ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳಿ ನದಿಯ ಉಪನದಿ: ಕೃಷಿಕರಿಗೆ ನೀರಿನ ‘ಕಾಣಿಕೆ’ ನೀಡದ ಹಳ್ಳ

ಉಪನದಿಗೆ ಕಟ್ಟಲಾದ ಬಾಂದಾರದಲ್ಲಿ ನೀರು ಖಾಲಿ
Last Updated 27 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಕಾರವಾರ:ಒಂದು ಕಾಲದಲ್ಲಿ ಇದು ಸಾವಿರಾರು ಎಕರೆ ಕೃಷಿಭೂಮಿಗೆ ಬೇಸಿಗೆಯಲ್ಲಿ ಜೀವಜಲ ಒದಗಿಸುತ್ತಿದ್ದ ಕಿರು ಅಣೆಕಟ್ಟೆ. ಬೇಸಿಗೆ ಕಾಲದ ಅಂತ್ಯದವರೆಗೂಭರ್ತಿಯಾಗಿರುತ್ತಿತ್ತು.ಕೃಷಿಗೆ ನೀರಾವರಿಯ ಅನುಕೂಲ ಮಾಡಿಕೊಡುತ್ತಿದ್ದ ಈ ಜಾಗದಲ್ಲಿ ಈಗ ನೀರು ಬಹಳ ಹಿಂದೆ ಸರಿದಿದೆ. ನುಣುಪಾದ ಕಲ್ಲುಗಳು ಮಧ್ಯಾಹ್ನದ ಪ್ರಖರ ಬಿಸಿಲನ್ನು ಹೀರಿಕೊಂಡು ಮುಟ್ಟಲಾಗದಷ್ಟುಬಿಸಿಯಾಗುತ್ತಿವೆ.

ಇದು ತಾಲ್ಲೂಕಿನದೇವಳಮಕ್ಕಿಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿರ್ಮಿಸಲಾದ ಕಾಣಿಕೆ ಹಳ್ಳದ ಬಾಂದಾರದ ಈಗಿನ ಸ್ಥಿತಿ.ವೈಲವಾಡ ಗ್ರಾಮದ ಸಮೀಪದಲ್ಲೇ ಇರುವ ಈ ಬಾಂದಾರವು, ಕೆಳಭಾಗದ ಬಡಜೂಗ, ನೈತಿಸಾವರ, ಮಂಡೆಬೋಳ ಹಾಗೂ ವೈಲವಾಡ ಗ್ರಾಮಗಳಿಗೆ ನೀರಾವರಿಗೆ ಬಳಕೆಯಾಗುತ್ತಿತ್ತು. ಒಂದು ಅಂದಾಜಿನ ಪ್ರಕಾರ ಸುಮಾರು ಒಂದು ಸಾವಿರ ಎಕರೆ ಕೃಷಿ ಭೂಮಿಗೆ ನೀರುಣಿಸುತ್ತಿತ್ತು. ಆದರೆ, ಈಗ ಬಾಂದಾರದಿಂದ ಸುಮಾರು 50 ಮೀಟರ್ದೂರದಲ್ಲಿ ಮೊಣಕಾಲುದ್ದ ನೀರು ನಿಂತಿದೆ.ಬಿಸಿಲು ಇದೇ ರೀತಿ ಮುಂದುವರಿದರೆ ನೀರು ಇನ್ನಷ್ಟು ಆವಿಯಾಗುವ ಸಾಧ್ಯತೆಯಿದೆ.

ಕಾಣಿಕೆ ಹಳ್ಳವು, ವರ್ಷ ಪೂರ್ತಿ ಮೈದುಂಬಿ ಹರಿಯುವ ಕಾಳಿ ನದಿಯ ಉಪ ನದಿಯಾಗಿದೆ. ಇದರ ಬಾಂದಾರದಲ್ಲಿ ಭರ್ತಿಯಾದ ನೀರು, ಅದರ ಅಂಚಿಗೆ ನಿರ್ಮಾಣ ಮಾಡಲಾಗಿರುವ ಕಾಲುವೆಯಲ್ಲಿ ನೈಸರ್ಗಿಕವಾಗಿ ಹರಿದು ಕೃಷಿ ಭೂಮಿ ಸೇರುತ್ತಿತ್ತು. ಆದರೆ, ಈಚೆಗೆಕಾಲುವೆಯ ನಿರ್ವಹಣೆ ಇಲ್ಲದ ಪರಿಣಾಮ ಸಂಪೂರ್ಣ ಮುಚ್ಚಿದ ಸ್ಥಿತಿಯಲ್ಲಿದೆ. ಎರಡು ಮೂರು ವರ್ಷಗಳಿಂದ ಬಾಂದಾರದಲ್ಲಿ ನೀರು ಇಷ್ಟು ಕಡಿಮೆ ಮಟ್ಟಕ್ಕೆ ಇಳಿಯುತ್ತಿದೆ ಎನ್ನುತ್ತಾರೆ ಸ್ಥಳೀಯರಾದ ರವಿ.

ಹಳೆಯ ಬಾಂದಾರಶಿಥಿಲವಾಗಿದೆ ಹಾಗೂ ನೀರು ಕಡಿಮೆ ಸಂಗ್ರಹವಾಗುತ್ತಿದೆ ಎಂಬ ನೆಪ ನೀಡಿ ಸುಮಾರು 10 ವರ್ಷಗಳ ಹಿಂದೆ ಮತ್ತೊಂದನ್ನು ನಿರ್ಮಿಸಲಾಯಿತು.ಸುಮಾರು ₹ 40 ಲಕ್ಷ ವೆಚ್ಚದಲ್ಲಿ ಹೊಸ ಕಾಮಗಾರಿಪೂರ್ಣಗೊಂಡಿತು. ಹಳೆಯ ಬಾಂದಾರಕ್ಕೆ ಸಮಾನ ಎತ್ತರದಲ್ಲಿ ಕೆಳಭಾಗದಲ್ಲಿಹೊಸ ಬಾಂದಾರ ನಿರ್ಮಾಣ ಮಾಡಲಾಯಿತು. ಒಂದುವೇಳೆ ಮಳೆಚೆನ್ನಾಗಿ ಸುರಿದು ನೀರು ಸಂಗ್ರಹವಾದರೂ ಕಾಲುವೆಯಲ್ಲಿನೀರು ಹರಿಯುವುದೇ ಇಲ್ಲ. ಹೊಸ ಬಾಂದಾರದ ಎತ್ತರವನ್ನು ಹೆಚ್ಚಿಸುವಂತೆ ಮಾಡಿದ ಮನವಿಯನ್ನೂ ಸಣ್ಣ ನೀರಾವರಿ ಇಲಾಖೆಯ ಅಂದಿನ ಅಧಿಕಾರಿಗಳು ಕೇಳಲಿಲ್ಲ. ಹೀಗಾಗಿ ಈ ಕಾಮಗಾರಿ ಪ್ರಯೋಜನಕ್ಕೆ ಇಲ್ಲದಂತಾಗಿದೆ ಎಂಬ ಅಸಮಾಧಾನ ಗ್ರಾಮದ ಕಿರಣ ಅವರದ್ದು.

ಅಂತರ್ಜಲದ ವ್ಯಾಪಕ ಬಳಕೆ, ಮಳೆಯ ಕೊರತೆ, ಬಾಂದಾರದ ಮೇಲ್ಭಾಗದಲ್ಲಿ ಹೆಚ್ಚಿದ ನೀರಿನ ಬಳಕೆಯಂತಹ ಕಾರಣಗಳಿಂದ ಹಳ್ಳದಲ್ಲಿ ನೀರಿನ ಹರಿವು ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದೆ. ಹಳ್ಳ ಸಂಪೂರ್ಣ ಬತ್ತದಂತೆಸುತ್ತಮುತ್ತಲಿನ ಜನರೇ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಸೂಕ್ತ ಎನ್ನುವ ಅಭಿಪ್ರಾಯವೂ ಅವರದ್ದಾಗಿದೆ.

ಸೊಪ್ಪು ಬಳಸಿ ಕಟ್ಟುತ್ತಿದ್ದರು:ದಶಕಗಳ ಹಿಂದೆಕಾಣಿಕೆ ಹಳ್ಳದ ಬಾಂದಾರ ನಿರ್ಮಾಣ ಕಾರ್ಯವನ್ನು ಊರಿನ ಜನರು ಧಾರ್ಮಿಕ ದೃಷ್ಟಿಯಿಂದಲೂನೋಡುತ್ತಿದ್ದರು. ಬಾಂದಾರ ನಿರ್ಮಾಣವಾಗಿ ನಿಂತ ನೀರಿನಿಂದ ಸುತ್ತಮುತ್ತಲ ಗ್ರಾಮಗಳಲ್ಲಿ ಅಂತರ್ಜಲ ವೃದ್ಧಿಸಿ ಬಾವಿಗಳ ಪುನರುಜ್ಜೀವನ ಕಾರ್ಯವಾಗುತ್ತಿತ್ತು. ಆಗ ಸೊಪ್ಪು, ಹುಲ್ಲು, ಮಣ್ಣು ಬಳಸಿ ನೀರನ್ನು ಹಿಡಿದಿಡಲಾಗುತ್ತಿತ್ತು ಎಂದು ರವಿ ನೆನಪಿಸಿಕೊಳ್ಳುತ್ತಾರೆ.

ಆ ದಿನಗಳಲ್ಲಿ ಅಮದಳ್ಳಿ ಭಾಗದಿಂದಲೂ ಜನರು ಬಂದು ಬಾಂದಾರ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸುತ್ತಿದ್ದರು. ಹಳ್ಳದ ದಂಡೆಯಲ್ಲೇ ಅಡುಗೆ, ಊಟ ಮಾಡಿ ಕೆಲಸ ಮಾಡುತ್ತಿದ್ದರು. ಒಂದು ರೀತಿಯ ಹಬ್ಬದ ವಾತಾವರಣ ಇರುತ್ತಿತ್ತು ಎಂದು ಹಿರಿಯರು ಹೇಳುತ್ತಿದ್ದರು ಎಂದು ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT