.ಎಲ್ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿ ಗ್ರಾಮಕ್ಕೆ ಸಂಪರ್ಕ ಮರು ಸ್ಥಾಪಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಜೊತೆಗೇ ಆರ್.ಎಸ್.ಎಸ್, ವಿಶ್ವದರ್ಶನ ಮುಂತಾದ ಸಂಘಟನೆಗಳೂ ಶ್ರಮದಾನ ಮಾಡುತ್ತಿವೆ.

ಮುಂದೇನು ಎಂಬುದೇ ಪ್ರಶ್ನೆ: ‘ನನ್ನ ಮೂರೂವರೆ ಎಕರೆ ಅಡಿಕೆ ಕೃಷಿ, ತೆಂಗಿನ ತೋಟ ಸಂಪೂರ್ಣವಾಗಿ ನಾಶವಾಗಿದೆ. ಮುಂದೇನು ಮಾಡಬೇಕು ತಿಳಿಯುತ್ತಿಲ್ಲ’ ಎನ್ನುತ್ತಾರೆ ಸ್ಥಳೀಯರಲ್ಲಿ ಒಬ್ಬರಾದ
ನಿವಾಸಿ ಜನಾರ್ದನ ಹೆಬ್ಬಾರ. ಅವರು ತಮ್ಮ ದುಃಖವನ್ನು ಮರೆತು ಬೇರೆಯವರ ಸಹಾಯಕ್ಕೆ ಮುಂದಾಗಿದ್ದಾರೆ. ಈ ರೀತಿ ಹೆಚ್ಚಿನವರು ಪರಸ್ಪರ ಕೈಜೋಡಿಸಿದ್ದಾರೆ.

ಹಿಂದೆಂದೂ ಕಂಡರಿಯದ ವಿಕೋಪದಿಂದ ಆಘಾತಕ್ಕೆ ಒಳಗಾಗಿರುವ ಕಳಚೆ ಊರಿನವರು, ತಮ್ಮ ವಾಸ್ತವ್ಯವನ್ನೇ ಬದಲಿಸಲು ಅಣಿಯಾಗಿದ್ದಾರೆ. ಸರ್ವಸ್ವವನ್ನೂ ಕಳೆದುಕೊಂಡ ಮಕ್ಕಳು, ವೃದ್ಧರು, ಮಹಿಳೆಯರು ತಾವು ಬದುಕಿದ್ದ ಮನೆಯನ್ನು ತೊರೆದು ಬೇರೆ ನೆಲೆಗಾಗಿ ಪರಿತಪಿಸುತ್ತಿದ್ದಾರೆ. ದನ, ಜಾನುವಾರು ಕುಟುಂಬದೊಂದಿಗೆ ಘಟ್ಟ ಹತ್ತಿ, ಬಂಧು ಬಳಗದ ಆಶ್ರಯ ಕೋರಿದ್ದಾರೆ. 

ಜುಲೈ 22ರಂದು ರಾತ್ರಿ ಶುರುವಾದ ಭಾರಿ ಮಳೆ ಬೆಳಗಿನವರೆಗೂ ಬಂತು. ಅಡಿಕೆ, ತೆಂಗು ಮರಗಳು ಕೊಚ್ಚಿಕೊಂಡು ಹೋಗಿವೆ. ಮನೆ ಬಿರುಕು ಬಿಟ್ಟಿದ್ದು, ಆತಂಕದಲ್ಲಿದ್ದೇವೆ.

– ರಾಮಚಂದ್ರ ವೆಂಕಟ್ರಮಣ ಹೆಗಡೆ, ಆಚೆತೋಟ, ಕಳಚೆ.

* ಮೂಲಸೌಲಭ್ಯ ಹೊಂದಿದ್ದ ಕಳಚೆ, ಬೆಳಗಾಗುವಷ್ಟರಲ್ಲಿ ಎಲ್ಲವನ್ನೂ ಕಳೆದುಕೊಂಡಿದೆ. ಈ ಭೂಪ್ರದೇಶವನ್ನು ವೈಜ್ಞಾನಿಕ ಅಧ್ಯಯನಕ್ಕೆ ಒಳಪಡಿಸಿ ಮುಂದಿನ ಅನಾಹುತ ತಪ್ಪಿಸಬೇಕಿದೆ.

ಗಜಾನನ ಭಟ್ಟ ಸೂತ್ರೆ, ವಜ್ರಳ್ಳಿ ಗ್ರಾ.ಪಂ ಸದಸ್ಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.