ಗುರುವಾರ , ಅಕ್ಟೋಬರ್ 22, 2020
22 °C
ಪ್ರಮಾಣಪತ್ರ ಪಡೆಯುವ ಮೊದಲ ಪ್ರಯತ್ನದಲ್ಲೇ ಶೇ 100ರ ಸಾಧನೆ ಮಾಡಿದ ಮೊದಲ ದೇಶವೆಂಬ ಹೆಗ್ಗಳಿಕೆ

ಹೊನ್ನಾವರದ ಕಾಸರಕೋಡು, ಪಡುಬಿದ್ರಿ ಕಡಲತೀರಕ್ಕೆ ‘ಬ್ಲೂ ಫ್ಲ್ಯಾಗ್’ ಘೋಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಹೊನ್ನಾವರ ತಾಲ್ಲೂಕಿನ ಕಾಸರಕೋಡು, ಉಡುಪಿ ಜಿಲ್ಲೆಯ ಪಡುಬಿದ್ರಿ ಸೇರಿದಂತೆ ದೇಶದ ಒಟ್ಟು ಎಂಟು ಕಡಲತೀರಗಳಿಗೆ ಪ್ರತಿಷ್ಠಿತ ‘ಬ್ಲೂ ಫ್ಲ್ಯಾಗ್’ ಪ್ರಮಾಣಪತ್ರ ಘೋಷಣೆಯಾಗಿದೆ. ತನ್ನ ಮೊದಲ ಪ್ರಯತ್ನದಲ್ಲೇ ಶೇ 100ರ ಸಾಧನೆ ಮಾಡಿದ ಮೊದಲ ದೇಶವೆಂಬ ಹೆಗ್ಗಳಿಕೆಯೂ ನಮ್ಮ ದೇಶದ್ದಾಗಿದೆ.

ಈ ಬಗ್ಗೆ ‘ಪ್ರಜಾವಾಣಿ’ ಜೊತೆ ಭಾನುವಾರ ಮಾಹಿತಿ ಹಂಚಿಕೊಂಡ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ‘ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು, ಧ್ವಜಾರೋಹಣದ ದಿನಾಂಕ ಶೀಘ್ರವೇ ಪ್ರಕಟವಾಗಲಿದೆ’ ಎಂದು ತಿಳಿಸಿದರು.

‘ಮಹಾರಾಷ್ಟ್ರದ ಕಡಲತೀರಗಳನ್ನು ಬ್ಲೂ ಫ್ಲ್ಯಾಗ್‌ ಪ್ರಮಾಣಪತ್ರ ಪಡೆಯುವ ನಿಟ್ಟಿನಲ್ಲಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿತ್ತು. ಆದರೆ, ಅಲ್ಲಿ ನೀರಿನ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗದೇ ಯೋಜನೆ ಪ್ರಕಟವಾದ ನಾಲ್ಕು ತಿಂಗಳ ಬಳಿಕ ನಮ್ಮ ರಾಜ್ಯಕ್ಕೆ ವಿಸ್ತರಿಸಿದರು. ಕಡಿಮೆ ಅವಧಿಯಲ್ಲೂ ನಾವು ಕೇಂದ್ರ ಸರ್ಕಾರದ ಸೂಚನೆಗಳ ಪ್ರಕಾರ ಕಾಸರಕೋಡು ಕಡಲತೀರವನ್ನು ಅಭಿವೃದ್ಧಿ ಪಡಿಸಿದ್ದೇವೆ’ ಎಂದು ಸಂತಸ ವ್ಯಕ್ತಪಡಿಸಿದರು.

‘ರಾಜ್ಯದ ಶೇ 50ರಷ್ಟು ಕಡಲತೀರಗಳು ಉತ್ತರ ಕನ್ನಡದಲ್ಲಿವೆ. ಹಾಗಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ಕಡಲತೀರಗಳನ್ನು ಬ್ಲೂ ಫ್ಲ್ಯಾಗ್ ಪಡೆಯುವ ನಿಟ್ಟಿನಲ್ಲಿ ಅಭಿವೃದ್ಧಿ ಪಡಿಸಲು ಗುರುತು ಮಾಡುವಂತೆ ಮನವಿ ಮಾಡಿದ್ದೇವೆ. ಅಂಕೋಲಾದಲ್ಲಿ ವಿಮಾನ ನಿಲ್ದಾಣವೂ ನಿರ್ಮಾಣವಾಗುತ್ತಿರುವ ಕಾರಣ ಕಡಲತೀರದ ಪ್ರವಾಸೋದ್ಯಮ ಅಭಿವೃದ್ಧಿಗೆ ಇದು ಮಹತ್ವದ ಹೆಜ್ಜೆಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಡಲತೀರಗಳನ್ನು ನೀಡಿದರೆ ಅಭಿವೃದ್ಧಿ ಪಡಿಸುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಯಾವುದೇ ಬೃಹತ್ ಕೈಗಾರಿಕೆಗಳಿಲ್ಲ. ಹಾಗಾಗಿ ಕಡಲತೀರದಲ್ಲಿ ನೀರಿನ ಗುಣಮಟ್ಟ ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ. ಅಲ್ಲದೇ ಬ್ಲೂಫ್ಲ್ಯಾಗ್ ಪ್ರಮಾಣಪತ್ರವನ್ನು ನಿರಂತರವಾಗಿ ಕಾಯ್ದುಕೊಳ್ಳಲು ಸಾಧ್ಯವಾಗಲಿದೆ’ ಎಂದು ಅಭಿಪ್ರಾಯವ್ಯಕ್ತಪಡಿಸಿದರು.

ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಪುರುಷೋತ್ತಮ ಮಾಹಿತಿ ನೀಡಿ, ‘ಕಾಸರಕೋಡು ಕಡಲತೀರಕ್ಕೆ ಪ್ರಮಾಣಪತ್ರ ಪಡೆಯುವ ನಿಟ್ಟಿನಲ್ಲಿ 2018ರ ಅಕ್ಟೋಬರ್‌ನಲ್ಲಿ ಕೆಲಸ ಆರಂಭಿಸಲಾಯಿತು. ಕೇಂದ್ರ ಸರ್ಕಾರವು ಒಂದು ವರ್ಷದ ನಿರ್ವಹಣೆ ವೆಚ್ಚವನ್ನೂ ಒಳಗೊಂಡು ಒಟ್ಟು ₹ 8 ಕೋಟಿ ಅನುದಾನ ನೀಡಿತ್ತು. ಕೇವಲ ಒಂದು ವರ್ಷದಲ್ಲಿ ಎಲ್ಲ ಕಾಮಗಾರಿಗಳನ್ನೂ ಮುಕ್ತಾಯ ಮಾಡಲಾಗಿದೆ. 2019ರ ಅಕ್ಟೋಬರ್‌ನಲ್ಲಿ ನೆರೆ ಬಂದಾಗ ಕಡಲತೀರದಲ್ಲಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಈ ಸಮಸ್ಯೆಯಾಗದಿದ್ದರೆ ಆರು ತಿಂಗಳಲ್ಲೇ ಕೆಲಸ ಪೂರ್ಣಗೊಳ್ಳುತ್ತಿತ್ತು’ ಎಂದು ಹೇಳಿದರು.

‘ಅಲೆಗಳು ಎಷ್ಟು ದೂರಕ್ಕೆ ಬರುತ್ತವೆ ಎಂಬುದನ್ನು ಗುರುತಿಸಲಾಗಿದೆ. ಹಾನಿಯಾಗಿದ್ದ ಪ್ರದೇಶವನ್ನೂ ಸಂಪೂರ್ಣ ದುರಸ್ತಿ ಮಾಡಲಾಗಿದೆ’ ಎಂದು ತಿಳಿಸಿದರು.

ವಿಶ್ವದಲ್ಲೇ ಮೂರನೇ ಸ್ಥಾನ:

ವಿಶ್ವದಲ್ಲಿ ಬ್ಲೂ ಫ್ಲ್ಯಾಗ್ ಪಡೆದಿರುವ 50 ದೇಶಗಳ ಪೈಕಿ, ಕಡಲತೀರಗಳ ಉತ್ತಮ ನಿರ್ವಹಣೆಗಾಗಿ ಭಾರತವು ಮೂರನೇ ಸ್ಥಾನ ಗೆದ್ದುಕೊಂಡಿದೆ. ಈ ಮೂಲಕ ಭಾರತವು ಪ್ರತಿಷ್ಠಿತ ದೇಶಗಳ ಸಾಲಿಗೆ ಸೇರಿದೆ ಎಂದು ‘ಭಾರತೀಯ ಬ್ಲೂ ಫ್ಲ್ಯಾಗ್ ಕಡಲತೀರ’ ಅಭಿಯಾನದ ನಾಯಕ ಸಂಜಯ್ ಜಲ್ಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

*ಬ್ಲೂ ಫ್ಲ್ಯಾಗ್ ಮನ್ನಣೆಯ ಮಾಹಿತಿ ಪ್ರದರ್ಶನ

*ಪರಿಸರ ಜ್ಞಾನ ಕುರಿತು ಚಟುವಟಿಕೆಗಳ ಆಯೋಜನೆ

*ಸ್ನಾನ ಮಾಡುವ ನೀರಿನ ಗುಣಮಟ್ಟದ ಪ್ರದರ್ಶನ

*ಸ್ಥಳೀಯ ಪರಿಸರ, ವಾತಾವರಣ, ಸಾಂಸ್ಕೃತಿಕ ತಾಣಗಳ ಮಾಹಿತಿ ಪ್ರದರ್ಶನ

*ಸಮುದ್ರದ ನೀರಿನ ಗುಣಮಟ್ಟದ ಬಗ್ಗೆ ನಿರಂತರವಾಗಿ ಪರಿಶೀಲನೆ

*ಕೈಗಾರಿಕೆ, ವಸತಿ ಪ್ರದೇಶದ ತ್ಯಾಜ್ಯ ಕಡಲತೀರದ ಮೇಲೆ ಪರಿಣಾಮ ಬೀರಬಾರದು

*ಅಂಗವಿಕಲರು ಕಡಲತೀರ ಪ್ರವೇಶಿಸಲು ವ್ಯವಸ್ಥೆ ಇರಬೇಕು

ಬ್ಲೂ ಫ್ಯ್ಲಾಗ್‌’ಗೆ ಆಯ್ಕೆಯಾದ ಇತರ ಕಡಲತೀರಗಳು:

ಗುಜರಾತ್‌ನ ಶಿವರಾಜಪುರ, ಡಿಯುನ ಘೋಗ್ಲಾ, ಕೇರಳದ ಕಪ್ಪಾಡ್, ಆಂಧ್ರಪ್ರದೇಶದ ಋಷಿಕೊಂಡ, ಒಡಿಶಾದ ಗೋಲ್ಡನ್, ಮತ್ತು ಅಂಡಮಾನ್‌ ದ್ವೀಪದ ರಾಧಾನಗರ ಕಡಲತೀರಗಳಿಗೂ ಪ್ರಮಾಣ ಪತ್ರ ಘೋಷಣೆಯಾಗಿದೆ.

ಏನಿದು ‘ಬ್ಲೂ ಫ್ಲ್ಯಾಗ್?’:

ಕಡಲತೀರದ ಸ್ವಚ್ಛತೆ, ನೀರಿನ ಗುಣಮಟ್ಟ, ಪರಿಸರ ಸ್ನೇಹಿ ವಾತಾವರಣ, ಸುರಕ್ಷತೆ ಮುಂತಾದ ಅಂಶಗಳನ್ನು ಪರಿಗಣಿಸಿ ‘ಬ್ಲೂ ಫ್ಲ್ಯಾಗ್’ ಪ್ರಮಾಣಪತ್ರವನ್ನು ‘ಪರಿಸರ ಶಿಕ್ಷಣಕ್ಕಾಗಿ ವೇದಿಕೆ’ (ಎಫ್.ಇ.ಇ) ನೀಡುತ್ತದೆ. ಅದರ ಕಚೇರಿ ಡೆನ್ಮಾರ್ಕ್‌ನ ಕೋಪೆನ್ ಹೆಗನ್‌ನಲ್ಲಿದೆ.

ಎಫ್.ಇ.ಇ ಸೂಚಿಸಿದ ಹತ್ತಾರು ಮಾನದಂಡಗಳನ್ನು ಪಾಲಿಸಿದ ಕಡಲತೀರಗಳಲ್ಲಿ ನೀಲಿ ಬಣ್ಣದ ಧ್ವಜವನ್ನು ಆರೋಹಣ ಮಾಡಲಾಗುತ್ತದೆ. ಅವುಗಳಲ್ಲಿ ಒಂದು ಮಾನದಂಡದದ ಪಾಲನೆಯಲ್ಲಿ ವಿಫಲವಾದರೂ ಧ್ವಜವನ್ನು ಕೆಳಗೆ ಇಳಿಸಲಾಗುತ್ತದೆ. ವೇದಿಕೆಯ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗುತ್ತದೆ.

ವಿದೇಶಿ ಪ್ರವಾಸಿಗರಲ್ಲಿ ‘ಬ್ಲೂ ಫ್ಲ್ಯಾಗ್’ ಪ್ರಮಾಣ ಪತ್ರ ಪಡೆದಿರುವ ಕಡಲತೀರಗಳಿಗೇ ಭೇಟಿ ನೀಡುವವರ ಸಂಖ್ಯೆ ಅಧಿಕ. ಹಾಗಾಗಿ ದೇಶದ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಈ ಪ್ರಮಾಣಪತ್ರ ಪಡೆದುಕೊಳ್ಳುವುದು ಅತ್ಯಂತ ಮಹತ್ವದ ಸಂಗತಿಯಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು