ಮಂಗಳವಾರ, ಸೆಪ್ಟೆಂಬರ್ 29, 2020
22 °C
ಮಾಣಿಕಟ್ಟಾ ಗಜನಿಯಲ್ಲಿ ‘ಕಗ್ಗ’ ಭತ್ತ ಬೆಳೆಗಾರರ ಸಂಘದ ಅಧ್ಯಕ್ಷ ಸಿ.ಆರ್.ನಾಯ್ಕ ಮಾಹಿತಿ

₹ 32 ಕೋಟಿಯಲ್ಲಿ ಬಂಡ್ ದುರಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಮಟಾ: ‘ತಾಲ್ಲೂಕಿನ ಅಘನಾಶಿನಿ ಹಿನ್ನೀರು ಪ್ರದೇಶದಲ್ಲಿ ಬೆಳೆಯುವ ‘ಕಗ್ಗ' ಭತ್ತ ಹಾಗೂ ಮೀನು ಬೇಸಾಯ ಗಜನಿ ಖಾರ್‌ಲ್ಯಾಂಡ್ ಬಂಡ್ ದುರಸ್ತಿಗೆ ರಾಷ್ಟ್ರೀಯ ಚಂಡಮಾರುತ ಅಪಾಯ ಉಪಶಮನ ಯೋಜನೆಯಡಿ ₹ 32 ಕೋಟಿ ಮಂಜೂರಾಗಿದೆ’ ಎಂದು ಮಾಣಿಕಟ್ಟಾ ಕಗ್ಗ ಭತ್ತ ಬೆಳೆಗಾರರ ಸಂಘದ ಅಧ್ಯಕ್ಷ ಸಿ.ಆರ್.ನಾಯ್ಕ ಹೇಳಿದರು.

ಮಾಣಿಕಟ್ಟಾ ಗಜನಿಯಲ್ಲಿ ಗುರುವಾರ ನಡೆದ ರೈತರ ಸಭೆಯಲ್ಲಿ ಅವರು ಮಾತನಾಡಿದರು.

‘ಹಿನ್ನೀರು ಪ್ರದೇಶದಲ್ಲಿ ಸುಮಾರು 4 ಸಾವಿರ ರೈತರ ಒಟ್ಟೂ 2,500 ಹೆಕ್ಟೇರ್ ಗಜನಿ ಭೂಮಿ ಇದೆ. 1973ರಲ್ಲಿ ರಾಮಕೃಷ್ಣ ಹೆಗಡೆ ಅವರು ಸಚಿವರಾಗಿದ್ದಾಗ ಹಿನ್ನೀರು ಪ್ರದೇಶದ ಕಗ್ಗ ಭತ್ತದ ಗದ್ದೆಗಳಿಗೆ ಖಾರ್‌ಲ್ಯಾಂಡ್ ಬಂಡ್ ನಿರ್ಮಿಸಲಾಗಿತ್ತು. ಇದು ಮಳೆಗಾಲದಲ್ಲಿ ನೆರೆ ನೀರು, ಬೇಸಿಗೆಯಲ್ಲಿ ಉಪ್ಪು ನೀರು ನುಗ್ಗುವುದನ್ನು ತಡೆಯಲು ಸಹಕಾರಿಯಾಗಿತ್ತು. ಇದರಿಂದ ಪ್ರತಿ ವರ್ಷ ಇಲ್ಲಿ 45 ಸಾವಿರ ಕ್ವಿಂಟಲ್ ಕಗ್ಗ ಭತ್ತ ಬೆಳೆಯುತ್ತಿದ್ದರು. ಇಲ್ಲಿ ಹಿಂಗಾರು ಹಂಗಾಮಿನಲ್ಲಿ ಹತ್ತಾರು ಟನ್ ನೈಸರ್ಗಿಕ ಮೀನು, ಸೀಗಡಿ, ಏಡಿ ಬೆಳೆಸಲಾಗುತ್ತಿತ್ತು’ ಎಂದು ಹೇಳಿದರು.

‘ಬಳಿಕ ಖಾರ್‌ಲ್ಯಾಂಡ್ ಬಂಡ್ ನಿರ್ವಹಣೆ ಇಲ್ಲದೆ ನೆರೆ ಹಾಗೂ ಉಪ್ಪು ನೀರು ನುಗ್ಗಿ ರೈತರ ಬೆಳೆ ಹಾಳಾಯಿತು. ಕೃಷಿಯಲ್ಲಿ ರೈತರು ಆಸಕ್ತಿ ಕಳೆದುಕೊಂಡು ಕೃಷಿ ಪದ್ಧತಿ ನಶಿಸುವಂತಾಗಿದೆ. ನಾವೆಲ್ಲ ಸಮಸ್ಯೆಯನ್ನು ಚೆನ್ನೈನ ಎಂ.ಎಸ್.ಸ್ವಾಮಿನಾಥನ್ ಪ್ರತಿಷ್ಠಾನ, ಚಿಕ್ಕ ನೀರಾವರಿ ಇಲಾಖೆ ಗಮನಕ್ಕೆ ತಂದೆವು. ಅವರ ಸಲಹೆ ಮೇರೆಗೆ ಕೃಷಿ ವಿಜ್ಞಾನಿಗಳನ್ನು ಸಂಪರ್ಕಿಸಿ ಬಂಡ್ ನಿರ್ಮಾಣಕ್ಕೆ ಮನವಿ ಮಾಡಿದೆವು. ವಿಶ್ವ ಬ್ಯಾಂಕ್ ನೆರವಿನ ಯೋಜನೆಯಡಿ ಈಗ ₹ 32 ಕೋಟಿ ಮೊತ್ತ ಮಂಜೂರಾಗಿದೆ. ಇದು ರೈತರ ಮೂರು ವರ್ಷಗಳ ಹೋರಾಟದ ಫಲ’ ಎಂದರು.

ಹಲವು ಕಾಮಗಾರಿ: ಚಂಡಮಾರುತ ಅಪಾಯ ಉಪಶಮನ ಯೋಜನೆಯಡಿ ಮಾಣಿಕಟ್ಟಾ, ಹೋರಿಹೋಳಿ, ತುಂಬ್ಲೆಕಟ್ಟಾ, ಕಲ್ಲಕಟ್ಟಾ, ಹಾಗೂ ಕಾಗಾಲ ಗಜನಿಯ 7.8 ಕಿ.ಮೀ. ಉದ್ದದ ಬಂಡ್ ದುರಸ್ತಿ ಕಾರ್ಯ ನಡೆಯಲಿದೆ ಎಂದು ಸಿ.ಆರ್.ನಾಯ್ಕ ತಿಳಿಸಿದರು.

ಅಲ್ಲಲ್ಲಿ ನೀರು ಒಳಗೆ– ಹೊರಗೆ ಹರಿಯುವ ಎಂಟು ಬೃಹತ್ ಗೇಟ್‌ಗಳನ್ನು ನಿರ್ಮಿಸಲಾಗುವುದು. ಕಗ್ಗ ಭತ್ತ ಗಜನಿಗೆ ನೆರೆ ನೀರು, ಉಪ್ಪು ನೀರು ನುಗ್ಗದಂತೆ ಒಂದು ಮೀಟರ್ ಎತ್ತರ ಹಾಗೂ ಅಗಲ ಅಳತೆಯಲ್ಲಿ ವೈಜ್ಞಾನಿಕವಾಗಿ ತಡೆ ಗೋಡೆ ದುರಸ್ತಿ ಮಾಡಲಾಗುತ್ತದೆ. ಇದರಿಂದ ಬತ್ತ ಹಾಗೂ ಮೀನು ಬೇಸಾಯಕ್ಕೆ ಅನುಕೂಲವಾಗಲಿದೆ. ಮಳೆಗಾಲದ ನಂತರ ಗುತ್ತಿಗೆದಾರರು ಕಾಮಗಾರಿ ಆರಂಭಸಲಿದ್ದಾರೆ ಎಂದರು.

ಸಭೆಯಲ್ಲಿ ರೈತ ಮುಖಂಡರಾದ ಶ್ರೀಧರ ಪೈ, ನಾರಾಯಣ ಪಟಗಾರ, ಜನಾರ್ಧನ ನಾಯ್ಕ, ಮಾಣಿ ಗೌಡ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು