ಶನಿವಾರ, ಜುಲೈ 31, 2021
24 °C
ಜಿಲ್ಲೆಯ ವಿಶಿಷ್ಟ ಮಾವಿನ ತಳಿಗೆ ಜಾಗತಿಕ ಮಟ್ಟದಲ್ಲಿ ಗುರುತು ನೀಡಲು ಆರಂಭಿಕ ಹೆಜ್ಜೆಗಳು

ಉತ್ತರ ಕನ್ನಡ: ಪಾರಂಪರಿಕ ವೃಕ್ಷವಾಗಿ ಕರಿ ಇಶಾಡ್‌

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಜಿಲ್ಲೆಯ ವಿಶಿಷ್ಟ ‘ಕರಿ ಇಶಾಡ್’ ಮಾವಿನ ತಳಿಯನ್ನು ‘ಪಾರಂಪರಿಕ ವೃಕ್ಷ’ ಎಂದು ರಾಜ್ಯಮಟ್ಟದಲ್ಲಿ ಗುರುತಿಸಲು ಅಂಕೋಲಾದಲ್ಲಿ ಪ್ರಯತ್ನಗಳು ಆರಂಭವಾಗಿವೆ. ತಾಲ್ಲೂಕು ಪಂಚಾಯ್ತಿಯ ಜೀವ ವೈವಿಧ್ಯ ಸಮಿತಿಯು ಈ ಬಗ್ಗೆ ಮೊದಲ ಹೆಜ್ಜೆಗಳನ್ನಿಟ್ಟಿದೆ.

ತಳಿಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ನೀಡಲು ಮತ್ತು ಸಂಪೂರ್ಣ ಅಭಿವೃದ್ಧಿಗೆ ವ್ಯವಸ್ಥಿತ ಕ್ರಮದ ಅಗತ್ಯವಿದೆ. ಅಲ್ಲದೇ ಸ್ಥಳೀಯ ತಳಿಯು ರಾಷ್ಟ್ರ ಹಾಗೂ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯಲು ವಿಶೇಷತೆ ಇರಬೇಕು. ಈ ನಿಟ್ಟಿನಲ್ಲಿ ಅಂಕೋಲಾ ತಾಲ್ಲೂಕು ಪಂಚಾಯ್ತಿಯು ಕರಿ ಇಶಾಡ್ ಮಾವಿನ ತಳಿಯನ್ನು ‘ಪಾರಂಪರಿಕ’ ಎಂದು ಘೋಷಿಸಿ ನಿರ್ಣಯ ತೆಗೆದುಕೊಂಡಿದೆ. ಅಲ್ಲದೇ ರಾಜ್ಯ ಜೀವ ವೈವಿಧ್ಯ ಮಂಡಳಿಯಿಂದಲೂ ಘೋಷಿಸುವಂತೆ ಪ್ರಸ್ತಾವ ಸಲ್ಲಿಕೆಯಾಗಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಪಿ.ವೈ.ಸಾವಂತ, ‘ಕರಿ ಇಶಾಡ್ ಮಾವಿನ ತಳಿಯು ಸ್ಥಳೀಯವಾಗಿ ಬಹಳ ಪ್ರಸಿದ್ಧವಾಗಿದೆ. ಇದರ ಬಗ್ಗೆ ರಾಜ್ಯ, ರಾಷ್ಟ್ರಮಟ್ಟದಲ್ಲೂ ತಿಳಿಯಬೇಕು. ಅದಕ್ಕಾಗಿ ಪಾರಂಪರಿಕ ವೃಕ್ಷವೆಂದು ಘೋಷಿಸಿದ್ದೇವೆ. ನಾವು ಒಂದು ವಾರದ ಹಿಂದೆ ಹಮ್ಮಿಕೊಂಡ ಸಭೆಯಲ್ಲಿ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ಉಪಸ್ಥಿತರಿದ್ದರು. ಹಾಗಾಗಿ ರಾಜ್ಯಮಟ್ಟದಲ್ಲೂ ನಮ್ಮ ಪ್ರಸ್ತಾವಕ್ಕೆ ಮನ್ನಣೆ ಸಿಗುವ ನಿರೀಕ್ಷೆಯಿದೆ’ ಎಂದು ಹೇಳಿದರು.

‘ಸ್ಥಳೀಯ ಮಟ್ಟದಲ್ಲಿ ಸ್ಥಳಗಳು, ತಳಿಗಳನ್ನು ಗುರುತಿಸಿ, ಅವುಗಳಿಗೆ ಮನ್ನಣೆ ನೀಡುವ ಕಾರ್ಯವನ್ನು ಕೇರಳ ಮೊದಲ ಬಾರಿಗೆ ಮಾಡಿತು. ನಮ್ಮ ರಾಜ್ಯದಲ್ಲಿ ಮೊದಲ ಬಾರಿಗೆ ಕೆಲವು ತಿಂಗಳ ಹಿಂದೆ ಸೋಂದಾದ ಮುಂಡಿಗೆ ಕೆರೆಯನ್ನು ಸ್ಥಳೀಯ ಗ್ರಾಮ ಪಂಚಾಯ್ತಿಯವರು ಪಾರಂಪರಿಕ ಎಂದು ಘೋಷಿಸಿದರು. ಅಂಕೋಲಾ ತಾಲ್ಲೂಕು ಪಂಚಾಯ್ತಿಯು ಜಿಲ್ಲೆಯಲ್ಲಿ ಈ ರೀತಿಯ ನಿರ್ಣಯ ಕೈಗೊಂಡ ಎರಡನೇ ಸ್ಥಳೀಯ ಆಡಳಿತವಾಗಿದೆ’ ಎಂದು ಅನಂತ ಹೆಗಡೆ ಅಶೀಸರ ಸಂತಸ ವ್ಯಕ್ತಪಡಿಸಿದರು.

‘ತಲತಲಾಂತರಗಳಿಂದ ಜೊತೆಗೆ ಬಂದ ತಳಿಗಳನ್ನು ಉಳಿಸಿ, ಬೆಳೆಸಿ ಅಭಿವೃದ್ಧಿ ಪಡಿಸುವುದು ಒಂದು ಭಾಗ. ಅದರೊಂದಿಗೇ ಅವುಗಳ ಬಗ್ಗೆ ಅಧ್ಯಯನ ಮಾಡಲು ಅಪಾರ ಅವಕಾಶಗಳಿವೆ. ತೋಟಗಾರಿಕೆ, ಅರಣ್ಯ ಇಲಾಖೆಯವರರು ತಮ್ಮ ನರ್ಸರಿಗಳಲ್ಲಿ ಬೆಳೆಸಬಹುದು. ಸ್ವ ಸಹಾಯ ಸಂಘಗಳು, ಶಾಲಾ ವನಗಳಲ್ಲಿ ನೆಡಬಹುದು. ವಸ್ತು ಪ್ರದರ್ಶನದ ಮಾದರಿಯಲ್ಲಿ ಹಣ್ಣಿನ, ಮರದ ಮಾಹಿತಿ ನೀಡಬಹುದು. ಹಾಗಾಗಿ ಅರಣ್ಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯವರು ನರ್ಸರಿಗಳಲ್ಲಿ ಇದನ್ನು ಬೆಳೆಸುವಂತೆ ಸೂಚನೆ ನೀಡಿದ್ದೇನೆ’ ಎಂದು ಅವರು ಮಾಹಿತಿ ನೀಡಿದರು.

ಏನು ಪ್ರಯೋಜನ?

‘ಪಾರಂಪರಿಕ ತಳಿ’ ಎಂಬ ಹೆಗ್ಗಳಿಕೆ ಪಡೆದುಕೊಳ್ಳುವುದರಿಂದ ಯಾವುದೇ ತಳಿಗಾದರೂ ಜಾಗತಿಕ ಮಟ್ಟದಲ್ಲಿ ಗುರುತು ಸಿಗುತ್ತದೆ. ರಾಜ್ಯದಲ್ಲಿ ಅಡಿಕೆ, ತೆಂಗು, ಮಲ್ಲಿಗೆ, ಅಪ್ಪೆಮಿಡಿ ಮುಂತಾದವುಗಳಿಗೆ ‘ಜಾಗತಿಕ ಗುರುತು’ (ಜಿ.ಐ ಇಂಡಿಕೇಟರ್) ಪಡೆದುಕೊಂಡ ಮಾದರಿಯಲ್ಲೇ ಕರಿ ಇಶಾಡ್ ಮಾವಿ‌ಗೂ ಪಡೆದುಕೊಳ್ಳುವ ಪ್ರಸ್ತಾವ ಸಲ್ಲಿಸಲು ಇದರಿಂದ ಅನುಕೂಲವಾಗಲಿದೆ. ಈ ಎಲ್ಲ ಕಾರ್ಯಕ್ಕೂ ಇದು ಪ್ರಾಥಮಿಕ ಪ್ರಕ್ರಿಯೆ ಆಗಲಿದೆ. 

***

ಎಲ್ಲವನ್ನೂ ರಾಜ್ಯಮಟ್ಟದಲ್ಲಿ ಘೋಷಿಸುವುದು ಕಷ್ಟ. ಆದ್ದರಿಂದ ತಾಲ್ಲೂಕು ಮಟ್ಟದ ಘೋಷಣೆ ಮುಖ್ಯವಾಗುತ್ತದೆ. ಅಂಕೋಲಾ ತಾ.ಪಂ ಸಲ್ಲಿಸಿದ ಪ್ರಸ್ತಾವವನ್ನು ಪರಿಶೀಲಿಸಲಾಗುತ್ತದೆ.

- ಅನಂತ ಹೆಗಡೆ ಅಶೀಸರ, ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು