ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಡು ಮಸೂದೆ ಬೆಂಬಲಿಸಲು ಕ.ಸಾ.ಪ ಒತ್ತಾಯ

ಕಲಾಪದಲ್ಲಿ ಮಂಡನೆಯಾಗಲಿರುವ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ 2022’
Last Updated 2 ಸೆಪ್ಟೆಂಬರ್ 2022, 14:20 IST
ಅಕ್ಷರ ಗಾತ್ರ

ಕಾರವಾರ: ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ 2022ರ ಕರಡು ಪ್ರತಿಯು, ವಿಧಾನಮಂಡಲದ ಮುಂದಿನ ಅಧಿವೇಶನದಲ್ಲಿ ಮಂಡನೆಯಾಗಲಿದೆ. ನಾಡು ನುಡಿಯ ಸಂರಕ್ಷಣೆಗೆ ನೆರವಾಗಲಿರುವ ವಿಧೇಯಕವನ್ನು ಎಲ್ಲ ಶಾಸಕರೂ ಬೆಂಬಲಿಸಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್.ವಾಸರೆ ಒತ್ತಾಯಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನ್ಯಾಯಮೂರ್ತಿ ಎಸ್.ಆರ್.ಬನ್ನೂರಮಠ ಅವರ ಅಧ್ಯಕ್ಷತೆಯ ಕರ್ನಾಟಕ ಕಾನೂನು ಆಯೋಗಕ್ಕೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ನೇತೃತ್ವದಲ್ಲಿ ಕರಡು ಪ್ರತಿಯನ್ನು ಸಲ್ಲಿಸಲಾಗಿದೆ’ ಎಂದು ತಿಳಿಸಿದರು.

‘ಮಸೂದೆಯ ಕರಡು ಪ್ರತಿಯಲ್ಲಿರುವ ಅಂಶಗಳು ರಾಜ್ಯದಲ್ಲಿ ಭಾಷಾ ವಿವಾದವನ್ನು ತಡೆಯಲು ಸಹಕಾರಿಯಾಗಲಿವೆ. ಸರ್ಕಾರಿ ಕಚೇರಿಗಳ ನಾಮಫಲಕಗಳು, ರಸ್ತೆಗಳ ಹೆಸರು ಕಡ್ಡಾಯವಾಗಿ ಕನ್ನಡದಲ್ಲಿರಬೇಕು. ಅದರೊಂದಿಗೆ ಇಂಗ್ಲಿಷ್ ಬಳಸಬಹುದು. ಆದರೆ, ಬೇರೆ ಭಾಷೆಗಳಿಗೆ ಅವಕಾಶವಿಲ್ಲ ಎಂದು ಕರಡು ಪ್ರತಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ’ ಎಂದರು.

‘ಸರ್ಕಾರದಿಂದ ಅನುದಾನ ಪಡೆದ ಎಲ್ಲ ಸಂಸ್ಥೆಗಳು ಆಹ್ವಾನ ಪತ್ರಿಕೆಗಳನ್ನು ಕನ್ನಡದಲ್ಲೇ ಮುದ್ರಿಸಬೇಕು. ರಾಜ್ಯಪಾಲರ ಆದೇಶಗಳು ಕನ್ನಡದಲ್ಲೇ ಇರಬೇಕು. ಸದನದಲ್ಲಿ ಈ ಹಿಂದೆ ಚರ್ಚೆಯಾದ ವಿಷಯಗಳು ಕನ್ನಡಕ್ಕೆ ತರ್ಜುಮೆ ಆಗಬೇಕು. ಮುಂದೆ ಕನ್ನಡದಲ್ಲೇ ದಾಖಲಾಗಬೇಕು ಎಂದೂ ಶಿಫಾರಸು ಮಾಡಲಾಗಿದೆ’ ಎಂದು ತಿಳಿಸಿದರು.

‘ನ್ಯಾಯಾಲಯಗಳಲ್ಲಿ ಕೂಡ ಕನ್ನಡದಲ್ಲೇ ತೀರ್ಪು ನೀಡಿ, ಅವು ಕನ್ನಡದಲ್ಲೇ ದಾಖಲಾಗಬೇಕು. ಉನ್ನತ ಶಿಕ್ಷಣ, ವೃತ್ತಿಪರ ಶಿಕ್ಷಣದಲ್ಲಿ ಕನ್ನಡ ಬಳಕೆಯ ಬಗ್ಗೆ, ಸರ್ಕಾರದಿಂದ ಸಬ್ಸಿಡಿ ಪಡೆಯುವ ಕಂಪನಿಗಳು ಕನ್ನಡಿಗರಿಗೆ, ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಮೀಸಲಾತಿ ನೀಡಬೇಕು ಎಂದು ಅದರಲ್ಲಿ ತಿಳಿಸಲಾಗಿದೆ’ ಎಂದು ಹೇಳಿದರು.

‘ಕರಡು ಮಸೂದೆಯನ್ನು ಕಾನೂನು ಆಯೋಗಕ್ಕೆ ಸಲ್ಲಿಸಿರುವ ಕಾರಣ ಅದಕ್ಕೊಂದು ನಿಖರವಾದ ಚೌಕಟ್ಟು ಸಿಗಲಿದೆ. ಹಾಗಾಗಿ ವಿಧಾನಮಂಡಲದಲ್ಲಿ ಮಂಡನೆಯಾದಾಗ ಅಂಗೀಕಾರವಾಗಲು ಅನುಕೂಲವಾಗಲಿದೆ. ಈ ಬಗ್ಗೆ ಜಿಲ್ಲೆಯ ಎಲ್ಲ ಶಾಸಕರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಮನವರಿಕೆ ಮಾಡಿ, ಬೆಂಬಲಿಸಲು ಮನವಿ ಮಾಡುತ್ತಿದ್ದೇವೆ’ ಎಂದರು.

‘ದಂಡ ವಿಧಿಸಲು ಅವಕಾಶ’:

‘ಸರೋಜಿನಿ ಮಹಿಷಿ ವರದಿಯಲ್ಲಿ, ಕನ್ನಡಕ್ಕೆ ಸಂಬಂಧಿಸಿ ಯಾರಾದರೂ ನಿಯಮಗಳ ಉಲ್ಲಂಘನೆ ಮಾಡಿದರೆ ಅವರಿಗೆ ಏನು ಶಿಕ್ಷೆ ಎಂಬ ಬಗ್ಗೆ ಸ್ಪಷ್ಟವಾದ ಉಲ್ಲೇಖವಿರಲಿಲ್ಲ. ಅದನ್ನು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕರಡು ಮಸೂದೆಯಲ್ಲಿ ಸರಿ ಪಡಿಸಲಾಗಿದೆ. ದಂಡ ವಿಧಿಸುವಂಥ ಅವಕಾಶಗಳನ್ನೂ ಕಲ್ಪಿಸಲಾಗಿದೆ’ ಎಂದು ಬಿ.ಎನ್.ವಾಸರೆ ಮಾಹಿತಿ ನೀಡಿದರು.

ಸಾಹಿತ್ಯ ಪರಿಷತ್ತಿನ ಪ್ರಮುಖರಾದ ಮುರ್ತುಜಾ ಅನಿಹೊಸೂರು, ರಾಮ ನಾಯ್ಕ, ವೆಂಟು ಮಾಸ್ತರ್, ಜಾರ್ಜ್ ಫರ್ನಾಂಡಿಸ್, ಬಾಬು ಶೇಖ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT