ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ರಿಯರ್ ಅಡ್ಮಿರಲ್ ಅತುಲ್ ಆನಂದ್ ನೌಕಾಪಡೆಯ ನೂತನ ಎಫ್.ಒ.ಕೆ

Last Updated 20 ಡಿಸೆಂಬರ್ 2021, 8:52 IST
ಅಕ್ಷರ ಗಾತ್ರ

ಕಾರವಾರ: ನೌಕಾಪಡೆಯ ಕರ್ನಾಟಕ ನೌಕಾಪ್ರದೇಶದ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ (ಎಫ್.ಒ.ಕೆ) ಆಗಿ ರಿಯರ್ ಅಡ್ಮಿರಲ್ ಅತುಲ್ ಆನಂದ್ ಸೋಮವಾರ ಅಧಿಕಾರ ಸ್ವೀಕರಿಸಿದರು. ಈವರೆಗೆ ಹುದ್ದೆಯಲ್ಲಿದ್ದ ರಿಯರ್ ಅಡ್ಮಿರಲ್ ಮಹೇಶ ಸಿಂಗ್ ಮುಂಬೈಗೆ ವರ್ಗಾವಣೆಯಾಗಿದ್ದಾರೆ.

ಎಫ್.ಒ.ಕೆ ಹುದ್ದೆಯಲ್ಲಿರುವವರು ಕಾರವಾರದ ಐ.ಎನ್.ಎಸ್ ಕದಂಬ ನೌಕಾನೆಲೆಯ ಮುಖ್ಯಸ್ಥರಾಗಿರುತ್ತಾರೆ. ಅವರು ರಾಜ್ಯದ ಕರಾವಳಿಯಲ್ಲಿ ನೌಕಾಪಡೆಯ ಹಡಗುಗಳು, ನೌಕೆಗಳು, ಸಬ್‌ಮರೈನ್‌ಗಳ ಕಾರ್ಯಾಚರಣೆ ಸೇರಿದಂತೆ ವಿವಿಧ ಘಟಕಗಳು ಮತ್ತು ಸವಲತ್ತುಗಳ ಜವಾಬ್ದಾರಿ ಹೊಂದಿರುತ್ತಾರೆ.

ರಿಯರ್ ಅಡ್ಮಿರಲ್ ಅತುಲ್ ಸಿಂಗ್, ಈ ಮೊದಲು ಮಹಾರಾಷ್ಟ್ರ ನೌಕಾವಲಯದ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ಆಗಿದ್ದರು.
1988ರ ಜ.1ರಂದು ನೌಕಾಪಡೆಗೆ ಸೇರ್ಪಡೆಯಾದ ಅವರು, ಮಹಾರಾಷ್ಟ್ರದ ಖಡಕ್‌ವಸ್ಲಾದಲ್ಲಿರುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿ, ಬಾಂಗ್ಲಾದೇಶದ ಮೀರ್‌‌ಪುರ್‌ನ ದ ಡಿಫೆನ್ಸ್ ಸರ್ವಿಸಸ್ ಮತ್ತು ಸ್ಟಾಫ್ ಅಕಾಡೆಮಿ ಹಾಗೂ ನವದೆಹಲಿಯ ರಾಷ್ಟ್ರೀಯ ರಕ್ಷಣಾ ಕಾಲೇಜಿನಲ್ಲಿ ಅಧ್ಯಯನ‌ ಮಾಡಿದ್ದಾರೆ.

ಅವರು ಪ್ರತಿಷ್ಠಿತ ಅಮೆರಿಕ ಮತ್ತು ಹವಾಯ್‌ನ ಭದ್ರತಾ ಅಧ್ಯಯನಕ್ಕಾಗಿನ ಏಷ್ಯಾ ಪೆಸಿಫಿಕ್ ಕೇಂದ್ರದಲ್ಲಿ ಸುಧಾರಿತ ಭದ್ರತಾ ಸಹಕಾರ ಕೋರ್ಸ್ ಅಧ್ಯಯನ ಮಾಡಿದ್ದಾರೆ. ರಕ್ಷಣೆ ಮತ್ತು ಕಾರ್ಯತಂತ್ರ ವಿಷಯದಲ್ಲಿ ಎಂ.ಫಿಲ್, ಎಂ.ಎಸ್.ಸಿ ಅಧ್ಯಯನ, ರಕ್ಷಣಾ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡಿದ್ದಾರೆ. ನೌಕಾಪಡೆಯಲ್ಲಿ ಅವರ ಕಾರ್ಯ ದಕ್ಷತೆಯನ್ನು ಪರಿಗಣಿಸಿ 'ವಿಶಿಷ್ಟ ಸೇವಾ ಪದಕ' ಪ್ರದಾನವಾಗಿದೆ.

ಟೊರ್ಪೆಡೊ ರಿಕವರಿ ನೌಕೆ ಐ.ಎನ್ ಟಿ.ಆರ್.ವಿ ಎ72, ಕ್ಷಿಪಣಿ ದೋಣಿ ಐ.ಎನ್.ಎಸ್ ಚಟಕ್, ಸಣ್ಣ ಯುದ್ಧ ನೌಕೆ ಐ.ಎಸ್.ಎಸ್ ಖುಕ್ರಿ ಮತ್ತು ಧ್ವಂಸಕ ನೌಕೆ ಐ.ಎನ್.ಎಸ್ ಮುಂಬೈನ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಅಲ್ಲದೇ ನೌಕೆಗಳಾದ ಶಾರದಾ, ರಣವಿಜಯ ಮತ್ತು ಜ್ಯೋತಿಗಳಲ್ಲಿ ದಿಕ್ಸೂಚಿ ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ.

ವೆಲಿಂಗ್ಟನ್‌ನ ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜಿನ ಜಂಟಿ ನಿರ್ದೇಶಕರಾಗಿ, ನೌಕಾಪಡೆಯ ನೌಕೆಗಳ ಕಾರ್ಯಾಚರಣೆಯ ನಿರ್ದೇಶಕರಾಗಿ, ನೌಕಾಪಡೆಯ ಗುಪ್ತಚರ ವಿಭಾಗದ ನಿರ್ದೇಶಕರಾಗಿಯೂ ಜವಾಬ್ದಾರಿ ನಿಭಾಯಿಸಿದ್ದಾರೆ. ಈ ರೀತಿ ಹಲವು ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವ ಅತುಲ್ ಸಿಂಗ್ ಅವರಿಗಿದೆ ಎಂದು ನೌಕಾಪಡೆಯ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT