ಕಂಕಣ ಭಾಗ್ಯಕ್ಕೆ ಮುಳುವಾದ ಕಚ್ಚಾ ರಸ್ತೆ!

ಬುಧವಾರ, ಜೂನ್ 26, 2019
29 °C
ಕುಮಟಾ ಮೇದಿನಿಯ ಯುವಕರಿಗೆ ಅಕ್ಷತೆಯ ಭಾಗ್ಯವಿಲ್ಲ l ವಿದ್ಯುತ್‌ ಸಂಪರ್ಕವೂ ಇಲ್ಲ

ಕಂಕಣ ಭಾಗ್ಯಕ್ಕೆ ಮುಳುವಾದ ಕಚ್ಚಾ ರಸ್ತೆ!

Published:
Updated:
Prajavani

ಕಾರವಾರ: ಕುಮಟಾ ತಾಲ್ಲೂಕಿನ ಕುಗ್ರಾಮ ಮೇದಿನಿಯಲ್ಲಿ 15ಕ್ಕೂ ಹೆಚ್ಚು ಯುವಕರು ಮದುವೆಯಾಗದೇ ಪರಿತಪಿಸುತ್ತಿದ್ದಾರೆ. ಗ್ರಾಮದ ದುರ್ಗಮ ರಸ್ತೆಯೇ ಅವರ ಕಂಕಣ ಭಾಗ್ಯಕ್ಕೆ ಮುಳುವಾಗಿದೆ!

ಈ ಗ್ರಾಮವು ಭೌಗೋಳಿಕವಾಗಿ ಅತಿ ಎತ್ತರದ ಪ್ರದೇಶದಲ್ಲಿದೆ. ತಲುಪಲು ಸರಿಯಾದ ರಸ್ತೆಯೂ ಇಲ್ಲ. ಗ್ರಾಮ ತಲುಪಬೇಕೆಂದರೆ 8 ಕಿ.ಮೀ. ದುರ್ಗಮ ರಸ್ತೆಯಲ್ಲಿಯೇ ಸಾಗಬೇಕು. ‘ಯಾವುದೇ ಸೌಲಭ್ಯಗಳು ಇಲ್ಲದಿರುವುದರಿಂದ  ಗ್ರಾಮದ ಯುವಕರಿಗೆ ಹೆಣ್ಣು ಕೊಡಲು ಹಿಂಜರಿಯುತ್ತಿದ್ದಾರೆ. ‘ಮೇದಿನಿ’ಯ ಹೆಸರು ಹೇಳುತ್ತಿದ್ದಂತೆ ಅನೇಕರ ವಿವಾಹ ಸಂಬಂಧಗಳ ಪ್ರಸ್ತಾವ ಮುರಿದು ಬಿದ್ದಿರುವ ಉದಾಹರಣೆಗಳೂ ಇವೆ’ ಎನ್ನುತ್ತಾರೆ ಗ್ರಾಮಸ್ಥ  ಶಿವರಾಮಗೌಡ.

ಕಡಿದಾದ ದಾರಿ: ಕುಮಟಾ– ಸಿದ್ದಾಪುರ ಮುಖ್ಯ ರಸ್ತೆಯಿಂದ ಈ ಗ್ರಾಮಕ್ಕೆ ದಟ್ಟ ಅರಣ್ಯದ ನಡುವೆ ಸಾಗಬೇಕು. ಈ ಹಿಂದೆ ಗ್ರಾಮಸ್ಥರೇ ಮಾಡಿಕೊಂಡಿರುವ ಕಚ್ಚಾ ರಸ್ತೆಯೊಂದೇ ಇಲ್ಲಿಗೆ ಸಂಪರ್ಕ ಕಲ್ಪಿಸುತ್ತಿದೆ. ಗ್ರಾಮಕ್ಕೆ ಕಿರಿಯ ಪ್ರಾಥಮಿಕ ಶಾಲೆ ಇದೆ. ಮೂರು ವರ್ಷಗಳ ಹಿಂದೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಮಳೆಗಾಳಿ ಬೀಸಿದರೆ ವಿದ್ಯುತ್‌ ವ್ಯತ್ಯಯವಾಗುವುದು ಅತಿ ಸಹಜ.  ಮೊಬೈಲ್ ನೆಟ್‌ವರ್ಕ್‌ ಕೂಡ ಸಿಗದ ಈ ಊರಿನವರೊಂದಿಗೆ ಸಂಪರ್ಕ ಸಾಧಿಸುವುದೇ ಕಷ್ಟವಾಗಿದೆ.

ಬರುವೆನೆಂದ ಸಿ.ಎಂ. ಬರಲಿಲ್ಲ
‘ಲೋಕಸಭಾ ಚುನಾವಣಾ ಪ್ರಚಾರಕ್ಕೆ ಜಿಲ್ಲೆಯ ಗೋಕರ್ಣದಲ್ಲಿ ಬಂದು ತಂಗಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಗ್ರಾಮಸ್ಥರು ಭೇಟಿ ಮಾಡಿ, ಸಮಸ್ಯೆ ಹೇಳಿಕೊಂಡಿದ್ದರು. ಗ್ರಾಮಕ್ಕೆ ತಾವೇ ಖುದ್ದಾಗಿ ಬಂದು ಗ್ರಾಮ ವಾಸ್ತವ್ಯ ಮಾಡುವುದಾಗಿ ಭರವಸೆ ನೀಡಿದ್ದರು.‌ ರಸ್ತೆ ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಚರ್ಚಿಸಿ, ಕ್ರಮ ಕೈಗೊಳ್ಳುವುದಾಗಿಯೂ ಹೇಳಿದ್ದರು. ಆದರೆ, ಇದೀಗ ಮುಖ್ಯಮಂತ್ರಿ ಗ್ರಾಮ ವಾಸ್ತವ್ಯದ ಪಟ್ಟಿಯಲ್ಲಿ ನಮ್ಮ ಗ್ರಾಮದ ಹೆಸರೇ ಇಲ್ಲ’ ಎಂದು ಶಿವರಾಮ ಗೌಡ ಬೇಸರ ವ್ಯಕ್ತಪಡಿಸಿದರು.

‘ಮೇದಿನಿ ಸಣ್ಣಕ್ಕಿ’ಯೆಂದರೆ ಪ್ರಸಿದ್ಧಿ
ಪಾಯಸ, ಕೇಸರಿಬಾತ್‌ಗೆ ಹೆಚ್ಚಾಗಿ ಬಳಸುವ ‘ಮೇದಿನಿ ಸಣ್ಣಕ್ಕಿ’ ಇದೇ ಗ್ರಾಮದ ವಿಶೇಷ. ಇದರ ಜತೆಗೆ, ಉಪ್ಪಂಗಿ, ಜೇನು, ಮೆಣಸಿನ ಕಾಳು, ಪತ್ರೆ ಸೇರಿದಂತೆ ಕಿರು ಉತ್ಪನ್ನಗಳಿಂದ ಇಲ್ಲಿನ ಗ್ರಾಮಸ್ಥರಿಗೆ ಆದಾಯವಿದೆ. ಆದರೆ, ರಸ್ತೆ ಇಲ್ಲದ ಕಾರಣ ಇಲ್ಲಿನ ಉತ್ಪನ್ನಗಳನ್ನು ಮಾರುಕಟ್ಟೆಗೆ ತಲುಪಿಸಲಾಗುತ್ತಿಲ್ಲ. ಹೀಗಾಗಿ ಉತ್ತಮ ಬೆಲೆಯೂ ಸಿಗುತ್ತಿಲ್ಲ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !