ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳಿ ನದಿಯಲ್ಲಿ ರ‍್ಯಾಫ್ಟಿಂಗ್‌: ಏಕರೂಪಕ್ಕೆ ‍‍ಪೋರ್ಟಲ್ ವ್ಯವಸ್ಥೆ

ಕಾಳಿ ನದಿಯಲ್ಲಿ ಜಲಕ್ರೀಡೆ ಆಯೋಜನೆಯ ಸ್ಥಳಗಳಿಗೆ ಅಧಿಕಾರಿಗಳ ತಂಡ ಭೇಟಿ
Last Updated 29 ಏಪ್ರಿಲ್ 2022, 2:16 IST
ಅಕ್ಷರ ಗಾತ್ರ

ಕಾರವಾರ/ ಜೊಯಿಡಾ: ಜೊಯಿಡಾದ ಗಣೇಶಗುಡಿಯಲ್ಲಿ ಈಚೆಗೆ ಕಾಳಿ ನದಿಯಲ್ಲಿ ರ‍್ಯಾಫ್ಟಿಂಗ್ ದೋಣಿ ಅಪಾಯಕ್ಕೆ ಸಿಲುಕಿದ ಪ್ರಕರಣದ ಬಳಿಕ, ಆ ಭಾಗದ ಜಲಕ್ರೀಡೆಗಳ ಮೇಲೆ ಜಿಲ್ಲಾಡಳಿತ ಕಟ್ಟುನಿಟ್ಟಿನ ನಿಗಾ ಇಟ್ಟಿದೆ. ರ‍್ಯಾಫ್ಟಿಂಗ್ ಆಯೋಜಿಸುವವರು ಇನ್ನು ಮುಂದೆ ಒಂದೇ ಪೋರ್ಟಲ್‌ ಅಡಿ ವ್ಯವಹರಿಸುವ ವ್ಯವಸ್ಥೆ ಜಾರಿಗೆ ಬರಲಿದೆ.

ರ‍್ಯಾಫ್ಟಿಂಗ್ ನಡೆಯುವ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪೆನ್ನೇಕರ್, ಉಪ ವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೊಡ ಸೇರಿದಂತೆ ವಿವಿಧ ಹಿರಿಯ ಅಧಿಕಾರಿಗಳ ತಂಡವು ಗುರುವಾರ ಭೇಟಿ ನೀಡಿತು. ಅಲ್ಲಿರುವ ವ್ಯವಸ್ಥೆಗಳು ಮತ್ತು ರ‍್ಯಾಫ್ಟಿಂಗ್ ವೇಳೆ ನಿಯಮಗಳ ಪಾಲನೆಯ ಬಗ್ಗೆ ಪರಿಶೀಲಿಸಿತು.

ಈ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ‘ರ‍್ಯಾಫ್ಟಿಂಗ್‌ಗೆ ಬರುವ ಪ್ರವಾಸಿಗರ ನೋಂದಣಿಯು ಮುಂದಿನ ದಿನಗಳಲ್ಲಿ ಒಂದೇ ಪೋರ್ಟಲ್ ಮೂಲಕ ಆಗಬೇಕು. ಈಗ ಎಲ್ಲೂ ನಿಯಂತ್ರಣವಿಲ್ಲದೇ ಗೋಜಲಾಗಿದೆ. ಏಕರೂಪದ ದರವಾಗಲೀ ನಿಗದಿತ ಸ್ಥಳವಾಗಲೀ ಇಲ್ಲ. ಹಾಗಾಗಿ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ (ಜೆ.ಎಲ್.ಆರ್‌) ಮಾದರಿಯಲ್ಲೇ ಒಂದೇ ಪೋರ್ಟಲ್ ಮೂಲಕ ನೋಂದಣಿ ಆಗಬೇಕು. ಇದಕ್ಕೆ ಒಂದಷ್ಟು ಕಾಲಾವಕಾಶ ಬೇಕಿದ್ದು, ವ್ಯವಸ್ಥೆ ಮಾಡಲಾಗುತ್ತದೆ’ ಎಂದು ತಿಳಿಸಿದರು.

‘ರ‍್ಯಾಫ್ಟಿಂಗ್ ಹೊರತು ಪಡಿಸಿ ಇತರ ಚಟುವಟಿಕೆಗಳನ್ನು ಆರಂಭಿಸಲು ತಿಳಿಸಿದ್ದೇವೆ. ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಮೂಲಕ ದೂರದ ರ‍್ಯಾಫ್ಟಿಂಗ್ ನಡೆಯುತ್ತಿದೆ. ಉಳಿದಂತೆ, ನದಿಯಲ್ಲಿ ಖಾಸಗಿ ಜಮೀನುಗಳ ಬಳಿ ರ‍್ಯಾಂಪ್ ಮಾದರಿಯಲ್ಲಿ ಅಳವಡಿಸಿದ್ದ ಉಪಕರಣಗಳನ್ನು ಸುರಕ್ಷತೆಯ ದೃಷ್ಟಿಯಿಂದ ತೆರವು ಮಾಡಿಸಲಾಗಿದೆ’ ಎಂದರು.

‘ದೂರದ ರ‍್ಯಾಫ್ಟಿಂಗ್‌ಗೆ ಈಗಾಗಲೇ ಮಾರ್ಗ ಗುರುತಿಸಲಾಗಿದೆ. ಅದೇ ರೀತಿಯಲ್ಲಿ ಸಣ್ಣ ಮತ್ತು ಮಧ್ಯಮ ರ‍್ಯಾಫ್ಟಿಂಗ್‌ಗೂ ನಿಗದಿಯಾಗಬೇಕು. ಅಲ್ಲಿರುವ ಆಪರೇಟರ್‌ಗಳಿಗೆ ಇಂತಿಷ್ಟು ಎಂದು ರ‍್ಯಾಫ್ಟಿಂಗ್ ಹಂಚಿಕೆ ಮಾಡಲಾಗುವುದು. ಖಾಸಗಿ ಜಮೀನಿನ ಮೂಲಕ ಮತ್ತೆ ಅವಕಾಶ ಕೊಟ್ಟರೆ ಸಮಸ್ಯೆಗೆ ಕಾರಣವಾಗಬಹುದು. ಹಾಗಾಗಿ ನಿಯಮಗಳನ್ನು ವಿಧಿಸಲಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.

ನೋಂದಣಿಗೆ ಏಕಗವಾಕ್ಷಿ ವ್ಯವಸ್ಥೆ:

‘ಸಣ್ಣ ಹಾಗೂ ಮಧ್ಯಮ ದೂರದ ರ‍್ಯಾಫ್ಟಿಂಗ್ ನಡೆಸಲು ಅನುಮತಿ ನೀಡುವ ಕುರಿತು ಶೀಘ್ರವೇ ಅಂತಿಮ ನಿರ್ಣಯ ಕೈಗೊಳ್ಳಲಾಗುತ್ತದೆ. ಆಯೋಜಕರು ಸಲಕರಣೆಗೆ ಇಂತಿಷ್ಟು ಎಂದು ಭದ್ರತಾ ಠೇವಣಿ ಪಾವತಿಸಬೇಕು. ಜಿಲ್ಲಾಡಳಿತವು ರೂ‍ಪಿಸಿರುವ ನಿಯಮಾವಳಿ ಪ್ರಕಾರ ಎಲ್ಲ ಆಪರೇಟರ್‌ಗಳು ನೋಂದಣಿ ಮಾಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.

‘ಇದಕ್ಕೆ ಅನುಕೂಲವಾಗುವಂತೆ ಅಭಿಯಾನವನ್ನೂ ಹಮ್ಮಿಕೊಳ್ಳಲಾಗುವುದು. ಆ ಸಂದರ್ಭದಲ್ಲಿ ನಮ್ಮ ಅಧಿಕಾರಿಗಳು ಅಲ್ಲಿರುತ್ತಾರೆ. ಬಳಿಕ ಏಕಗವಾಕ್ಷಿ ವ್ಯವಸ್ಥೆಯ ಮೂಲಕ ಅನುಮತಿ ಪಡೆದುಕೊಂಡವರು ರ‍್ಯಾಫ್ಟಿಂಗ್ ಆರಂಭಿಸಬಹುದು’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT