ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಕೆಡಿಸಿಸಿ ಬ್ಯಾಂಕ್‌ಗೆ ನೂರರ ಸಂಭ್ರಮ

ಸಹಕಾರ ಕ್ಷೇತ್ರಕ್ಕೆ ಬಲ ತುಂಬಿದ ಬ್ಯಾಂಕ್: ತಂತ್ರಜ್ಞಾನಾಧಾರಿತ ಸೇವೆಯಲ್ಲೂ ಮುಂಚೂಣಿ
Last Updated 6 ಸೆಪ್ಟೆಂಬರ್ 2021, 9:11 IST
ಅಕ್ಷರ ಗಾತ್ರ

ಶಿರಸಿ: ಸಹಕಾರ ಕ್ಷೇತ್ರದಲ್ಲಿ ಉತ್ತರ ಕನ್ನಡ ಜಿಲ್ಲೆ ತನ್ನ ಹೆಗ್ಗುರುತು ಮೂಡಿಸಿದೆ. ಭದ್ರ ಹೆಜ್ಜೆಗಳನ್ನಿಟ್ಟು ಆರ್ಥಿಕವಾಗಿ ಸಂಘ–ಸಂಸ್ಥೆಗಳು ಪ್ರಬಲವಾಗಿರಲು ಜಿಲ್ಲಾ ಮಧ್ಯವರ್ತಿ ಬ್ಯಾಂಕ್ (ಕೆ.ಡಿ.ಸಿ.ಸಿ. ಬ್ಯಾಂಕ್) ಆಧಾರವಾಗಿರುವುದೇ ಕಾರಣ.

ರಾಜ್ಯದ ಪ್ರತಿಷ್ಠಿತ ಮಧ್ಯವರ್ತಿ ಬ್ಯಾಂಕುಗಳ ಪೈಕಿ ಅಗ್ರ ಕ್ರಮಾಂಕದಲ್ಲಿರುವ ಈ ಬ್ಯಾಂಕ್ ನೂರು ವರ್ಷ ಯಶಸ್ವಿಯಾಗಿ ಮುನ್ನಡೆದಿದೆ. ಪ್ರತಿ ಆರ್ಥಿಕ ವರ್ಷದಲ್ಲಿ ಲಾಭ ಕಂಡಿರುವ ಬ್ಯಾಂಕ್ ಈವರೆಗೆ ನಷ್ಟ ಅನುಭವಿಸಿಲ್ಲ ಎಂಬುದೇ ವಿಶೇಷ.

ಜಿಲ್ಲೆಯಒಟ್ಟು ಕುಟುಂಬಗಳ ಪೈಕಿ ಶೇ 98ರಷ್ಟು ಕುಟುಂಬಗಳು ಸಹಕಾರ ಕ್ಷೇತ್ರದೊಂದಿಗೆ ನಂಟು ಹೊಂದಿವೆ. ಸಹಕಾರ ಸಂಸ್ಥೆಗಳ ಮುಖ್ಯ ಆರ್ಥಿಕ ಶಕ್ತಿಯಾಗಿರುವ ಕೆ.ಡಿ.ಸಿ.ಸಿ. ಬ್ಯಾಂಕ್ ಜಿಲ್ಲೆಯ ಆರ್ಥಿಕ ಜೀವನಾಡಿಯಾಗಿ ನಿಂತಿದೆ.

ಕೃಷಿಸಾಲ ನೀಡುವಲ್ಲಿ ಮುಂಚೂಣಿಯಲ್ಲಿರುವ ಬ್ಯಾಂಕ್ ತೋಟಗಾರಿಕೆ, ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಬಹುದೊಡ್ಡ ಕೊಡುಗೆ ನೀಡುತ್ತಿದೆ. 2020–21ನೇ ಸಾಲಿನಲ್ಲಿ ₹762.30 ಕೋಟಿ ಕೃಷಿ ಸಾಲ ಹಂಚಿಕೆ ಮಾಡಿ ದಾಖಲೆಗೆ ಪಾತ್ರವಾಗಿದೆ. ಉದ್ದಿಮೆಗಳ ಸ್ಥಾಪನೆ, ಕೈಗಾರಿಕೆ, ವಾಣಿಜ್ಯೋದ್ಯಮ ಅಭಿವೃದ್ಧಿಗೂ ಪ್ರೋತ್ಸಾಹಿಸುತ್ತಿರುವ ಬ್ಯಾಂಕ್ ಕಳೆದ ಆರ್ಥಿಕ ಸಾಲಿನಲ್ಲಿ ₹1,015.54 ಕೋಟಿ ಸಾಲ ನೀಡಿತ್ತು.

ಶಿರಸಿ ನಗರದಲ್ಲಿ ಪ್ರಧಾನ ಕಚೇರಿ ಹೊಂದಿರುವ ಬ್ಯಾಂಕ್ ಜಿಲ್ಲೆಯಾದ್ಯಂತ 53 ಶಾಖೆಗಳಿಗೆ ವಿಸ್ತಾರಗೊಳ್ಳುವ ಮೂಲಕ ಗ್ರಾಹಕರಿಗೆ ಪರಿಣಾಮಕಾರಿ ಸೇವೆ ನೀಡುತ್ತಿದೆ.

ಸಾಧನೆಯ ಹಾದಿಯಲ್ಲಿ: ಕೆ.ಡಿ.ಸಿ.ಸಿ. ಬ್ಯಾಂಕ್ ರಾಜ್ಯಮಟ್ಟದಲ್ಲಿ ಉತ್ತಮ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಎಂಬ ಖ್ಯಾತಿ ಗಳಿಸಿದೆ. ನಬಾರ್ಡ್‍ನಿಂದ ಎರಡು ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದು, ಅಪೆಕ್ಸ್ ಬ್ಯಾಂಕ್ ನೀಡುವ ಉತ್ತಮ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಪ್ರಶಸ್ತಿಗೆ 42 ಬಾರಿ ಪರಿಗಣಿತವಾಗಿದ್ದು ಸಾಧನೆಯಾಗಿದೆ.

ತಂತ್ರಾಜ್ಞಾನಾಧಾರಿತ ಸೇವೆ: ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಅಳವಡಿಸಿಕೊಂಡ ಬ್ಯಾಂಕ್ ತ್ವರಿತ ಬ್ಯಾಂಕಿಂಗ್ ಸೌಲಭ್ಯಗಳಾದ ಎ.ಟಿ.ಎಂ., ಸಂಚಾರಿ ಎ.ಟಿ.ಎಂ., ಆರ್.ಟಿ.ಜಿ.ಎಸ್./ನೆಫ್ಟ್, ಇ–ಕಾಮರ್ಸ್, ಐ.ಎಂ.ಪಿ.ಎಸ್. ಸೇವೆ ನೀಡುತ್ತಿದೆ. ಈ ಮೂಲಕ ಸ್ಪರ್ಧಾತ್ಮಕ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಗ್ರಾಹಕರಿಗೆ ತಂತ್ರಜ್ಞಾನ ಆಧಾರಿತ ಸೇವೆ ನೀಡುವಲ್ಲಿ ಸಾಫಲ್ಯ ಕಂಡಿದೆ.

ನೂರರ ಸಂಭ್ರಮ ಇಂದು:ಕೆ.ಡಿ.ಸಿ.ಸಿ.ಬ್ಯಾಂಕ್ ಶತಮಾನೋತ್ಸವ ಸಂಭ್ರಮ ಬ್ಯಾಂಕಿನ ಆವರಣದಲ್ಲಿ ಆ.6ರ ಸೋಮವಾರ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಶತಮಾನೋತ್ಸವ ಸ್ಮರಣ ಸಂಚಿಕೆಯನ್ನು, ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಆಡಳಿತ ಕಟ್ಟಡದ ಆಧುನಿಕ ವಿಸ್ತರಣಾ ವಿಭಾಗವನ್ನು, ಸಹಕಾರ ಸಚಿವ ಎಸ್.ಟಿ. ಸೋಮಶೇಖರ ಕಾರ್ಯಕ್ರಮವನ್ನು, ಕೃಷಿ ಸಚಿವ ಬಿ.ಸಿ.ಪಾಟೀಲ್ ಮೈಕ್ರೋ ಎ.ಟಿ.ಎಂ., ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಭಾರತ್ ಬಿಲ್ ಪೇಮೆಂಟ್ ಸಿಸ್ಟಂ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಬ್ಯಾಂಕಿನ ಅಧ್ಯಕ್ಷ ಶಿವರಾಮ ಹೆಬ್ಬಾರ ಅಧ್ಯಕ್ಷತೆ ವಹಿಸಲಿದ್ದಾರೆ. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಸಾಂಕೇತಿಕವಾಗಿ ಕೃಷಿ ಸಾಲ ವಿತರಿಸಲಿದ್ದಾರೆ. ಜಿಲ್ಲೆಯ ಶಾಸಕರು, ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT