ಶುಕ್ರವಾರ, ಆಗಸ್ಟ್ 23, 2019
22 °C
ಮನೆಗಳ ಸ್ವಚ್ಛತೆಗೆ ಹೋಗಲೂ ಸಾಧ್ಯವಿಲ್ಲದಂಥ ಪರಿಸ್ಥಿತಿ: ಸಂಚಾರಕ್ಕೆ ಭಾರಿ ತೊಂದರೆ

ರಸ್ತೆಗೆ ಕೆಸರು ಸುರಿದ ಗಂಗಾವಳಿ ನೆರೆ

Published:
Updated:
Prajavani

ಕಾರವಾರ: ಗಂಗಾವಳಿಯ ಪ್ರವಾಹವೇನೋ ಇಳಿಯಿತು. ಆದರೆ, ಅದರಿಂದ ತೊಂದರೆಗೆ ಒಳಗಾದವರ ಸಂಕಷ್ಟಗಳು ಮುಂದುವರಿದಿವೆ. ಹಲವು ಕುಗ್ರಾಮಗಳಿಗೆ ಹೋಗುವ ರಸ್ತೆಗಳಲ್ಲಿ ಎರಡು ಮೂರು ಅಡಿಗಳಷ್ಟು ರಾಡಿ ಮಣ್ಣು ನಿಂತಿದೆ. ಇದರಿಂದ ಜನರ ಸಂಚಾರಕ್ಕೆ ಭಾರಿ ತೊಂದರೆಯಾಗುತ್ತಿದೆ. 

ನೆರೆ ನೀರು ತುಂಬಿದ್ದ ಮನೆಗಳನ್ನು ಸ್ವಚ್ಛಗೊಳಿಸಲು ಹೋಗಲೂ ಇದರಿಂದ ಅನನುಕೂಲವಾಗಿದೆ. ಮನೆಯ ಒಳಗೂ ಕೆಸರು ಮಣ್ಣು ನಿಂತಿದ್ದು ಅದನ್ನು ಹೊರಹಾಕಲು ಇನ್ನಿಲ್ಲದಂತೆ ಕಷ್ಟಪಡಬೇಕಾಗಿದೆ. ಅಂಕೋಲಾ ಮತ್ತು ಯಲ್ಲಾಪುರ ತಾಲ್ಲೂಕುಗಳ ಅಂಚಿನಲ್ಲಿರುವ ಹೆಗ್ಗಾರ, ರಾಮನಗುಳಿ, ವೈದ್ಯ ಹೆಗ್ಗಾರ ಮುಂತಾದೆಡೆ ಈ ಸಮಸ್ಯೆ ಅತಿ ಹೆಚ್ಚಿದೆ. 

ಮೊಸಳೆಗಳು ಪ್ರತ್ಯಕ್ಷ!: ‘ರಾಮನಗುಳಿ ಭಾಗದಲ್ಲಿ ಸಂತ್ರಸ್ತರಿಗೆ ಕಳೆದುಹೋದ ತಮ್ಮ ವಸ್ತುಗಳನ್ನು ಹುಡುಕುವ ತಲೆಬಿಸಿ ಒಂದೆಡೆಯಾದರೆ, ನದಿಯಲ್ಲಿದ್ದ ಮೊಸಳೆಗಳ ದಾಳಿಯ ಭೀತಿಯೂ ಕಾಡುತ್ತಿದೆ. ಇಲ್ಲಿನ ಸೇತುವೆಯ ಕೆಳಗೆ ಆಳದಲ್ಲಿ ಏಳೆಂಟು ದೊಡ್ಡ ಮೊಸಳೆಗಳಿವೆ ಎಂದು ಸ್ಥಳೀಯರು ಹೇಳುತ್ತಾರೆ. ಸಮೀಪದ ಬಂಡೆಗಳ ಮೇಲೆ ಬಿಸಿಲಿಗೆ ಮೈಯೊಡ್ಡಿರುತ್ತವೆ. ಜನರನ್ನು ಕಂಡಾಗ ನೀರಿಗೆ ಇಳಿಯುತ್ತಿವೆ’ ಇದು ಪ್ರವಾಹ ಸಂತ್ರಸ್ತರ ಆತಂಕಕ್ಕೆ ಕಾರಣವಾಗಿದೆ’ ಎನ್ನುತ್ತಾರೆ ಆ ಭಾಗದಲ್ಲಿ ಸಂಚರಿಸಿದ್ದ ದತ್ತಾತ್ರಯ ಭಟ್ ಕಣ್ಣಿಪಾಲ. 

ಶಿಡ್ಲಗುಂಡಿ ಸಮೀಪ ರಾಜ್ಯ ಹೆದ್ದಾರಿಯ ಡಾಂಬರು ಕೊಚ್ಚಿಕೊಂಡು ಹೋಗಿದ್ದು, ಮೋರಿಯೊಂದರ ಬಳಿ ನೀರು ಹರಿದು ಬೃಹತ್ ಕಂದಕವೇ ನಿರ್ಮಾಣವಾಗಿದೆ. ಬೀಗಾರದ ಒಳರಸ್ತೆಯಲ್ಲಿ ಮಣ್ಣು ಕುಸಿದಿದ್ದು, ರಸ್ತೆ ಅಪಾಯಕಾರಿ ಸ್ಥಿತಿಯಲ್ಲಿದೆ. ಹಲವು ಗ್ರಾಮಗಳಿಗೆ ವಿದ್ಯುತ್ ಹಾಗೂ ಬಿಎಸ್‌ಎನ್‌ಎಲ್ ಮೊಬೈಲ್ ನೆಟ್‌ವರ್ಕ್ ಅನ್ನು ಪುನಃ ಸಂಪರ್ಕಿಸಲಾಗಿದೆ. ಕಾಡಿನ ಮಧ್ಯೆ ಮರ ಬಿದ್ದು, ಧರೆ ಕುಸಿದು ತುಂಡಾಗಿದ್ದ ಆಪ್ಟಿಕಲ್ ಫೈಬರ್ ಕೇಬಲ್‌ಗಳನ್ನು ಬಿಎಸ್‌ಎನ್‌ಎಲ್ ಸಿಬ್ಬಂದಿ ನಿರಂತರ ಶ್ರಮ ವಹಿಸಿ ಜೋಡಿಸಿದ್ದಾರೆ. ತುಂಡಾಗಿದ್ದ ವಿದ್ಯುತ್ ಕಂಬ, ತಂತಿಗಳನ್ನು ಹೆಸ್ಕಾಂ ಸಿಬ್ಬಂದಿ ದುರಸ್ತಿ ಮಾಡಿದ್ದಾರೆ.

ಈ ಭಾಗದ ಮನೆಗಳು, ತೋಟಗಳ ಸ್ಥಿತಿ ಮೊದಲಿನಂತಾಗಲು ಇನ್ನೂ ಅದೆಷ್ಟು ದಿನಗಳು ಬೇಕಾಗಬಹುದು ಎಂದು ಊಹಿಸಲೂ ಸಾಧ್ಯವಿಲ್ಲ ಎನ್ನುತ್ತಾರೆ ಸ್ಥಳೀಯರು.

ಮಣ್ಣಿಗೆ ತಾಡಪಾಲು ಹೊದಿಕೆ: ಯಲ್ಲಾಪುರ ತಾಲ್ಲೂಕಿನ ಅರಬೈಲ್ ಘಟ್ಟದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಬಸ್ ಹಾಗೂ ಸರಕು ಸಾಗಣೆ ವಾಹನಗಳು ಸಂಚರಿಸುತ್ತಿವೆ. ಆದರೆ, ರಸ್ತೆಯು ಶಿರ್ಲೆ, ದಬ್ಗುಳಿ, ಸುಣಜೂಗ ಭಾಗದಲ್ಲಿ ಮಣ್ಣಿಗೆ ಮತ್ತಷ್ಟು ನೀರು ಸೇರಿ ಕುಸಿಯದಂತೆ ತಾಡಪಾಲು ಮುಚ್ಚಲಾಗಿದೆ. ಕೆಲವೆಡೆ ಏಕಕಾಲಕ್ಕೆ ಒಂದೇ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. 

Post Comments (+)