ಗುರುವಾರ , ಆಗಸ್ಟ್ 22, 2019
27 °C
ಮೊದಲ ಬಾರಿಯ ಭೀಕರ ಪ್ರವಾಹದಿಂದ ಕಂಗಾಲಾದ ನದಿಪಾತ್ರದ ಜನರ ಕಣ್ಣೀರು

ಕನಸು, ಬದುಕು ಕಸಿದುಕೊಂಡ ಕಾಳಿ

Published:
Updated:
Prajavani

ಕಾರವಾರ: ಆರು ದಿನಗಳ ಹಿಂದೆ ಕಾಳಿ ನದಿಯ ಇಕ್ಕೆಲಗಳಲ್ಲಿ ಕಣ್ಣು ಹಾಯಿಸಿದಷ್ಟೂ ನೀರು ತುಂಬಿತ್ತು. ರಸ್ತೆ, ಗದ್ದೆ, ಹೊಂಡ, ಕಟ್ಟಡ ಯಾವುದೂ ಕಾಣುತ್ತಿರಲಿಲ್ಲ. ಪ್ರವಾಹ ಇಳಿದ ಬಳಿಕ ಅಲ್ಲಿ ನೋಡಿದರೆ ಅದೆಷ್ಟೋ ಜನರ ಬದುಕೂ ಮುಳುಗಿರುವುದು ಗೋಚರಿಸುತ್ತಿದೆ.

ಇದೇ ಮೊದಲ ಬಾರಿ ಉಂಟಾದ ಕಾಳಿ ನದಿಯ ಪ್ರವಾಹಕ್ಕೆ ಮಲ್ಲಾಪುರ ಹಾಗೂ ಕದ್ರಾ ಗ್ರಾಮಗಳು ಅಕ್ಷರಶಃ ನಲುಗಿದವು. ನೆರೆ ಇಳಿದ ಬಳಿಕ ಓಡೋಡಿ ಬಂದು ಮನೆಯ ಬಾಗಿಲು ತೆರೆದರೆ ಒಳಗೆ ನಾಲ್ಕೈದು ಇಂಚುಗಳಷ್ಟು ಕೆಸರು ನಿಂತಿದೆ. ಊಟದ ತಟ್ಟೆ, ಲೋಟ, ಹಾಸಿಗೆ, ಕಪಾಟು, ಟಿ.ವಿ, ಫ್ರಿಜ್ ಹೀಗೆ ಎಲ್ಲವೂ ನೀರುಪಾಲಾಗಿವೆ. ಅಲ್ಲಿನವರಿಗೆ ಎರಡು ದಿನಗಳಿಂದ ಮನೆ, ಬಟ್ಟೆ, ಪಾತ್ರೆ ಪಗಡಿ ಸ್ವಚ್ಛಗೊಳಿಸುವುದೇ ಸವಾಲಾಗಿದೆ. ಮನೆ, ಜಮೀನು ದಾಖಲೆಗಳಂತೂ ಎಲ್ಲಿ ಹೋಗಿವೆಯೆಂದು ಊಹಿಸಲೂ ಸಾಧ್ಯವಿಲ್ಲ. 

‘ಕಾಳಿಯ ನೀರು ಕೇವಲ ಮನೆಯನ್ನು ಆವರಿಸಿದ್ದಲ್ಲ, ನಮ್ಮ ಬದುಕನ್ನೂ ಮುಳುಗಿಸಿದೆ. ರಾತ್ರಿ ಇದ್ದಕ್ಕಿದ್ದಂತೆ ನೀರಿನ ಪ್ರಮಾಣ ಹೆಚ್ಚಾಯಿತು. ಪೊಲೀಸರು ಬಂದು ಕೂಡಲೇ ಮನೆಯಿಂದ ದೂರ ಹೋಗುವಂತೆ ತಿಳಿಸಿದರು. ನಾವು ಗ್ರಾಮ ಪಂಚಾಯ್ತಿ ಕಚೇರಿಗೆ ಬಂದು ನಂತರ ತಾತ್ಕಾಲಿಕ ಪುನರ್ವಸತಿ ಕೇಂದ್ರಕ್ಕೆ ಹೋದೆವು. ಬೆಳಿಗ್ಗೆ ನೋಡಿದರೆ ಮನೆಯ ಚಾವಣಿ ಮಾತ್ರ ಕಾಣುತ್ತಿತ್ತು’ ಎಂದು ಉಕ್ಕಿ ಬರುತ್ತಿದ್ದ ಅಳುವನ್ನು ತಡೆಯುತ್ತ ಮಲ್ಲಾಪುರದ ದೀಪಕ್ ಸುಬ್ರಾಯ ಬಾಂದೇಕರ್ ವಿವರಿಸಿದರು. ಆಗ ಅವರ ಮನೆ ಮಂದಿ ರಾಡಿ ಮಿಶ್ರಿತ ಬಟ್ಟೆಯನ್ನು ಡಾಂಬರು ರಸ್ತೆಯಲ್ಲೇ ತೊಳೆಯುತ್ತಿದ್ದರು.

ಕಿನ್ನರ ಗ್ರಾಮದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ‘ಏನು ಮಾಡಲೂ ತೋಚದಂಥ ಸ್ಥಿತಿಯಲ್ಲಿದ್ದೇವೆ. ಜೀವನ ಮೊದಲಿನಂತಾಗಲು ಅದೆಷ್ಟು ದಿನಗಳು ಬೇಕೋ ಗೊತ್ತಿಲ್ಲ’ ಎಂದು ಕಿನ್ನರ ಗ್ರಾಮದ ಜ್ಯೋತಿ ಪ್ರಕಾಶ ಕೊಠಾರಕರ ಗದ್ಗದಿತರಾದರು.

ಬೋರಿಬಾಗ ಪ್ರದೇಶದಲ್ಲಿ ಹಲವು ಮನೆಗಳ ಗೋಡೆಗಳು ಕುಸಿದಿವೆ. ಮೀನುಗಾರರ ಬಲೆಗಳು ನದಿ ಪಾಲಾಗಿವೆ. ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪುಸ್ತಕಗಳು, ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ದಾಖಲೆಗಳು ನೀರು ಪಾಲಾಗಿವೆ.

ಕಂಗಾಲಾದ ಸಿಐಎಸ್‌ಎಫ್ ಸಿಬ್ಬಂದಿ: ಕದ್ರಾ ಅಣೆಕಟ್ಟೆಯಿಂದ ಹೊರಬಿಟ್ಟ ನೀರು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) ಸಿಬ್ಬಂದಿಯನ್ನೂ ಹೈರಾಣಾಗಿಸಿದೆ. 

‘ಆ.5ರಂದು ರಾತ್ರಿ ನಾನು ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಕರ್ತವ್ಯದಲ್ಲಿದ್ದೆ. ಮನೆಯಲ್ಲಿ ಎರಡು ವರ್ಷದ ಮಗ ಹಾಗೂ ಮನೆಯವರು ಇದ್ದರು. ರಾತ್ರಿ 10 ಗಂಟೆಗೆ ಎಲ್ಲೆಲ್ಲೂ ಆವರಿಸಿತು. ಮನೆಯವರನ್ನು ಯಾರೋ ಪುನರ್ವಸತಿ ಕೇಂದ್ರದಲ್ಲಿ ಬಿಟ್ಟರು. ಮನೆಯಲ್ಲಿದ್ದ ವಸ್ತು, ಸಮವಸ್ತ್ರ, ಶೂ ಎಲ್ಲವೂ ತೊಯ್ದು ಹೋದವು. ನಾವು ಕರ್ತವ್ಯದಲ್ಲಿರುವಾಗ ಮೊಬೈಲ್ ಬಳಕೆ ಮಾಡುವಂತಿಲ್ಲ. ಹಾಗಾಗಿ ಈ ವಿಚಾರ ನನಗೆ ಕರ್ತವ್ಯ ಮುಗಿಸಿ ಬೆಳಿಗ್ಗೆ ಬಂದ ಬಳಿಕವೇ ತಿಳಿಯಿತು. ನಾಲ್ಕೈದು ದಿನ ಒಂದೇ ಸಮವಸ್ತ್ರದಲ್ಲಿದ್ದೆ’ ಎಂದು ಸಿಬ್ಬಂದಿಯೊಬ್ಬರು ಬೇಸರಿಸಿದರು.

ಭದ್ರತಾ ಪಡೆಯ ಸುಮಾರು 25 ಕುಟುಂಬಗಳು ಕೂಡ ಇಂಥದ್ದೇ ಸನ್ನಿವೇಶ ಎದುರಿಸಿದ್ದವು.

Post Comments (+)