ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ ಜಿಲ್ಲೆಯಲ್ಲಿ ಭಾರಿ ಮಳೆ, ಪ್ರವಾಹ | ರಸ್ತೆಯ ದುರವಸ್ಥೆಗೆ ಹೈರಾಣಾದ ಜನ

ಹಾಳಾದ ಹೆದ್ದಾರಿಗಳು: ತಿಂಗಳಾದರೂ ದುರಸ್ತಿಯ ಸುಳಿವಿಲ್ಲ
Last Updated 17 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯಲ್ಲಿ ನೆರೆ ಮತ್ತು ಪ್ರವಾಹದಿಂದ ರಸ್ತೆಗಳು ಇನ್ನಿಲ್ಲದಂತೆ ಹಾನಿಗೀಡಾಗಿವೆ. ಜನಜೀವನ ಸಹಜ ಸ್ಥಿತಿಗೆ ಬಂದು ಒಂದು ತಿಂಗಳಾದರೂ ರಸ್ತೆಗಳ ಸ್ಥಿತಿ ಸ್ವಲ್ಪವೂ ಸುಧಾರಿಸಿಲ್ಲ. ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಜೊಯಿಡಾ, ಕಾರವಾರ, ಕುಮಟಾ ತಾಲ್ಲೂಕುಗಳಲ್ಲಿ ಹೆದ್ದಾರಿ ಮತ್ತು ಜಿಲ್ಲಾ ಪ್ರಮುಖ ರಸ್ತೆಗಳಿಗೆ ಅತಿ ಹೆಚ್ಚು ಹಾನಿಯಾಗಿದೆ. ಘಟ್ಟ ಪ್ರದೇಶದಲ್ಲಿ ಸಾಗುವ ಹೆದ್ದಾರಿಗಳಲ್ಲಂತೂ ದೊಡ್ಡ ದೊಡ್ಡ ಹೊಂಡಗಳಾಗಿ ವಾಹನ ಸಂಚಾರ ದುಸ್ತರವಾಗಿದೆ. ಚಾಲಕರಿಗೆ ಒಂದು ರೀತಿಯ ಸವಾಲಾದರೆ, ಪ್ರಯಾಣಿಕರಿಗೆ ಗಟ್ಟಿಯಾಗಿ ಹಿಡಿದುಕೊಂಡುಕುಳಿತುಕೊಳ್ಳುವುದೇ ದೊಡ್ಡ ಸಮಸ್ಯೆಯಾಗಿದೆ.

‘ತಡಸ– ಕುಮಟಾ ರಾಜ್ಯ ಹೆದ್ದಾರಿಯಲ್ಲಿ ದೇವಿಮನೆ ಘಟ್ಟ, ಶಿರಸಿ ಸಮೀಪದ ನೀಲೇಕಣಿ ಭಾಗದಲ್ಲಿ ವಾಹನ ಚಾಲನೆ ಮಾಡಲಾಗುತ್ತಿಲ್ಲ. ಈ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡ್ತಾರಂತೆ. ಹಾಗಾಗಿ ಯಾರೂ ತಾತ್ಕಾಲಿಕ ದುರಸ್ತಿಗೂ ಮುಂದಾದಂತೆ ಕಾಣುತ್ತಿಲ್ಲ. ಕಾಮಗಾರಿ ಮುಕ್ತಾಯವಾಗುವ ಮೊದಲೇ ಸುಂಕ ಸಂಗ್ರಹದ ಗೇಟ್‌ಗಳನ್ನು ಮಾತ್ರ ಅಳವಡಿಸುತ್ತಾರೆ. ಆದರೆ, ಸದ್ಯದ ಸ್ಥಿತಿಯ ಸುಧಾರಣೆಗೆ ಯಾರೂ ಗಮನ ಹರಿಸುತ್ತಿಲ್ಲ’ ಎಂದು ಖೂರ್ಸೆಯ ಕಾರುಚಾಲಕ ವೆಂಕಟೇಶ ನಾಯ್ಕ ಅಸಮಾಧಾನ ವ್ಯಕ್ತಪಡಿಸಿದರು.

ಮುಂಡಗೋಡ ಭಾಗದಲ್ಲಿ ಹದಗೆಟ್ಟಿರುವ ರಸ್ತೆಯನ್ನು ದುರಸ್ತಿ ಮಾಡಿ ಎಂದು ಹಲವರುಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದಾರೆ. ತಮ್ಮ ಭಾಗದ ಜನಪ್ರತಿನಿಧಿಗಳಿಗೆ ಟ್ಯಾಗ್ ಮಾಡಿ ಗಮನ ಸೆಳೆಯುವ ಪ್ರಯತ್ನದಲ್ಲಿದ್ದಾರೆ. ಆದರೂ ಸೂಕ್ತ ರೀತಿಯ ಸ್ಪಂದನೆ ಸಿಗುತ್ತಿಲ್ಲ ಎಂಬ ಬೇಸರ ಜನರದ್ದಾಗಿದೆ.

‘ರಸ್ತೆ ದುರಸ್ತಿಯಾಗದೇ ವಾಹನ ನಿರ್ವಹಣೆ ಕಷ್ಟವಾಗುತ್ತಿದೆ. ಟಾಪ್ ಗೇರ್‌ನಲ್ಲಿ ವಾಹನಗಳು ಹೋಗದಿದ್ದರೆ ಇಂಧನ ಹೆಚ್ಚು ಖರ್ಚಾಗುತ್ತದೆ. ಜೊತೆಗೇ ವಾಹನಗಳ ಬಿಡಿಭಾಗಗಳೂ ಬೇಗ ಸವೆದು ದುರಸ್ತಿಗೆ ಬರುತ್ತವೆ. ಇದರಿಂದ ಆರ್ಥಿಕ ಹೊರೆಯಾಗುತ್ತದೆ’ ಎನ್ನುವ ಆತಂಕ ಕಾರವಾರದ ಟ್ಯಾಕ್ಸಿ ಚಾಲಕ ರವಿ ನಾಯ್ಕ ಅವರದ್ದಾಗಿದೆ.

ಎಲ್ಲ ರಸ್ತೆಗಳಿಗೂ ಹಾನಿ:

ಕಳೆದ ತಿಂಗಳು ಜಿಲ್ಲೆಯಲ್ಲಿ ಆವರಿಸಿದ್ದ ನೆರೆ ಮತ್ತು ಭಾರಿ ಮಳೆಯಿಂದಾಗಿ ರಸ್ತೆಗಳಿಗೆ ವ್ಯಾಪಕ ಹಾನಿಯಾಗಿದೆ. ವಿವಿಧ ವಿಭಾಗಗಳ ಮತ್ತು ಇಲಾಖೆಗಳವ್ಯಾಪ್ತಿಯಲ್ಲಿ 1,679 ಕಿ.ಮೀ ರಸ್ತೆಯ ದುರಸ್ತಿ ಮಾಡಬೇಕಿದೆ ಎಂದು ಈಚೆಗೆ ಜಿಲ್ಲಾಡಳಿತಕ್ಕೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಲಾಗಿದೆ.

ರಸ್ತೆಗೆ ಹಾನಿ:ಅಂಕಿ ಅಂಶ

ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆ; 389 ಕಿ.ಮೀ

ಗ್ರಾಮೀಣ ರಸ್ತೆ; 1,207 ಕಿ.ಮೀ

ನಗರಾಭಿವೃದ್ಧಿ ಇಲಾಖೆ; 30 ಕಿ.ಮೀ

ಮೀನುಗಾರಿಕೆ ಇಲಾಖೆ; 51 ಕಿ.ಮೀ

ಅಂಕಿ ಅಂಶ...

* ₹ 255 ಕೋಟಿ ಜಿಲ್ಲೆಯ ರಸ್ತೆಗಳಿಗೆ ಆಗಿರುವ ಹಾನಿ

* 271 ಲೋಕೋಪಯೋಗಿ, ಪಂಚಾಯತ್ ರಾಜ್ ಇಲಾಖೆಯ ಸೇತುವೆಗಳಿಗೆ ಹಾನಿ

* ₹98 ಕೋಟಿ ಸೇತುವೆಗಳ ದುರಸ್ತಿಗೆ ಬೇಕಾಗಿರುವ ಮೊತ್ತ

* ಆಧಾರ: ಜಿಲ್ಲಾಡಳಿತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT