ಕನ್ನಡಿಗರಿಗೆ ನೆಲೆ ಕಳೆದುಕೊಳ್ಳುವ ಆತಂಕ

7
ಗೋವಾದ ವಾಸ್ಕೋ ಬೈನಾದಲ್ಲಿ ಮತ್ತೆ ಕಟ್ಟಡ ತೆರವು ಸಾಧ್ಯತೆ

ಕನ್ನಡಿಗರಿಗೆ ನೆಲೆ ಕಳೆದುಕೊಳ್ಳುವ ಆತಂಕ

Published:
Updated:

ಕಾರವಾರ: ಗೋವಾದ ವಾಸ್ಕೋ ಬಳಿಯ ಬೈನಾ ಕಡಲತೀರದಲ್ಲಿ ನಿರ್ಮಿಸಲಾಗಿರುವ ಮನೆಗಳು ಅಕ್ರಮ ಎಂದು ರಾಷ್ಟ್ರೀಯ ಹಸಿರು ಪೀಠ ತೀರ್ಪು ನೀಡಿರುವುದು ಅಲ್ಲಿನ ಕನ್ನಡಿಗರ ಆತಂಕಕ್ಕೆ ಕಾರಣವಾಗಿದೆ.

ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಗೋವಾ ಸರ್ಕಾರವು ಮತ್ತೆ ತೆರವು ಕಾರ್ಯಾಚರಣೆ ಆರಂಭಿಸುವ ಸಾಧ್ಯತೆಯಿದೆ. ಹೀಗಾಗಿ ತಮ್ಮ ಹಿತರಕ್ಷಣೆ ಮಾಡಲು ಮಧ್ಯಪ್ರವೇಶ ಮಾಡಬೇಕು ಎಂದು ಅಲ್ಲಿನ ಕನ್ನಡಿಗರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಶನಿವಾರ ಮನವಿ ಮಾಡಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ ಅಖಿಲ ಗೋವಾ ಕನ್ನಡ ಮಹಾಸಂಘದ ಅಧ್ಯಕ್ಷ ಹನುಮಂತಪ್ಪ ರೆಡ್ಡಿ, ‘ನಮ್ಮ ಮನೆಗಳನ್ನು ತೆರವು ಮಾಡದಂತೆ ಗೋವಾ ಸರ್ಕಾರದ ಮನವೊಲಿಕೆ ಮಾಡಬೇಕು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ್ದೇವೆ. ಈ ಸಂಬಂಧ ನಾವು ಬೆಂಗಳೂರಿಗೆ ತೆರಳಿದ್ದೆವು. ಆದರೆ, ಅವರ ಭೇಟಿಗೆ ಪೂರ್ವಾನುಮತಿ ತೆಗೆದುಕೊಂಡಿರಲಿಲ್ಲ. ಹೀಗಾಗಿ ಕಚೇರಿಯ ಸಿಬ್ಬಂದಿಗೆ ಮನವಿ ಪತ್ರ ನೀಡಿದ್ದೇವೆ’ ಎಂದರು.

‘ಹಸಿರುಪೀಠದ ಆದೇಶದ ಕಾರಣ ಗೋವಾ ಸರ್ಕಾರವು ನಮ್ಮ ಮನೆಗಳನ್ನು ಯಾವ ಕ್ಷಣದಲ್ಲಾದರೂ ಒಡೆಯಬಹುದು. ಇದರಿಂದ 121 ಮನೆಗಳು ನೆಲಸಮವಾಗಲಿವೆ. ನಾವು ನ್ಯಾಯಾಲಯದ ತೀರ್ಪನ್ನು ಪಾಲಿಸಲು ಸಿದ್ಧರಿದ್ದೇವೆ. ಆದರೆ, ಸೂಕ್ತ ಪುನರ್ವಸತಿ ವ್ಯವಸ್ಥೆ ಮಾಡಬೇಕು ಎಂಬುದಷ್ಟೇ ನಮ್ಮ ಬೇಡಿಕೆಯಾಗಿದೆ. 2004ರಿಂದ ಈಚೆಗೆ ಗೋವಾ ಸರ್ಕಾರ ತೆರವು ಮಾಡಿದ ಸಾವಿರಾರು ಕುಟುಂಬಗಳಿಗೆ ಪುನರ್ವಸತಿ ವ್ಯವಸ್ಥೆ ಕಲ್ಪಿಸಿಲ್ಲ’ ಎಂದು ದೂರಿದರು.

ಬೈನಾದಲ್ಲಿರುವ ಮನೆಗಳನ್ನು ತೆರವು ಮಾಡುವುದಾಗಿ ಗೋವಾ ಸರ್ಕಾರ ನೋಟಿಸ್ ನೀಡಿದ್ದಾಗ ಅಲ್ಲಿನ ಕನ್ನಡಿಗರು ನ್ಯಾಯಾಲಯದ ಮೊರೆ ಹೋಗಿದ್ದರು. ಇದರ ವಿಚಾರಣೆ ಮಾಡಿದ್ದ ಹಸಿರುಪೀಠವು, ಬೈನಾ ಕಡಲತೀರವು ಅಭಿವೃದ್ಧಿಗೆ ಒಳಪಡದ ಪ್ರದೇಶವಾಗಿದೆ (ನೋ ಡೆವಲಪ್‌ಮೆಂಟ್ ಝೋನ್). ಹೀಗಾಗಿ ಅಲ್ಲಿ ಕಟ್ಟಡಗಳ ನಿರ್ಮಾಣ ನಿಯಮಕ್ಕೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !