ಕೊಕ್ಕೊದ ಸಾಧಕ ಅಥ್ಲೆಟಿಕ್ಸ್‌ನ ‘ಕಿರಣ’

7
ಮುಂಡಗೋಡ: ಕ್ರೀಡಾಸಕ್ತ ಮಕ್ಕಳಿಗೆ ತರಬೇತಿ ನೀಡುತ್ತಿರುವ ಯುವಕ

ಕೊಕ್ಕೊದ ಸಾಧಕ ಅಥ್ಲೆಟಿಕ್ಸ್‌ನ ‘ಕಿರಣ’

Published:
Updated:
Deccan Herald

ಮುಂಡಗೋಡ: ಸತತ ಮೂರು ವರ್ಷ ಕೊಕ್ಕೊ ಕ್ರೀಡೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ‘ಬ್ಲೂ’ ಆಗಿರುವ ಪಟ್ಟಣದ ಕಿರಣ ಚವ್ಹಾಣ ಸದ್ಯ ‘ಬ್ರಿಡ್ಜಸ್ ಆಫ್ ಸ್ಪೋರ್ಟ್ಸ್‌’ನಲ್ಲಿ ಅಥ್ಲೆಟಿಕ್‌ ತರಬೇತುದಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬೆಂಗಳೂರು ಮೂಲದ ಎನ್‌ಜಿಒ ‘ಬ್ರಿಡ್ಜಸ್‌ ಆಫ್‌ ಸ್ಪೋರ್ಟ್ಸ್‌’ ರಾಜ್ಯದ ವಿವಿಧೆಡೆ ಕ್ರೀಡೆಯಲ್ಲಿ ಆಸಕ್ತ ಮಕ್ಕಳನ್ನು ಗುರುತಿಸಿ ತರಬೇತಿ ನೀಡುತ್ತಿದೆ. ಕೊಕ್ಕೊ ಹಾಗೂ ಅಥ್ಲೆಟಿಕ್ಸ್‌ಗೆ ಹೆಚ್ಚಿನ ಒತ್ತು ನೀಡುತ್ತಿದೆ.

ಸಾಧನೆ: ಎಂಟು ವರ್ಷಗಳಿಂದ ಕೊಕ್ಕೊ ಹಾಗೂ 400 ಮೀಟರ್‌ ಓಟದಲ್ಲಿ ಸಾಧನೆ ಮಾಡಿರುವ ಕಿರಣ ಚವ್ಹಾಣ, ಸ್ನಾತಕೋತ್ತರ ಪದವೀಧರ. 2012ರಿಂದ ಮೂರು ವರ್ಷ ಆಂಧ್ರಪ್ರದೇಶ, ಕೇರಳ, ತಮಿಳುನಾಡಿನಲ್ಲಿ ನಡೆದ ರಾಷ್ಟ್ರಮಟ್ಟದ ಕೊಕ್ಕೊ ಪಂದ್ಯಾವಳಿಗಳಲ್ಲಿ ‘ಕೆಯುಡಿ ಧಾರವಾಡ’ ತಂಡವನ್ನು ಪ್ರತಿನಿಧಿಸಿದ್ದಾರೆ.

ಮೂರು ಸಲ ರಾಷ್ಟ್ರೀಯ ಸೀನಿಯರ್‌ ಚಾಂಪಿಯನ್ಸ್ ಕ್ಯಾಂಪ್‌ನಲ್ಲಿ ಭಾಗಿಯಾಗಿದ್ದಾರೆ. ಮೈಸೂರು ದಸರಾ ಅಂಗವಾಗಿ ನಡೆದ ಕೊಕ್ಕೊ ಕ್ರೀಡೆಯಲ್ಲಿ ಐದು ಸಲ ಬಂಗಾರದ ಪದಕಗಳನ್ನು ಗೆದ್ದಿರುವುದು ವಿಶೇಷ. ದಕ್ಷಿಣ ವಲಯ ಹಿರಿಯರ ವಿಭಾಗದಲ್ಲಿ ಬಂಗಾರ, ಬೆಳ್ಳಿ ಪದಕ ಹಾಗೂ ರಾಷ್ಟ್ರೀಯ ಹಿರಿಯರ ವಿಭಾಗದಲ್ಲಿ ಕಂಚು ಸಹ ಮುಡಿಗೇರಿಸಿಕೊಂಡಿದ್ದಾರೆ. ರಾಜ್ಯಮಟ್ಟದ 400 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಗೆದ್ದುಕೊಂಡಿದ್ದಾರೆ.

‘ಕೊಕ್ಕೊ, ಓಟದಲ್ಲಿ ಹೆಚ್ಚು ಆಸಕ್ತಿ’: ‘ಕೊಕ್ಕೊ ಹಾಗೂ ಓಟದಲ್ಲಿ ಹೆಚ್ಚು ಆಸಕ್ತಿಯಿದೆ. ಒಂದು ವರ್ಷದಿಂದ ಬ್ರಿಡ್ಜಸ್‌ ಆಫ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. 14 ವರ್ಷ ವಯೋಮಿತಿ ಒಳಗಿನ ತಾಲ್ಲೂಕಿನ 60 ಮಕ್ಕಳಿಗೆ 100, 200 ಹಾಗೂ 400 ಮೀಟರ್‌ ಓಟದ ತರಬೇತಿ ನೀಡುತ್ತಿದ್ದೇನೆ. ಇವರಲ್ಲಿ ನಾಲ್ವರು ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ’ ಎಂದು ಕಿರಣ ಚವ್ಹಾಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೊಕ್ಕೊ ಕ್ರೀಡೆಗೆ ಹೆಚ್ಚಿನ ಶ್ರಮ, ಸಮಯ ಬೇಕು. ಅಲ್ಲದೇ ಮಿಂಚಲು ಅವಕಾಶಗಳೂ ಕಡಿಮೆ. ಆದರೆ ಅಥ್ಲೆಟಿಕ್ಸ್‌ನಲ್ಲಿ ಸಾಧನೆ ಮಾಡಲು ಸಾಕಷ್ಟು ಅವಕಾಶಗಳಿವೆ. ಇದಕ್ಕಾಗಿ ಕೊಕ್ಕೊಗಿಂತ ರನ್ನಿಂಗ್‌ಗೆ ಹೆಚ್ಚು ಒತ್ತು ನೀಡುತ್ತಿದ್ದೇನೆ’ ಎಂದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !