ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಆತಿಥ್ಯ ವಲಯಕ್ಕೆ ಕೊರೊನಾ ಪೆಟ್ಟು, ಸುಧಾರಣೆಗೆ ವರ್ಷಗಳೇ ಬೇಕು

ಪ್ರವಾಸೋದ್ಯಮವನ್ನೇ ನಂಬಿಕೊಂಡವರಿಗೆ ಭವಿಷ್ಯದ ಚಿಂತೆ
Last Updated 13 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಕಾರವಾರ: ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಉತ್ತರ ಕನ್ನಡದಲ್ಲಿ ಪ್ರತಿ ವರ್ಷ ಏಪ್ರಿಲ್ ತಿಂಗಳಿನಲ್ಲಿ ಹೆಚ್ಚಿನ ಲವಲವಿಕೆ ಇರುತ್ತಿತ್ತು. ಆದರೆ, ಈ ವರ್ಷ ಕೊರೊನಾ ವೈರಸ್‌ ಕಾರಣದಿಂದ ಯಾತ್ರಿ ತಾಣಗಳು ಭಣಗುಟ್ಟುತ್ತಿವೆ.‍ ಪ್ರವಾಸೋದ್ಯಮವನ್ನೇ ನಂಬಿರುವವರು ಚಿಂತಿತರಾಗಿದ್ದಾರೆ.

ಜನವರಿ, ಫೆಬ್ರುವರಿಯಲ್ಲಿದೇಶದ ವಿವಿಧೆಡೆ ಕೊರೊನಾ ವೈರಸ್ ಪ್ರಕರಣಗಳು ಕಂಡುಬಂದಿದ್ದರೂ ರಾಜ್ಯದಲ್ಲಿ ಅದರ ಪರಿಣಾಮ ಆ ಅವಧಿಯಲ್ಲಿ ಅಷ್ಟಾಗಿ ಆಗಿರಲಿಲ್ಲ. ಹಾಗಾಗಿ, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಜಿಲ್ಲೆಯಲ್ಲಿ ಈ ವರ್ಷದ ಮೊದಲ ಮೂರು ತಿಂಗಳು ಪ್ರವಾಸಿಗರ ಸಂಖ್ಯೆ ಹೆಚ್ಚಿತ್ತು. ಇದು ಪ್ರವಾಸೋದ್ಯಮಕ್ಕೆ ಆಶಾದಾಯಕವಾಗಿತ್ತು. ಆದರೆ, ಕೊರೊನಾ ವೈರಸ್ ವ್ಯಾಪಕವಾಗಿ ಹರಡಿದ ಪರಿಣಾಮದೇಶದೆ‌ಲ್ಲೆಡೆಲಾಕ್‌ಡೌನ್‌ನಂತಹ ಕ್ರಮಗಳು ಜಾರಿಯಾಗಿ ಎಲ್ಲ ಚಟುವಟಿಕೆಗಳೂ ನಿಂತವು.

ಎರಡು ವರ್ಷಗಳಾದರೂ ಬೇಕು:‘ಕೊರೊನಾ ವೈರಸ್ ಈಗ ನೀಡಿರುವ ಹೊಡೆತದಿಂದ ಸುಧಾರಿಸಿಕೊಳ್ಳಲು ಕನಿಷ್ಠವೆಂದರೂ ಎರಡು ವರ್ಷಗಳಾದರೂ ಬೇಕು. ಲಾಕ್‌ಡೌನ್ ಅವಧಿ ಮುಗಿದು ಎಲ್ಲ ನಿರ್ಬಂಧಗಳನ್ನು ತೆರವು ಮಾಡಿದ ಬಳಿಕ ಪ್ರವಾಸಿಗರು ಬರಲು ಆರಂಭಿಸಬಹುದು. ಆದರೆ, ಅವರ ಮತ್ತು ಪ್ರವಾಸೋದ್ಯಮ ನಡೆಸುವವರಲ್ಲಿ ಕೊರೊನಾ ವೈರಸ್ ಇಲ್ಲ ಎಂದು ಸಾಬೀತಾಗಿ ಪರಸ್ಪರ ನಂಬಿಕೆ ಮೂಡಿಸುವುದೇ ದೊಡ್ಡ ಸವಾಲಾಗಲಿದೆ’ ಎನ್ನುತ್ತಾರೆ ಜೊಯಿಡಾದ ಕಾಡುಮನೆ ಹೋಮ್‌ಸ್ಟೇ ಮಾಲೀಕ ನರಸಿಂಹ ಭಟ್ ಛಾಪಖಂಡ.

‘ಕೊರೊನಾ ಆಘಾತದಿಂದ ಬೇರೆ ಕೈಗಾರಿಕೆಗಳು ಸುಧಾರಿಸಿಕೊಳ್ಳಬಹುದು. ಆದರೆ, ಪ್ರವಾಸೋದ್ಯಮದವಾತಾವರಣ ಹಾಗಿಲ್ಲ. ಎಷ್ಟೇ ರಿಯಾಯ್ತಿ ಕೊಟ್ಟು ಕರೆದರೂ ಪ್ರವಾಸ ಬರಲು ಜನರು ಸದ್ಯಕ್ಕೆ ಮನಸ್ಸು ಮಾಡುವುದು ಅನುಮಾನ. ಕಾಡುಮನೆಯದ್ದೇ ಉದಾಹರಣೆ ನೋಡುವುದಾದರೆ, ಈ ಮೂರು ತಿಂಗಳಿಗೆ ಕೊಠಡಿಗಳು ಶೇ 80ರಷ್ಟು ಬುಕಿಂಗ್ ಆಗಿದ್ದವು. ಕೊರೊನಾ ಕಾರಣದಿಂದ ಎಲ್ಲರಿಗೂ ಹಣವಾಪಸ್ ಮಾಡಿ, ಸದ್ಯಕ್ಕೆ ಹೋಮ್‌ಸ್ಟೇ ಮುಚ್ಚಿದ್ದೇವೆ. ಈ ರೀತಿ ಅದೆಷ್ಟು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೋ ಗೊತ್ತಿಲ್ಲ’ಎಂದು ಬೇಸರಿಸುತ್ತಾರೆ.

‘ಮಾರ್ಚ್‌, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಅತಿ ಹೆಚ್ಚು ನಡೆಯುತ್ತವೆ. ದಾಂಡೇಲಿಗೆ ಮಹಾರಾಷ್ಟ್ರ, ಕೇರಳ ಮತ್ತು ಬೆಂಗಳೂರಿನಿಂದಜಾಸ್ತಿಅತಿಥಿಗಳು ಬರುತ್ತಾರೆ. ಆದರೆ, ಅಂತರರಾಜ್ಯ ಗಡಿಗಳನ್ನು ಮುಚ್ಚಲಾಗಿದೆ. ಇವೆಲ್ಲದರ ನೇರ ಪರಿಣಾಮಆತಿಥ್ಯ ವಲಯಕ್ಕಾಗಿದೆ. ಇದನ್ನೇ ನಂಬಿಕೊಂಡು ಸಾಲ ಮಾಡಿದವರ ಸ್ಥಿತಿ ಯಾರಿಗೂ ಬೇಡ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ.

ಸರಾಸರಿ ₹ 5 ಸಾವಿರ ವ್ಯಯ:ಜಿಲ್ಲೆಗೆ ಭೇಟಿ ನೀಡುವ ಪ್ರತಿ ಪ್ರವಾಸಿಗ ಒಂದು ಅಂದಾಜಿನ ಪ್ರಕಾರ ಸರಾಸರಿ ₹ 5 ಸಾವಿರವನ್ನು ವ್ಯಯಿಸುತ್ತಾನೆ. ಇದರಲ್ಲಿ ವಸತಿ, ಊಟ, ಪ್ರಯಾಣ, ಜಲಕ್ರೀಡೆಗಳು, ಖರೀದಿಮುಂತಾದ ಎಲ್ಲವೂ ಒಳಗೊಂಡಿವೆ. ಆದರೆ, ಎರಡು ತಿಂಗಳಿನಿಂದ ಪ್ರವಾಸೋದ್ಯಮ ಚಟುವಟಿಕೆ ಸಂಪೂರ್ಣ ಸ್ಥಗಿತವಾದ ಕಾರಣ ಆಗಿರುವ ನಷ್ಟವನ್ನು ಊಹಿಸಲೂ ಸಾಧ್ಯವಿಲ್ಲ ಎನ್ನುತ್ತಾರೆ ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಉಪ ನಿರ್ದೇಶಕ ಪುರುಷೋತ್ತಮ.

ಜಿಲ್ಲೆಗೆ ಪ್ರವಾಸಿಗರು: ಅಂಕಿ ಅಂಶ

* 23.28 ಲಕ್ಷ - ಜನವರಿಯಿಂದ ಮಾರ್ಚ್‌ವರೆಗೆ ಬಂದ ಪ್ರವಾಸಿಗರು

* 16.61 ಲಕ್ಷ - ಕಳೆದ ವರ್ಷಮಾರ್ಚ್‌ವರೆಗೆಪ್ರವಾಸಿಗರ ಸಂಖ್ಯೆ

* 3.08 ಲಕ್ಷ - ಈ ವರ್ಷ ಮಾರ್ಚ್‌ನಲ್ಲಿಭೇಟಿ ನೀಡಿದವರು

* 5.52 ಲಕ್ಷ - ಕಳೆದ ವರ್ಷ ಮಾರ್ಚ್‌ನಲ್ಲಿಬಂದ ಪ್ರವಾಸಿಗರು

* ಆಧಾರ: ಪ್ರವಾಸೋದ್ಯಮ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT