ಶನಿವಾರ, ಮೇ 21, 2022
28 °C
ಪೂರ್ಣ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಾರದ ಮಾವಿನ ಹಣ್ಣು; ಫಸಲು ವಿಳಂಬ

ಮಾರುಕಟ್ಟೆಗೆ ಬರಲು ಸಜ್ಜಾದ ‘ಕರಿ ಇಶಾಡ್’

ದೇವರಾಜ ನಾಯ್ಕ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಅಂಕೋಲಾ ತಾಲ್ಲೂಕಿನ ಮಾವಿನ ವಿಶೇಷ ತಳಿ ಕರಿ ಇಶಾಡ್, ಇನ್ನೇನು ಕೆಲವೇ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ. 

ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿಯೂ ಬೇಡಿಕೆ ಹೊಂದಿರುವ ಕರಿ ಇಶಾಡ್, ಸುವಾಸನೆ ಭರಿತ ಹಾಗೂ ವಿಶೇಷ ರುಚಿಯನ್ನು ಹೊಂದಿದೆ. ಅಂಕೋಲಾದ ಸುತ್ತಮುತ್ತಲಿನ ಹಳ್ಳಿಗಳಾದ ಪೂಜಗೇರಿ, ಹೊಸಗದ್ದೆ, ಶಿರೂರು, ಬಾಸಗೊಡ, ಬೆಳಂಬಾರ ಮುಂತಾದ ಕಡೆಗಳಲ್ಲಿ ಈ ಹಣ್ಣನ್ನು ಬೆಳೆಯಲಾಗುತ್ತದೆ.

ಈ ಬಾರಿ ಇಶಾಡ್‌ನ ಫಸಲು ಬಹಳ ವಿಳಂಬವಾಗಿದೆ. ಸಾಮಾನ್ಯವಾಗಿ ಏಪ್ರಿಲ್‌ ಅಂತ್ಯದಲ್ಲೇ ಮಾರುಕಟ್ಟೆಗೆ ಬರುತ್ತಿದ್ದ ಹಣ್ಣು, ಮೇ ತಿಂಗಳು ಆರಂಭವಾಗಿ ಒಂದು ವಾರ ಕಳೆದರೂ ಅಷ್ಟಾಗಿ ಕಾಣುತ್ತಿಲ್ಲ. ‘ಇಶಾಡ್ ಹೂವು ಬಹಳ ವಿಳಂಬವಾಗಿ ಬಿಟ್ಟಿತು. ಅನೇಕ ಕಡೆಗಳಲ್ಲಿ ಇನ್ನೂ ಕಾಯಿಗಳು ಸರಿಯಾಗಿ ಬಲಿತಿಲ್ಲ. ಹೀಗಾಗಿ ಹಣ್ಣುಗಳು ಮಾರುಕಟ್ಟೆಗೆ ಬರಲು ವಿಳಂಬವಾಗಿದ್ದು, ದರವೂ ಹೆಚ್ಚಾಗಿದೆ’ ಎನ್ನುತ್ತಾರೆ ಕಾರವಾರದ ರಸ್ತೆಯ ಬದಿಯಲ್ಲಿ ಹಣ್ಣು ಮಾರಾಟ ಮಾಡುವ ಶಾರದಾ ಗೌಡ.

ಎಲ್ಲವೂ ವಾಣಿಜ್ಯೀಕರಣ: ‘ಈ ಹಿಂದೆ ಕರಿ ಇಶಾಡ್ ಬೆಳೆಯುವವರ ಸಂಖ್ಯೆ ಹೆಚ್ಚಿತ್ತು. ಈ ತಳಿಗೂ ಒಂದು ಗತ್ತು ಇತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಎಲ್ಲವೂ ವಾಣಿಜ್ಯೀಕರಣ ಆಗಿದೆ. ಹೀಗಾಗಿ ಆ ಗತ್ತು ಕಡಿಮೆ ಆಗುತ್ತಿದೆ’ ಎಂದು ಬೇಸರಿಸುತ್ತಾರೆ ತೋಟಗಾರಿಕೆ ಇಲಾಖೆಯ ಅಧಿಕಾರಿಯೊಬ್ಬರು.

‘ಕಳೆದ ಬಾರಿ ನಡೆದ ಸಮೀಕ್ಷೆಯ ಪ್ರಕಾರ ಅಂಕೋಲಾ ತಾಲ್ಲೂಕು ವ್ಯಾಪ್ತಿಯ 740 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಇದರಲ್ಲಿ ಕರಿ ಇಶಾಡ್‌ ಜತೆಗೆ ಅಲ್ಫಾನ್ಸೊ, ಆಪೂಸ್ ಸೇರಿದಂತೆ ವಿವಿಧ ತಳಿಯ ಹಣ್ಣುಗಳೂ ಸೇರಿವೆ’ ಎಂದು ಅಂಕೋಲಾದ ಸಹಾಯಕ ತೋಟಗಾರಿಕೆ ಅಧಿಕಾರಿ ಚೇತನ್ ನಾಯ್ಕ.

ನೈಸರ್ಗಿಕವಾಗಿ ಮಾಗಿಸುವ ವಿಧಾನ: ಹಾಲಕ್ಕಿ ಸಮಾಜದವರೇ ಹೆಚ್ಚಾಗಿ ಬೆಳೆಯುವ ಹಾಗೂ ಮಾರಾಟ ಮಾಡುವ ಈ ಹಣ್ಣನ್ನು ಅವರು ನೈಸರ್ಗಿಕವಾಗಿ ಮಾಗಿಸುತ್ತಾರೆ. ಹುಲ್ಲುಗಳಲ್ಲಿ ಕಾಯಿಗಳನ್ನು ಇಟ್ಟು, ಅವುಗಳು ಹಣ್ಣಾದ ಬಳಿಕ ಅದನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡಲಾಗುತ್ತದೆ. ಇಲ್ಲಿ ಯಾವುದೇ ರಾಸಾಯನಿಕವನ್ನು ಬಳಕೆ ಮಾಡುವುದಿಲ್ಲ. ಹೀಗಾಗಿ ಈ ಹಣ್ಣಿಗೆ ಬೇಡಿಕೆ ಹೆಚ್ಚು. ಎರಡು ವರ್ಷಗಳವರೆಗೆ ಶೇಖರಿಸಿಡಲು ಬರುವ ಮಾವಿನ ‘ಪಲ್ಪ್‌’ ಅನ್ನು ಅಂಕೋಲಾ ಸಮೀಪದ ಹಿಚ್ಕಡ ತಯಾರಿಕಾ ಘಟಕದಲ್ಲಿ ತಯಾರಿಸಲಾಗುತ್ತದೆ. ಇದು ಕೂಡ ವಿವಿಧೆಡೆ ರಫ್ತಾಗುತ್ತದೆ.

‘ಜಿ.ಐ ಮಾನ್ಯತೆ’ ಪಡೆಯುತ್ತಾ ಇಶಾಡ್?: ಕೆಲವೊಂದು ಉತ್ಪನ್ನಗಳು ಅವರು ಉತ್ಪಾದನೆಯಾಗುವ ಭೌಗೋಳಿಕ ಸ್ಥಳದಿಂದ ಗುರುತಿಸಲಾಗುತ್ತದೆ. ಅವುಗಳ ಗುಣಲಕ್ಷಣಗಳು ಆಯಾ ಸ್ಥಳದ ಮೇಲೆ ನಿರ್ಧಾರಿತವಾಗುತ್ತದೆ. ಅಂಥವುಗಳನ್ನು ಗುರುತಿಸಿ ಪರಂಪರೆಯನ್ನೇ ಮುಂದುವರೆಸುವ ಮತ್ತು ಅದರ ಮಾರುಕಟ್ಟೆ ಬೆಲೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಭೌಗೋಳಿಕ ಸೂಚಿಕೆಯನ್ನು (ಜಿ.ಐ) ಸಿದ್ಧಪಡಿಸಲಾಗುತ್ತದೆ.

ಈ ನಿಟ್ಟಿನಲ್ಲಿ ಅಂಕೋಲಾದ ವಿಶೇಷ ತಳಿ ಕರಿ ಇಶಾಡ್ ಕೂಡ ‘ಜಿ.ಐ ಮಾನ್ಯತೆ’ ಪಡೆಯಲು ಎಲ್ಲ ಅರ್ಹತೆಗಳನ್ನು ಹೊಂದಿದೆ ಎನ್ನುವುದು ಕೂಡ ಕೆಲವರ ವಾದವಾಗಿದೆ. ‘ಜಿ.ಐ ಮಾನ್ಯತೆಗೆ ಒಂದು ಸಂಸ್ಥೆಯಿಂದ ಅರ್ಜಿ ಸಲ್ಲಿಸಬೇಕಿದೆ. ಜತೆಗೆ, 100 ಹೆಕ್ಟೇರ್ ಪ್ರದೇಶದಲ್ಲಿ ಈ ಬೆಳೆಯನ್ನು ಬೆಳೆಯಬೇಕಾಗಿರುತ್ತದೆ. ಇಲಾಖೆಯಿಂದ ಪೂರಕ ಸಹಕಾರ ಎಲ್ಲವನ್ನೂ ನೀಡಲಾಗುತ್ತದೆ. ನಾವೂ ಈ ಬಗ್ಗೆ ಪ್ರಯತ್ನಿಸುತ್ತಿದ್ದೇವೆ’ ಎನ್ನುತ್ತಾರೆ ಚೇತನ್ ನಾಯ್ಕ.

‘ಮಾವು ಮೇಳ’ಕ್ಕೆ ಚಿಂತನೆ: ವಿಶೇಷ ತಳಿ ಕರಿ ಇಶಾಡ್ ಅನ್ನು ಉಳಿಸಿ, ಬೆಳೆಸಿ, ಎಲ್ಲರಿಗೂ ಅದರ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಅಂಕೋಲಾದಲ್ಲಿ ‘ಮಾವು ಮೇಳ’ ಆಯೋಜನೆ ಮಾಡಲು ಚಿಂತನೆ ನಡೆದಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಂಗಳೂರಿನ ಹೇಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಕ್ಯಾಂಪಸ್‌ನಲ್ಲಿ ‘ಮಾವು ಮತ್ತು ಹಲಸು ವೈವಿಧ್ಯ ಮೇಳ’ವು ಇದೇ 28 ಮತ್ತು 29ರಂದು ನಡೆಯಲಿದೆ. 300ಕ್ಕೂ ಅಧಿಕ ತಳಿಯ ಮಾವು ಹಾಗೂ ಹಲಸನ್ನು ಪ್ರದರ್ಶನಗೊಳಿಸಲಾಗುತ್ತಿದೆ. ಅಲ್ಲಿಯೂ ಕರಿ ಇಶಾಡ್‌ ತಳಿಯ ಪ್ರದರ್ಶನ ನಡೆಸುತ್ತಿರುವುದಾಗಿ ಸಂಸ್ಥೆಯ ನಿರ್ದೇಶಕ ದಿನೇಶ್ ಎಂ.ಆರ್ ತಿಳಿಸಿದ್ದಾರೆ. ಅದರ ಜತೆಗೆ, ಜಿಲ್ಲೆಯಲ್ಲಿ ಮೇಳ ನಡೆಸಲು ಮಾವು ಅಭಿವೃದ್ಧಿ ಮಂಡಳಿಯ ಜತೆಗೂ ಮಾತುಕತೆ ನಡೆಸಿದ್ದೇವೆ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು