ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಕ್ಷಗಾನದ ‘ಶಾಸ್ತ್ರೀಯ’ ಕಲಾವಿದ ಇನ್ನಿಲ್ಲ

ಬಡಗು, ತೆಂಕುತಿಟ್ಟಿನಲ್ಲಿ ಪ್ರಸಿದ್ಧರಾಗಿದ್ದ ಕರ್ಕಿ ನಾರಾಯಣ ಹಾಸ್ಯಗಾರ
Last Updated 22 ಜೂನ್ 2020, 16:58 IST
ಅಕ್ಷರ ಗಾತ್ರ

ಹೊನ್ನಾವರ: ಯಕ್ಷಗಾನದ ಶಾಸ್ತ್ರೀಯತೆಯ ಚೌಕಟ್ಟಿನಲ್ಲಿ ಪ್ರೇಕ್ಷಕರಿಗೆ ಮನರಂಜನೆ ನೀಡಬಲ್ಲ ಅಪ್ರತಿಮ ಕಲಾವಿದರ ಕೊಂಡಿ ಸೋಮವಾರ ಕಳಚಿದೆ. ಕರ್ಕಿ ನಾರಾಯಣ ಹಾಸ್ಯಗಾರ (90) ಅವರ ಸುಮಾರು 50 ದಶಕಗಳ ಕಲಾಸೇವೆ ಅಂತ್ಯವಾಗಿದೆ.

ಆಧುನಿಕತೆ ಕಾಲಿಡುವ ಮೊದಲೇ ನಾಡಿನ ಹೊರಗೂ ಯಕ್ಷಗಾನವನ್ನು ಪರಿಚಯಿಸಿದ ಖ್ಯಾತಿಯ ಕರ್ಕಿಹಾಸ್ಯಗಾರ ಕುಟುಂಬದ್ದು. ಹಲವು ಪ್ರಸಿದ್ಧ ಯಕ್ಷಗಾನ ಕಲಾವಿದರು ಈ ಮನೆತನದಲ್ಲಿ ಆಗಿ ಹೋಗಿದ್ದಾರೆ. ಪಿ.ವಿ.ಹಾಸ್ಯಗಾರ, ಸತ್ಯ ಹಾಸ್ಯಗಾರ ಹಾಗೂ ನಾರಾಯಣ ಹಾಸ್ಯಗಾರ ಇಲ್ಲಿನ ಸಮಕಾಲೀನ ಕಲಾವಿದರು. 5 ದಶಕಗಳಿಗೂ ಹೆಚ್ಚು ಕಾಲ ಗೆಜ್ಜೆ ಕಟ್ಟಿ ರಂಗದಲ್ಲಿ ರಂಜಿಸಿದ್ದ ನಾರಾಯಣ ಹಾಸ್ಯಗಾರ, ತಮ್ಮ 89ನೇ ವರ್ಷದಲ್ಲೂ ಬಣ್ಣ ಹಚ್ಚಿ ಪಾತ್ರವೊಂದಕ್ಕೆ ಜೀವ ತುಂಬಿದ್ದರು.

ಇಂದ್ರಜಿತು ಕಾಳಗದ ಲಕ್ಷ್ಮಣ, ಅರ್ಜುನ, ಬಬ್ರುವಾಹನ, ಶಬರಾರ್ಜುನ ಕಾಳಗದ ಶಬರ ಹೀಗೆ ಹಲವು ಪಾತ್ರಗಳಲ್ಲಿ ಅವರು ಛಾಪು ಮೂಡಿಸಿದ್ದರು. ಕುಣಿತ, ಅಭಿನಯ ಹಾಗೂ ಮಾತು ಅವರ ಪಾತ್ರಗಳಲ್ಲಿ ಮೇಳೈಸಿತ್ತು. ಹಾಸ್ಯಗಾರ ಮೇಳ ಎಂದು ಮನೆಮಾತಾಗಿದ್ದ ದುರ್ಗಾಂಬಾಪ್ರಸಾದಿತ ಯಕ್ಷಗಾನ ಮಂಡಳಿಯಲ್ಲಿ ಹೆಚ್ಚಿನ ಕಲಾವಿದರು ಹಾಸ್ಯಗಾರ ಮನೆತನದವರಾಗಿದ್ದರು. ಶುದ್ಧ ಶಾಸ್ತ್ರೀಯ ಶೈಲಿಯ ಯಕ್ಷಗಾನವನ್ನು ಪೋಷಿಸಿಕೊಂಡು ಬಂದಿದ್ದರು.

ಈ ಮೇಳದ ಪ್ರಮುಖ ಕಲಾವಿದರಲ್ಲಿ ಒಬ್ಬರಾಗಿದ್ದ ನಾರಾಯಣ ಹಾಸ್ಯಗಾರ, ಮೇಳದ ಹೊರಗಿನ ಕಲಾವಿದರಾಗಿ ಕೆಲಸ ಮಾಡುವ ಪ್ರಸಂಗ ಬಂದಾಗಲೂ ಯಕ್ಷಗಾನದ ಶಾಸ್ತ್ರೀಯತೆಯನ್ನು ಬಿಟ್ಟಿರಲಿಲ್ಲ. ಮಂಗಳೂರಿನ ಯಕ್ಷಗಾನ ವೃತ್ತಿ ಮೇಳದಲ್ಲಿ ಕೆಲ ಕಾಲ ಕಲಾವಿದರಾಗಿದ್ದರು. ‘ಶೇಣಿ ಪ್ರಶಸ್ತಿ’, ‘ರಾಜ್ಯೋತ್ಸವ ಪ್ರಶಸ್ತಿ’ ಸೇರಿದಂತೆ ಹಲವು ಗೌರವಗಳಿಗೆ ಅವರು ಭಾಜನರಾಗಿದ್ದಾರೆ.

------

ನಾರಾಯಣ ಹಾಸ್ಯಗಾರ ಬಡಗುತಿಟ್ಟಿನ ಶ್ರೇಷ್ಠ ಕಲಾವಿದರು. ಯಕ್ಷಗಾನಲ್ಲಿ ಶುದ್ಧ ಶಾಸ್ತ್ರೀಯತೆಯನ್ನು ನೆಚ್ಚಿಕೊಂಡ ಕೆಲವೇ ಕೆಲವು ಕಲಾವಿದರಲ್ಲಿ ಅವರು ಒಬ್ಬರು.

– ಗೋಪಾಲಕೃಷ್ಣ ಭಟ್ಟ,ಯಕ್ಷಗಾನ ಭಾಗವತರು

––––

ಯಕ್ಷಗಾನದ ಇತಿಹಾಸದಲ್ಲಿ ಕರ್ಕಿ ಹಾಸ್ಯಗಾರ ಮೇಳ ಮೊದಲ ಮೈಲಿಗಲ್ಲು. ಹಿರಿಯ ಕಲಾವಿದ ಪಾರಂಪರಿಕ ನೃತ್ಯ, ವೇಷಗಾರಿಕೆಯ ಅಧಿಕೃತ ದಾಖಲೆಯಂತೆ ಇದ್ದವರು.

–ಡಾ.ಜಿ.ಎಲ್.ಹೆಗಡೆ, ನಿರ್ದೇಶಕ,ಯಕ್ಷಗಾನ ಸಂಶೋಧನಾ ಕೇಂದ್ರ, ಕುಮಟಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT