ಬುಧವಾರ, ಸೆಪ್ಟೆಂಬರ್ 22, 2021
24 °C

ಉತ್ತರ ಕನ್ನಡ: ಭೀಕರ ಪ್ರವಾಹಕ್ಕೆ ಮೂವರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ/ಅಂಕೋಲಾ: ತಾಲ್ಲೂಕಿನಲ್ಲಿ ಗಂಗಾವಳಿ ಪ್ರವಾಹದಿಂದ ಅಪಾರ ಹಾನಿಯುಂಟಾಗಿದೆ. ಶಿರೂರಿನಲ್ಲಿ ದೋಣಿ ದಾಟುವಾಗ ನದಿಗೆ ಬಿದ್ದು, ಮಹಿಳೆ ಬೀರು ಗೌಡ (65 ) ಮತ್ತು ಗಂಗಾಧರ ಗೌಡ (30) ಮೃತಪಟ್ಟಿದ್ದಾರೆ.

ಕೂರ್ವೆ ದ್ವೀಪದಿಂದ ಗಂಗಾವಳಿ ನದಿ ಮೂಲಕ ದೋಣಿಯಲ್ಲಿ ಬರುತ್ತಿದ್ದಾಗ ನೀರಿನ ರಭಸಕ್ಕೆ ದೋಣಿ ಪಲ್ಟಿಯಾಯಿತು. ದೋಣಿಯಲ್ಲಿ ಎಂಟು ಜನರಿದ್ದರು. ಒಂದು ತಾಸು ನೀರಿನ ನಡುವೆ ಮರವನ್ನು ಹಿಡಿದುಕೊಂಡು ಜೀವರಕ್ಷಣೆ ಮಾಡಿಕೊಂಡಿದ್ದರು. ಸ್ಥಳೀಯ ಮೀನುಗಾರರ ಸಹಾಯದಿಂದ ಒಂದು ತಾಸು ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ. ಇತಿಹಾಸದಲ್ಲಿ ಗಂಗಾವಳಿ ನದಿಯ ಕೂರ್ವೆ ದ್ವೀಪದ ದೋಣಿ ಪಲ್ಟಿಯಾಗಿದ್ದು ಇದೇ ಮೊದಲು.

ತಾಲ್ಲೂಕಿನಲ್ಲಿ ಸಾವಿರಾರು ಮನೆಗಳು ಜಲಾವೃತವಾಗಿವೆ. 1961ರ ಮಹಾ ಪ್ರವಾಹ ಮಟ್ಟವನ್ನು ಈ ವರ್ಷದ ಪ್ರವಾಹ ಮೀರಿದೆ.
ಮಂಜಗುಣಿಯಲ್ಲಿ ಮೂರು ದೋಣಿಗಳು ಕೊಚ್ಚಿಹೋಗಿವೆ. ಅಂಕೋಲಾ– ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ, ಅಂಕೋಲಾ– ಮಂಗಳೂರು ರಾಷ್ಟ್ರೀಯ ಹೆದ್ದಾರಿ ಜಲಾವೃತಗೊಂಡು ವಾಹನಗಳ ಸಂಚಾರ ಸ್ಥಗಿತವಾಗಿದೆ. ಅಂಕೋಲಾ– ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರೂರು ಬಳಿ ನೀರು ತುಂಬಿದ್ದು, ಸದ್ಯಕ್ಕೆ ಭಾರಿ ಗಾತ್ರದ ವಾಹನಗಳ ಸಂಚಾರ ಮಾತ್ರ ಸಾಧ್ಯವಿದೆ.

ಸುಂಕದಾಳದಲ್ಲಿ ನವಮಿ ಹೋಟೆಲ್‌ನಲ್ಲಿ ಸಿಲುಕಿಕೊಂಡವರನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗುತ್ತಿದೆ.

ಹೊನ್ನಾವರ ವರದಿ: ತಾಲ್ಲೂಕಿನ ಮೊಳ್ಕೋಡ ಗ್ರಾಮದ ಬಳಿ ಶರಾವತಿ ನದಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದ ದೋಣಿಯೊಂದು ಭಾರಿ ಗಾಳಿ ಮಳೆಗೆ ಮುಳುಗಿದೆ. ಅದರಲ್ಲಿದ್ದ ಮಾದೇವಿ ಅಂಬಿಗ (46) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಅವರ ಪತಿ ಸುಬ್ರಾಯ ಅಂಬಿಗ (55) ಈಜಿ ದಡ ಸೇರಿದ್ದಾರೆ.

ಮಾದೇವಿ ಅವರ ಮೃತ ದೇಹವನ್ನು ಪತ್ತೆ ಮಾಡಲಾಗಿದ್ದು, ಮಂಕಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಾಗಾರಕ್ಕೆ ರವಾನಿಸಲಾಗಿದೆ.

ಯಲ್ಲಾಪುರ ವರದಿ: ತಾಲ್ಲೂಕಿನ ಅರಬೈಲ್ ಘಟ್ಟದಲ್ಲಿ ರಾಷ್ಟ್ರೀಯ ಹೆದ್ದಾರಿ 63ರ ಒಂದು ಭಾಗ ಕುಸಿದಿದೆ. ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿದ್ದು, ರಸ್ತೆಯನ್ನು ಬಂದ್ ಮಾಡಲಾಗಿದೆ.

ಕುಮಟಾ ವರದಿ: ತಾಲ್ಲೂಕಿನ ಕತಗಾಲ ಸಮೀಪ ಶಿರಸಿ– ಕುಮಟಾ ರಸ್ತೆಯಲ್ಲಿ ಚಂಡಿಕಾ ನದಿಯ ನೆರೆ ನೀರು ಹರಿಯುತ್ತಿದೆ. ಇದರಿಂದ ರಾಜ್ಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಸ್ಥಗಿತವಾಗಿದೆ.

ಅಘನಾಶಿನಿ ನದಿಯು ಉಕ್ಕೇರಿದ ಪರಿಣಾನ, ಸಂತೆಗುಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆಗಳಿಗೆ ನೀರು ನುಗ್ಗಿದೆ. ದೀವಗಿಯಲ್ಲಿ ಅಘನಾಶಿನಿ ಪ್ರವಾಹದಲ್ಲಿ ಸಿಲುಕಿದ್ದವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸುರಕ್ಷಿತ ಸ್ಥಳಕ್ಕೆ ಕರೆತಂದಿದ್ದಾರೆ.ಹೆಗಡೆ, ದೀವಗಿ, ಕೊಡಕಣಿಯಲ್ಲಿ ಕೂಡ ಪ್ರವಾಹ ಉಂಟಾಗಿದ್ದು, ಶಾಸಕ ದಿನಕರ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು