ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ ಅತ್ಯಂತ ಪ್ರಾಚೀನ ಜಿಲ್ಲೆ

‘ಐತಿಹಾಸಿಕ ಪರಂಪರೆ’ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಶಂಭುಲಿಂಗ ವಾಣಿ ಅಭಿಮತ
ಅಕ್ಷರ ಗಾತ್ರ

ಡಾ.ಚನ್ನಣ್ಣ ವಾಲೀಕಾರ ವೇದಿಕೆ (ಕಲಬುರ್ಗಿ): 'ಸಿಂಧೂ ಬಯಲಿನ ನಾಗರಿಕತೆಯ ಸಮಕಾಲಿನ ನಾಗರಿಕತೆಯನ್ನು ಕಲಬುರ್ಗಿ ಹೊಂದಿದ್ದು, ಹೀಗಾಗಿ ಈ ಜಿಲ್ಲೆಯನ್ನು ಅತ್ಯಂತ ಪ್ರಾಚೀನ ಜಿಲ್ಲೆ ಎಂದು ಹೇಳಲಾಗುತ್ತಿದೆ'ಎಂದು ಡಾ.ಶಂಭುಲಿಂಗ ವಾಣಿ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಇಲ್ಲಿನ ಅಂಬೇಡ್ಕರ್‌ ಭವನದಲ್ಲಿ ಗುರುವಾರ ಆಯೋಜಿಸಿದ್ದ ‘ಐತಿಹಾಸಿಕ ಪರಂಪರೆ’ ವಿಷಯದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘1985ರಲ್ಲಿ ಮೊದಲ ಬಾರಿಗೆ ಇಲ್ಲಿನ ಚಿತ್ತಾಪುರ ತಾಲ್ಲೂಕಿನ ಸನ್ನತಿಯಲ್ಲಿ ಉತ್ಖನನ ಪ್ರಕ್ರಿಯೆ ಆರಂಭವಾಯಿತು. ಪ್ರಾಗೈತಿಹಾಸಿಕ ಕಾಲದಲ್ಲಿ ಬಳಸಿದ್ದ ಮಣ್ಣಿನ ಮಡಕೆ, ಕುಡುಕೆ ಹಾಗೂ ಸುಟ್ಟ ಇಟ್ಟಂಗಿಗಳು ದೊರೆತವು. ಅವುಗಳನ್ನು ಅಧ್ಯಯನ ಮಾಡಿದಾಗ ಅವು ಕ್ರಿ.ಪೂ. 3,500 ವರ್ಷಗಳ ಹಿಂದಿನ ಸಿಂಧೂ ಬಯಲಿನ ನಾಗರಿಕತೆಯ ಕಾಲಕ್ಕೆ ಸೇರಿದ್ದವು’ ಎಂದು ತಿಳಿದು ಬಂದಿತು’ ಎಂದು ಹೇಳಿದರು.

ಇಲ್ಲಿನ ಸುರಪುರವನ್ನು ಹಿಂದೆ ಸಗರನಾಡು ಎಂದು ಹೇಳಲಾಗುತ್ತಿತ್ತು. ಇದು ಭೀಮಾ ನದಿಯಿಂದ ಕೃಷ್ಣಾ ನದಿಯವರೆಗೆ ಹರಡಿಕೊಂಡಿದೆ. ಇಲ್ಲಿನ ಛಾಯಾ ಭಗವತಿ ಪ್ರದೇಶವು ಸೂರ್ಯದೇವನಿಗೆ ಇಷ್ಟವಾದ ಪ್ರದೇಶ. ಹೀಗಾಗಿ ಇಲ್ಲಿ ಬಿಸಿಲಿನ ತಾಪ ತುಸು ಹೆಚ್ಚಿರುತ್ತದೆ ಎಂದರು.

’ಸನ್ನತಿಯು ಈ ಹಿಂದೆ ಫಲವತ್ತಾದ ಭೂ ಪ್ರದೇಶವನ್ನು ಹೊಂದಿತ್ತು. ಇದರಿಂದಾಗಿಯೇ ಮೌರ್ಯ ಸಾಮ್ರಾಜ್ಯದ ಅಶೋಕ ಚಕ್ರವರ್ತಿಯು ಇದನ್ನು ತನ್ನ ನಾಲ್ಕನೇ ಸುವರ್ಣಗಿರಿ ರಾಜ್ಯವನ್ನಾಗಿ ಮಾಡಿಕೊಂಡಿದ್ದನು. ಹೀಗಾಗಿ ಸನ್ನತಿಯಲ್ಲಿ ಇಂದಿಗೂ ಅಶೋಕನ ಆಡಳಿತ ಅವಧಿಯ ಶಿಲ್ಪ ಕಲಾಕೃತಿಗಳು ಹಾಗೂ ಬೌದ್ಧ ಧರ್ಮವನ್ನು ಪ್ರತಿಪಾದಿಸುವ ಕಲ್ಲಿನ ಕಲಾಕೃತಿಗಳನ್ನು ಕಾಣಬಹುದು. ಜೊತೆಗೆ ಇಲ್ಲಿನ ಕನಗನಹಳ್ಳಿಯಲ್ಲಿಯೂ 85 ಶಿಲಾಶಾಸನಗಳನ್ನು ಕಾಣಬಹುದು’ ಎಂದು ಹೇಳಿದರು.

ಇಲ್ಲಿನ ಮಣ್ಣಿನಲ್ಲಿಯೇ ಮಡಕೆ, ಕುಡುಕೆಗಳನ್ನು ತಯಾರಿಸಿ ಉತ್ತರ ಭಾರತದ ಪ್ರದೇಶಗಳಲ್ಲಿ ಅವುಗಳನ್ನು ಮಾರಾಟ ಮಾಡಲಾಗುತ್ತಿತ್ತು. ನಂತರ ಬಂದ ರಾಷ್ಟ್ರಕೂಟರ ಕಾಲದಲ್ಲಿ ಈ ಭಾಗವು ಸಾಹಿತ್ಯ, ಕಲೆಯಲ್ಲಿ ಮತ್ತೊಷ್ಟು ಪ್ರಗತಿಯನ್ನು ಕಂಡಿತು. ರಾಷ್ಟ್ರಕೂಟರು ಇಲ್ಲಿನ ಮಾನ್ಯಖೇಟ (ಮಳಖೇಡ) ವನ್ನು ರಾಜಧಾನಿಯನ್ನು ಮಾಡಿಕೊಂಡು ಆಡಳಿತ ನಡೆಸಿದರು. ನೃಪತುಂಗನ ಆಸ್ಥಾನದಲ್ಲಿದ್ದ ಶ್ರೀ ವಿಜಯನು ’ಕವಿರಾಜ ಮಾರ್ಗ’ ಗ್ರಂಥವನ್ನು ರಚಿಸಿ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಅನಾವರಣಗೊಳಿಸಿದನು. ಈ ಬಗ್ಗೆ ಇತಿಹಾಸದಲ್ಲಿ ಉಲ್ಲೇಖವಿದೆ ಎಂದರು.

ನಂತರ ಬಂದ ಕಲ್ಯಾಣ ಚಾಲುಕ್ಯರು 200ಕ್ಕೂ ಅಧಿಕ ದೇವಾಲಯಗಳನ್ನು ಈ ಭಾಗದಲ್ಲಿ ನಿರ್ಮಿಸಿದರು. ದೇವಾಲಯಗಳ ನಗರವೇ ಆಗಿದ್ದ ಕಲಬುರ್ಗಿಯಲ್ಲಿ ಇಂದಿಗೂ ಚಾಲುಕ್ಯರ ಕಾಲದ ಹಲವು ದೇವಾಲಯಗಳನ್ನು ಕಾಣಬಹುದು ಎಂದು ಹೇಳಿದರು.

13ನೇ ಶತಮಾನದಲ್ಲಿ ಇಲ್ಲಿಗೆ ಬಂದ ಬಹಮನಿ ಸುಲ್ತಾನರು ಕಲಬುರ್ಗಿ ನಗರವನ್ನು ಗುಮ್ಮಟಗಳ ನಗರವನ್ನಾಗಿ ಮಾರ್ಪಾಡು ಮಾಡಿದರು. ಇವರ ಕಾಲದಲ್ಲಿಯೇ ಸೂಫಿ ಚಳವಳಿ ಆರಂಭವಾಯಿತು. ಕ್ರಮೇಣ ಸಂತರ, ಶರಣರ ಚಿಂತನೆಗಳು ಅನಾವರಣಗೊಂಡವು. ಆಗ ಈ ಭಾಗವು ಕಲ್ಯಾಣ ನಗರವಾಗಿ ಪರಿವರ್ತನೆಯಾಯಿತು ಎಂದು ತಿಳಿಸಿದರು.

ಕಲಬುರ್ಗಿ ಜಿಲ್ಲೆಯು ಹೀಗೆ ಸುಮಾರು 25 ವರ್ಷಗಳ ಇತಿಹಾಸವನ್ನು ತನ್ನೊಡಲಲ್ಲಿ ಹಾಕಿಕೊಂಡಿದೆ ಎಂದು ಹೇಳಿದರು.

ಡಾ.ಶಶಿಶೇಖರ ರೆಡ್ಡಿ ಅವರು, ‘ಪ್ರವಾಸೋಧ್ಯಮ ತಾಣಗಳು ಮತ್ತು ಅಭಿವೃದ್ಧಿ’ ವಿಷಯ ಕುರಿತು ಹಾಗೂ ಡಾ.ಅಮೃತಾ ಕಟಕೆ (ಸಾಹಿತ್ಯ ಮತ್ತು ಸಂಸ್ಕೃತಿ) ಮತ್ತು ರಿಯಾಜ್‌ ಅಹಮ್ಮದ್‌ ಬೋಡೆ ಅವರು, ‘ಭಾವೈಕ್ಯತೆಯ ನೆಲೆಗಳು’ ವಿಷಯಗಳ ಕುರಿತು ಉಪನ್ಯಾಸ ನೀಡಿದರು.

ಪ್ರೊ.ಆರ್‌.ಕೆ.ಹುಡಗಿ ಅಧ್ಯಕ್ಷತೆ ವಹಿಸಿದ್ದರು. ಡಿ.ಎಂ.ನದಾಫ, ನೀಲಕಂಟ ಮುತ್ತಗಿ ಇದ್ದರು.

ಡಾ.ಸೂರ್ಯಕಾಂತ ಪಾಟೀಲ ಸ್ವಾಗತಿಸಿದರು. ಡಾ. ಕಾಶೀಬಾಯಿ ಭೋಗಶೆಟ್ಟಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT