ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿ ವಿವಾದ ಬಗೆಹರಿಸಿಕೊಳ್ಳಲು ಎನ್‌ಡಿಎಂಎ ದುರ್ಬಳಕೆ?

Last Updated 3 ಸೆಪ್ಟೆಂಬರ್ 2019, 18:50 IST
ಅಕ್ಷರ ಗಾತ್ರ

ಕಾರವಾರ: ‘ಭಾರಿ ಮಳೆ ಹಾಗೂ ಪ್ರವಾಹದಿಂದಾಗಿ ಕಟ್ಟಡ ಕುಸಿಯುವ ಹಂತದಲ್ಲಿದೆ. ರಕ್ಷಣಾ ಕಾರ್ಯಾಚರಣೆಗೆ ಕ್ರಮ ಕೈಗೊಳ್ಳಬೇಕು’ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ (ಎನ್‌ಡಿಎಂಎ) ಹೊನ್ನಾವರದಿಂದ ಬಂದ ಇ–ಮೇಲ್‌ವೊಂದು ಜಿಲ್ಲೆಯ ಕೆಲವು ಅಧಿಕಾರಿಗಳಿಗೆ ಗಣೇಶ ಚತುರ್ಥಿ ರಜೆಯ ಬಿಡುವನ್ನೂ ಕಿತ್ತುಕೊಳ್ಳುವಂತೆ ಮಾಡಿತು !

ಸಾಗರ ಜೀವವಿಜ್ಞಾನಿ, ಹೊನ್ನಾವರದ ಕೆಳಗಿನಪಾಳ್ಯದ ಡಾ.ಪ್ರಕಾಶ್ ಮೇಸ್ತ ಅವರು ಎನ್‌ಡಿಎಂಎನ ದೆಹಲಿ ಕಚೇರಿಗೆ ಇ–ಮೇಲ್ ಮೂಲಕ, ‘ಶರಾವತಿ ನದಿ ತಟದಲ್ಲಿರುವ ಮನೆಯೊಂದು ಅಪಾಯದಲ್ಲಿದೆ. ಆ ಮನೆಯಲ್ಲಿದ್ದವರನ್ನು ರಕ್ಷಿಸಬೇಕು’ ಎಂದು ದೂರು ನೀಡಿದ್ದರು. ಇದನ್ನು ಆಧರಿಸಿ, ಅಧಿಕಾರಿಗಳೂ ಮೇಸ್ತ ಅವರಿಗೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆದುಕೊಂಡು, ತುರ್ತು ಕ್ರಮಕ್ಕಾಗಿ ಜಿಲ್ಲಾಡಳಿತಕ್ಕೆ ಪ್ರಕರಣ ವರ್ಗಾಯಿಸಿದರು. ಜಿಲ್ಲಾಧಿಕಾರಿ ಆದೇಶದಂತೆ ಹೊನ್ನಾವರ ತಹಶೀಲ್ದಾರ್ ವಿವೇಕ ಶೇಣ್ವಿ ನೇತೃತ್ವದ ತಂಡ ಸೋಮವಾರ ಸ್ಥಳಕ್ಕೆ ಭೇಟಿ ನೀಡಿದಾಗ, ಅದು ಸುಳ್ಳು ಎಂಬುದು ಗೊತ್ತಾಗಿದೆ.

‘ಪ್ರಕಾಶ್ ಅವರು ಇ–ಮೇಲ್‌ನಲ್ಲಿ ತಪ್ಪು ಮಾಹಿತಿ ನೀಡಿ, ಮನೆಯ ಆಸ್ತಿ ವಿವಾದ ಬಗೆಹರಿಸಿಕೊಳ್ಳಲು ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಆ ಮನೆಯು ನೆರೆಪೀಡಿತ ಪ್ರದೇಶದಲ್ಲಿ ಇಲ್ಲ ಮತ್ತು ಬೀಳುವ ಸ್ಥಿತಿಯಲ್ಲಿಯೂ ಇಲ್ಲ. ಗುಣಮಟ್ಟ ಪರಿಶೀಲಿಸಿರುವ ಎಂಜಿನಿಯರ್ ಮನೆ ಸದೃಢವಾಗಿದೆ ಎಂದು ವರದಿ ನೀಡಿದ್ದಾರೆ. ಆ ಮನೆಯ ಆಸ್ತಿ ವಿವಾದ ನ್ಯಾಯಾಲಯದಲ್ಲಿದೆ ಎಂಬ ಸಂಗತಿ ಸ್ಥಳಕ್ಕೆ ಭೇಟಿ ನೀಡಿದಾಗ ಗೊತ್ತಾಗಿದೆ. ಈ ಸಂಬಂಧ ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು’ ಎಂದು ಶೇಣ್ವಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಪ್ರಕಾಶ್ ಅವರ ಚಿಕ್ಕಪ್ಪ ಹಿಂದೆ ಈ ಮನೆಯಲ್ಲಿ ವಾಸ ಮಾಡುತ್ತಿದ್ದರು. ಅವರ ಪತ್ನಿ ಮೃತಪಟ್ಟ ನಂತರ, ಅವರ ಮಗಳನ್ನು ನೋಡಿಕೊಳ್ಳಲು ಮಹಿಳೆಯೊಬ್ಬರು ಇದೇ ಮನೆಯಲ್ಲಿ ಉಳಿಯುತ್ತಿದ್ದರು. ಸದ್ಯ ಆ ಮಹಿಳೆ ಮತ್ತು ಅವರ ಮಗಳು, ಅವರ ಸಹೋದರ, ಪ್ರಕಾಶ್ ಅವರ ಚಿಕ್ಕಪ್ಪನ ಮಗಳು ವಾಸವಿದ್ದಾರೆ. ಪ್ರಕಾಶ್ ಮೇಸ್ತ ಅವರಿಗೆ ಸಂಬಂಧಿಸಿದ ಕೆಲವು ದಾಖಲೆಗಳು ಸಹ ಇದೇ ವಿಳಾಸದಲ್ಲಿವೆ’ ಎಂದು ಸ್ಥಳೀಯರೊಬ್ಬರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT