ಮಂಗಳವಾರ, ಸೆಪ್ಟೆಂಬರ್ 28, 2021
22 °C

ಆತ್ಮಸಾಕ್ಷಿಗೆ ಅನುಸಾರವಾಗಿ ತೀರ್ಮಾನ ಕೈಗೊಳ್ಳುತ್ತೇನೆ: ಸಚಿವ ಆನಂದ್‌ ಸಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲ್ಲಾಪುರ: ‘ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ನನ್ನ ಪಾತ್ರದ ಬಗ್ಗೆ ಅನೇಕರು ಟೀಕೆ ಮಾಡಬಹುದು. ನಾನು ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲಾರೆ. ನನ್ನ ಆತ್ಮ ಸಾಕ್ಷಿಗನುಸಾರ ತೀರ್ಮಾನ ಕೈಗೊಳ್ಳುತ್ತೇನೆ’ ಎಂದು ಪರಿಸರ ಮತ್ತು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್ ಹೇಳಿದರು.

ಪಟ್ಟಣದ ಸಂತೋಷ ಗುಡಿಗಾರ್ ಸಹೋದರರ ‘ಬಿಕ್ಕು ಗುಡಿಗಾರ ಕಲಾ ಕೇಂದ್ರ’ದಲ್ಲಿ, ರಾಜನಳ್ಳಿಯ ವಾಲ್ಮೀಕಿ ಆಶ್ರಮಕ್ಕಾಗಿ ನಿರ್ಮಾಣಗೊಳ್ಳುತ್ತಿರುವ ಬೃಹತ್ ರಥದ ನಿರ್ಮಾಣವನ್ನು ಮಂಗಳವಾರ ವೀಕ್ಷಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಶಿರಸಿಯಲ್ಲಿ ವಿಧಾನಸಭೆ ಅಧ‌್ಯಕ್ಷರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಲು ಬಂದಿದ್ದೇನೆ ಎನ್ನುವುದು ಊಹಾಪೋಹದ ಸಂಗತಿ. ವಾಪಸ್ ಇಲ್ಲಿಂದಲೇ ಹೊಸಪೇಟೆಗೆ ತೆರಳುತ್ತಿದ್ದೇನೆ. ಬೇಕಾದರೆ ನನ್ನನ್ನು ಹಿಂಬಾಲಿಸಿ ಖಚಿತಪಡಿಸಿಕೊಳ್ಳಬಹುದು’ ಎಂದರು.

‘ಪ್ರಸ್ತುತ ರಾಜಕೀಯ ಸನ್ನಿವೇಷದ ಕಾರಣ ನೀವೆಲ್ಲ ಮಾಧ್ಯಮದವರು ಕಾಯುತ್ತಿದ್ದೀರಿ. ನಾನು ಸಾಮಾನ್ಯನಾಗಿ ಬಂದಿದ್ದರೆ ನೀವು ನನಗಾಗಿ ಕಾಯುತ್ತಿರಲಿಲ್ಲ’ ಎಂದು ನಗೆ ಚಟಾಕಿ ಹಾರಿಸಿದ ಆನಂದ ಸಿಂಗ್, ‘ನಾನು ಇಲ್ಲಿ ರಥದ ನಿರ್ಮಾಣದ ಪರಿಶೀಲನೆಗಾಗಿ ಮಾತ್ರ ಬಂದಿದ್ದೇನೆ. ಯಾವುದೇ ರಾಜಕೀಯ ಹೇಳಿಕೆ ನೀಡಲಾರೆ’ ಎಂದರು.

'ರಾಜನಳ್ಳಿಯ ವಾಲ್ಮೀಕಿ ಆಶ್ರಮದ  ಪ್ರಸನ್ನಾನಂದ ಸ್ವಾಮೀಜಿ ರಾಜ್ಯದಲ್ಲೇ ದೊಡ್ಡದಾದ ರಥದ ನಿರ್ಮಾಣದ ಪ್ರಸ್ತಾಪ ಇಟ್ಟು, ನಿಮ್ಮ ಸಹಕಾರ ಬೇಕು ಎಂದರು. ರಾಮನ ಅನುಗ್ರಹದಿಂದ ಇದು ನನ್ನ ಪಾಲಿಗೆ ಬಂದಿದೆ ಎಂದುಕೊಂಡು ಸಂತೋಷದಿಂದ ಒಪ್ಪಿಕೊಂಡೆ. ಈ ಕಾರ್ಯದಲ್ಲಿ ಸಮುದಾಯದವರ, ಸಾರ್ವಜನಿಕರ ಸಹಕಾರವನ್ನೂ ಪಡೆದುಕೊಳ್ಳೋಣ. ಇನ್ನು ರಥದ ನಿರ್ಮಾಣ ಪೂರ್ಣಗೊಳ್ಳುವ ಜವಾಬ್ದಾರಿ ನನಗಿರಲಿ ಎಂದು ಸ್ವಾಮೀಜಿಯವರಲ್ಲಿ ತಿಳಿಸಿದ್ದೆ. ಅದರಂತೆ ಒಂದು ವರ್ಷದ ಹಿಂದೆ ರಥದ ನಿರ್ಮಾಣ ಆರಂಭಗೊಂಡಿದೆ. ಅಂದಿನಿಂದಲೂ ಬರಬೇಕು ಎಂದುಕೊಳ್ಳುತ್ತಿದ್ದೆ. ಈಗ ಸಮಯ ಕೂಡಿ ಬಂದಿದೆ. ಹೊರತು ಇನ್ಯಾವುದೇ ರಾಜಕೀಯ ಕಾರಣವಿಲ್ಲ' ಎಂದು ಸ್ಪಷ್ಟಪಡಿಸಿದರು.

ಬಿಕ್ಕು ಗುಡಿಗಾರ ಕಲಾಕೇಂದ್ರದ ಸಹೋದರರಾದ ಸಂತೋಷ ಗುಡಿಗಾರ್, ಅರುಣ ಗುಡಿಗಾರ, ಆದಿತ್ಯ ಗುಡಿಗಾರ, ಅಣ್ಣಪ್ಪ ಗುಡಿಗಾರ್ ಅವರು ಸಚಿವ ಆನಂದ ಸಿಂಗ್ ಅವರಿಗೆ ಕಲಾಕೃತಿ ನೀಡಿ, ಶಾಲು ಹೊದಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ರಾಜನಳ್ಳಿ ವಾಲ್ಮೀಕಿ ಆಶ್ರಮದ ಪ್ರಸನ್ನಾನಂದ ಪುರಿ ಸ್ವಾಮೀಜಿ, ಧರ್ಮದರ್ಶಿ ಜಂಬಯ್ಯ ನಾಯಕ, ಪ್ರಮುಖರಾದ ಸಂದೀಪ ಸಿಂಗ್, ಟಿ. ಈಶ್ವರ, ಮಲ್ಲಿಕಾರ್ಜುನ ಮುಂತಾದವರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು