ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರಿಕೋಣಕ್ಕೆ ಕಂಕಣ

ಬೆಳಗಿದ ಮೇಟಿ ದೀಪ; ಚಪ್ಪರ ನಿರ್ಮಾಣ ಭರದಲ್ಲಿ
Last Updated 26 ಫೆಬ್ರುವರಿ 2020, 13:53 IST
ಅಕ್ಷರ ಗಾತ್ರ

ಶಿರಸಿ: ಇಲ್ಲಿನ ಮಾರಿಕಾಂಬಾ ದೇವಿ ಜಾತ್ರೆಯ ಪೂರ್ವಭಾವಿಯಾಗಿ ನಡೆಯುವ ಅಂಕೆ ಹಾಕುವ ಕಾರ್ಯ ಬುಧವಾರ ಧಾರ್ಮಿಕ ವಿಧಾನಗಳೊಂದಿಗೆ ನೆರವೇರಿತು.

ಮಂಗಳವಾರ ರಾತ್ರಿ ಕೊನೆಯ ಹೊರಬೀಡು ನಡೆದ ನಂತರ, ಮರುದಿನಮಾರಿ ಕೋಣನಿಗೆ ಕಂಕಣ ಕಟ್ಟುತ್ತಾರೆ. ಇದಕ್ಕೆ ಅಂಕೆ ಹಾಕುವುದು ಎನ್ನುತ್ತಾರೆ. ದೇವಾಲಯದ ಆವರಣದಲ್ಲಿರುವ ಮಾರಿಕೋಣವು ಮೆರವಣಿಗೆಯಲ್ಲಿ ಮರ್ಕಿ–ದುರ್ಗಿ ದೇವಾಲಯಕ್ಕೆ ಹೋಗಿ, ಅಲ್ಲಿ ಪೂಜೆ ಸಲ್ಲಿಸಿ, ಅಲ್ಲಿಂದ ಬಿಡಕಿಬೈಲಿನ ಜಾತ್ರಾ ಗದ್ದುಗೆ ಸ್ಥಳಕ್ಕೆ ಬಂತು. ಅಲ್ಲಿ ಆಸಾದಿಯರು ಮತ್ತು ಮೇತ್ರಿಯರು ರಂಗ ವಿಧಾನ ನೆರವೇರಿಸಿದರು. ಇನ್ನು ಎರಡು ದಿನ ಮಾರಿಕೋಣ ನಗರ ಸಂಚಾರ ನಡೆಸುತ್ತದೆ. ಮಹಿಳೆಯರು ಅರಿಸಿನ, ಕುಂಕುಮ ಹಚ್ಚಿ, ಎಣ್ಣೆ ಹಾಕಿ ಈ ಕೋಣವನ್ನು ಪೂಜಿಸುತ್ತಾರೆ.

ಜಾತ್ರಾ ಗದ್ದುಗೆಗೆ ನಾಡಿಗ ಬಾಬುದಾರರು ಮಂಗಳಾರತಿ ಬೆಳಗಿದರು. ಈ ಮಂಗಳಾರತಿಯ ದೀಪದಿಂದ ಹಣತೆಯನ್ನು ಬೆಳಗಲಾಯಿತು. ಈ ದೀಪಕ್ಕೆ ಮೇಟಿ ಎನ್ನುತ್ತಾರೆ. ಜಾತ್ರೆ ಮುಗಿಯುವ ತನಕ ಈ ದೀಪ ಆರದಂತೆ ಮೇಟಿಗರು ಕಾಯುತ್ತಾರೆ. ಈ ಎಲ್ಲ ಧಾರ್ಮಿಕ ವಿಧಿ–ವಿಧಾನಗಳು ಪೂರ್ಣಗೊಂಡ ನಂತರ ದೇವಾಲಯದ ಗರ್ಭಗುಡಿಯ ಬಾಗಿಲನ್ನು ಮುಚ್ಚಲಾಯಿತು. ಜಾತ್ರೆಗೆ ಅಣಿಯಾಗಿರುವ ದೇವಿ, ಕಲ್ಯಾಣೋತ್ಸವದ ದಿನ (ಮಾ.3ರಂದು) ಸಭಾ ಮಂಟಪದಲ್ಲಿ ವಿರಾಜಮಾನಳಾಗುತ್ತಾಳೆ.

ದೇವಾಲಯದ ಆಡಳಿತ ಮಂಡಳಿ ಪ್ರಮುಖರು ಬಾಬುದಾರ ಪ್ರಮುಖ ಜಗದೀಶ ಗೌಡ, ಮೇಟಿ ದೀಪದ ಜವಾಬ್ದಾರಿ ಹೊತ್ತಿರುವ ಶ್ರೀಧರ, ಆಸಾದಿಯರು, ಮೇತ್ರಿ ಕುಟುಂಬದವರು ಇದ್ದರು.

ಭರದ ಸಿದ್ಧತೆ:

ಬಿಡಕಿಬೈಲಿನ ಜಾತ್ರಾ ಗದ್ದುಗೆಯ ಸುತ್ತ ಚಪ್ಪರ ಕಟ್ಟುವ ಕಾರ್ಯ ಭರದಿಂದ ಸಾಗಿದೆ. ಬಿಡಕಿಬೈಲಿನ ತರಕಾರಿ ಮಾರುಕಟ್ಟೆ ವಿಕಾಸಾಶ್ರಮ ಮೈದಾನಕ್ಕೆ ಸ್ಥಳಾಂತರಗೊಂಡಿದೆ. ಜಾತ್ರೆಯ ಹಂಗಾಮಿ ಅಂಗಡಿಗಳ ಹರಾಜು ಪ್ರಕ್ರಿಯೆ ಗುರುವಾರದಿಂದ (ಫೆ.27) ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT