ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲ್ಲಾಪುರ ವಿಧಾನಸಭಾ ಕ್ಷೇತ್ರ: ಕೊನೆಯ ಸುತ್ತಿನ ಕಸರತ್ತು

ರೋಡ್ ಶೋ, ಕ್ಷೇತ್ರದ ಪ್ರಮುಖರು, ಗಣ್ಯರನ್ನು ಭೇಟಿ ಮಾಡುತ್ತಿರುವ ಅಭ್ಯರ್ಥಿಗಳು
Last Updated 1 ಡಿಸೆಂಬರ್ 2019, 19:31 IST
ಅಕ್ಷರ ಗಾತ್ರ

ಶಿರಸಿ: ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ನಾಲ್ಕು ದಿನಗಳು ಮಾತ್ರ ಬಾಕಿ ಉಳಿದಿವೆ. ಚುನಾವಣೆ ಸಮೀಪಿಸುತ್ತಿದ್ದಂತೆ ಬಹಿರಂಗ ಪ್ರಚಾರ ಕಡಿಮೆ ಮಾಡಿರುವ ರಾಜಕೀಯ ಪಕ್ಷಗಳು, ಗ್ರಾಮಾಂತರ ಪ್ರದೇಶದಲ್ಲಿ ಮತದಾರರನ್ನು ಭೇಟಿ ಮಾಡುವ ಕಾರ್ಯದಲ್ಲಿ ನಿರತವಾಗಿವೆ.

ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಭಾನುವಾರ ದಾಸನಕೊಪ್ಪದಲ್ಲಿ ರೋಡ್ ಶೋ ನಡೆಸಿದರು. ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಪರವಾಗಿ ಭಾಶಿಯಲ್ಲಿ ಶನಿವಾರ ರೋಡ್ ಶೋ ನಡೆಯಿತು. ಎರಡೂ ಪಕ್ಷಗಳು ಎರಡು ಸುತ್ತಿನ ಮನೆ–ಮನೆ ಪ್ರಚಾರ ಪೂರ್ಣಗೊಳಿಸಿವೆ. ಸೋಮವಾರದಿಂದ ಮೂರನೇ ಸುತ್ತಿನ ಮನೆ–ಮನೆ ಪ್ರಚಾರ ಆರಂಭವಾಗಲಿದೆ.

ಚಿಹ್ನೆಯ ಗೊಂದಲ:‘ಪ್ರತಿ ಬೂತ್‌ನಲ್ಲಿ ಚುನಾವಣಾ ಕಾರ್ಯಕ್ಕೆ ರಚಿಸಿರುವ ಸಮಿತಿ ಸಕ್ರಿಯವಾಗಿದೆ. ಪೇಜ್ ಪ್ರಮುಖರು ಅವರಿಗೆ ವಹಿಸಿರುವ 30 ಮತದಾರರನ್ನೊಳಗೊಂಡ ಪಟ್ಟಿಯಲ್ಲಿರುವವರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಮೂರನೇ ಸುತ್ತಿನ ಪ್ರಚಾರ ನಡೆಯುತ್ತಿದೆ. ಶಿವರಾಮ ಹೆಬ್ಬಾರ್ ಬಿಜೆಪಿಯಿಂದ ಸ್ಪರ್ಧಿಸಿದ್ದರೂ, ಅವರ ಚಿಹ್ನೆ ಹಸ್ತ ಎಂದು ಬಿಂಬಿಸುವ ಕಾರ್ಯ ವಿರೋಧ ಪಕ್ಷಗಳಿಂದ ಆಗುತ್ತಿದೆ. ಹೀಗಾಗಿ, ಪ್ರಚಾರದ ಜೊತೆಗೆ ಬ್ಯಾಲೆಟ್ ಪೇಪರ್ ಮಾದರಿಯ ಕರಪತ್ರವನ್ನು ಮತದಾರರಿಗೆ ಕೊಟ್ಟು, ಪಕ್ಷದ ಚಿಹ್ನೆಯ ಬಗ್ಗೆ ಸ್ಪಷ್ಟತೆ ಮೂಡಿಸಲಾಗುತ್ತಿದೆ. ಪ್ರತಿ ಬೂತ್‌ನಲ್ಲಿ 40ರಷ್ಟು ಕಾರ್ಯಕರ್ತರು ಪ್ರಚಾರದಲ್ಲಿ ತೊಡಗಿದ್ದಾರೆ’ ಎಂದು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿರುವ ಜಿಲ್ಲಾ ಪಂಚಾಯ್ತಿ ಸದಸ್ಯೆ ಉಷಾ ಹೆಗಡೆ ಪ್ರತಿಕ್ರಿಯಿಸಿದರು.

’ಬೂತ್ ಮಟ್ಟದ ಸಮಿತಿ ಎರಡನೇ ಸುತ್ತಿನ ಪ್ರಚಾರ ಪೂರ್ಣಗೊಳಿಸಿದೆ. ಪ್ರತಿ ಬೂತ್‌ನಲ್ಲಿ 10 ಜನರ ಸಮಿತಿಗೆ ಒಬ್ಬರು ಸಂಯೋಜಕರು ಕೆಲಸ ಮಾಡುತ್ತಿದ್ದಾರೆ. ತಂಡದಲ್ಲಿ ಹೋಗಿ, ಪ್ರತಿ ಮನೆಯ ಮತದಾರರನ್ನು ಭೇಟಿ ಮಾಡಿ, ಬ್ಯಾಲೆಟ್ ಪೇಪರ್ ಮಾದರಿಯ ಕರಪತ್ರ, ಹಿಂದಿನ ಸರ್ಕಾರದ ಸಾಧನೆಯ ಮಾಹಿತಿ ನೀಡಿ, ಮತ ಕೇಳುತ್ತಿದ್ದೇವೆ. ಜನರು ಪ್ರತಿಕ್ರಿಯೆ ಕೆಲಸ ಮಾಡಲು ಉತ್ಸಾಹ ನೀಡುತ್ತಿದೆ’ ಎಂದು ಕಾಂಗ್ರೆಸ್ ಕಾರ್ಯಕರ್ತೆ ಜ್ಯೋತಿ ಗೌಡ ಹೇಳಿದರು.

ಪ್ರತಿ ಜಿಲ್ಲಾ ಪಂಚಾಯ್ತಿ ಕ್ಷೇತ್ರದಲ್ಲಿ ಸಭೆ ನಡೆಸಿರುವ ಅಭ್ಯರ್ಥಿಗಳು, ಪ್ರಚಾರ ಹೋದ ಸಂದರ್ಭದಲ್ಲಿ ಆಯಾ ಭಾಗದ ಗಣ್ಯರನ್ನು ಭೇಟಿ ಮಾಡಿ ಮತಯಾಚಿಸುತ್ತಿದ್ದಾರೆ. ಆಪ್ತರ ಮನೆಗೆ ಮನೆಗೆ ಹೋಗಿ ಸುತ್ತಮುತ್ತಲಿನ ಜನರನ್ನು ಸೇರಿಸಿಕೊಂಡು ಸೌಹಾರ್ದಯುತವಾಗಿ ಮಾತನಾಡಿ, ಅವರ ವಿಶ್ವಾಸ ಗಳಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT