ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ವಿದ್ಯುತ್ ಲೋಕೊದ ಸಂಚಾರ ಯಶಸ್ವಿ

ತೋಕೂರಿನಿಂದ ಕಾರವಾರಕ್ಕೆ ಮೊದಲ ಬಾರಿ ಪ್ರಯಾಣ; ಆರ್‌.ಎಸ್‌.ಸಿ ಪ್ರಮಾಣ ಪತ್ರ ನಿರೀಕ್ಷೆ
Last Updated 9 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಕಾರವಾರ: ಕೊಂಕಣ ರೈಲು ಮಾರ್ಗದ ವಿದ್ಯುದೀಕರಣ ಕಾರ್ಯ ರಾಜ್ಯದಲ್ಲಿ ಪೂರ್ಣಗೊಂಡಿದೆ. ತೋಕೂರಿನಿಂದ ಕಾರವಾರದವರೆಗೆ ಮೊದಲ ಬಾರಿ ನಡೆಸಿದ ವಿದ್ಯುತ್ ಚಾಲಿತ ಲೋಕೊದ (ಎಂಜಿನ್) ಪರೀಕ್ಷಾರ್ಥ ಸಂಚಾರ ಯಶಸ್ವಿಯಾಗಿದೆ.

ದಕ್ಷಿಣ ಕನ್ನಡದ ತೋಕೂರಿನಿಂದ ಉಡುಪಿ ಜಿಲ್ಲೆಯ ಬಿಜೂರುವರೆಗೆ ಸುಮಾರು 105 ಕಿಲೋಮೀಟರ್ ಮಾರ್ಗದ ವಿದ್ಯುದೀಕರಣ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಇದಕ್ಕೆ ರೈಲ್ವೆ ಸುರಕ್ಷತಾ ಆಯುಕ್ತರು (ಆರ್.ಎಸ್.ಸಿ) ಕಳೆದ ವರ್ಷ ಜನವರಿಯಲ್ಲಿ ಪ್ರಮಾಣಪತ್ರ ನೀಡಿದ್ದು, ರೈಲುಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿದ್ದಾರೆ.

ಉತ್ತರ ಕನ್ನಡದಲ್ಲೂ ವಿದ್ಯುದೀಕರಣ ಸಂಪೂರ್ಣವಾಗಿದ್ದು, ಮಾರ್ಚ್ 7ರಂದು ಕೊಂಕಣ ರೈಲ್ವೆಯು ಲೋಕೋದ ಪರೀಕ್ಷಾರ್ಥ ಸಂಚಾರ ಹಮ್ಮಿಕೊಂಡಿತ್ತು. ಗರಿಷ್ಠ 110 ಕಿಲೋಮೀಟರ್‌ ವೇಗದಲ್ಲೂ ಯಾವುದೇ ತಾಂತ್ರಿಕ ಸಮಸ್ಯೆಯಿಲ್ಲದೇ ಸಂಚರಿಸಿದೆ. ಇದು ನಿಗಮದ ಅಧಿಕಾರಿಗಳ ಮತ್ತು ಪ್ರಯಾಣಿಕರ ಸಂತಸಕ್ಕೆ ಕಾರಣವಾಗಿದೆ.

‘ಕೊಂಕಣ ರೈಲ್ವೆ ನಿಗಮ ಈ ಪರೀಕ್ಷೆಯಲ್ಲಿ ಯಶಸ್ವಿಯಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸುವಂತೆ ರೈಲ್ವೆ ಸುರಕ್ಷತಾ ಆಯುಕ್ತರ ಕಚೇರಿಗೆ ಪತ್ರ ಮುಖೇನ ಮನವಿ ಮಾಡಿದ್ದೇವೆ. ಅತಿ ಶೀಘ್ರದಲ್ಲೇ ಅವರು ಪರಿಶೀಲಿಸುವ ನಿರೀಕ್ಷೆಯಿದೆ’ ಎಂದು ನಿಗಮದ ಪ್ರಾದೇಶಿಕ ವ್ಯಸ್ಥಾಪಕ ಬಿ.ಬಿ.ನಿಕ್ಕಂ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತೋಕೂರಿನಿಂದ ಬೆಳಿಗ್ಗೆ 9.40ಕ್ಕೆ ಸಂಚಾರ ಆರಂಭಿಸಿದ ಎಂಜಿನ್, ಮಧ್ಯಾಹ್ನ 12.44ಕ್ಕೆ ಕಾರವಾರಕ್ಕೆ ಬಂತು. 1.40ಕ್ಕೆ ಮರು ಪ್ರಯಾಣ ಆರಂಭಿಸಿ ಸಂಜೆ 4.10ಕ್ಕೆ ತೋಕೂರಿಗೆ ತಲುಪಿತು. ಮಾರ್ಗ ಮಧ್ಯೆ 22 ನಿಲ್ದಾಣಗಳಿದ್ದು, ಕೆಲವೆಡೆ ನಿಲುಗಡೆ ಮಾಡಿ ಪ್ರಯಾಣ ಮುಂದುವರಿಸಲಾಗಿದೆ. ಎಲ್ಲೂ ಯಾವುದೇ ಸಮಸ್ಯೆ ಕಂಡುಬಂದಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.

ಮಹಾರಾಷ್ಟ್ರದ ರಾಯಘಡ ಜಿಲ್ಲೆಯ ರೋಹಾದಿಂದ ರತ್ನಗಿರಿವರೆಗಿನ ಮಾರ್ಗದಲ್ಲಿ ಮಾರ್ಚ್ 7ರಂದು ಯಶಸ್ವಿ ಪರೀಕ್ಷಾರ್ಥ ಸಂಚಾರ ಮಾಡಲಾಗಿತ್ತು. ಇತ್ತ ಗೋವಾದ ಮಡಗಾಂವ್‌ನಿಂದ ಮಹಾರಾಷ್ಟ್ರದ ಕರ್ಮಾಲಿವರೆಗಿನ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಿದೆ.

ಕೊಂಕಣ ರೈಲ್ವೆ ಮಾರ್ಗವು ಒಟ್ಟು 756 ಕಿಲೋಮೀಟರ್ ಉದ್ದವಿದ್ದು, ಮಹಾರಾಷ್ಟ್ರದ ರೋಹಾದಿಂದ ಮಂಗಳೂರು ಸಮೀಪದ ತೋಕೂರಿನವರೆಗೆ ಚಾಚಿಕೊಂಡಿದೆ. ಈ ಮಾರ್ಗವನ್ನು ₹ 1,100 ಕೋಟಿ ವೆಚ್ಚದಲ್ಲಿ ವಿದ್ಯುದೀಕರಣ ಮಾಡಲಾಗುತ್ತಿದೆ. ಇದು ಪೂರ್ಣಗೊಂಡ ಬಳಿಕ ಪಶ್ಚಿಮ ಕರಾವಳಿಯಲ್ಲಿ ಡೀಸೆಲ್ ಚಾಲಿತ ಲೋಕೊಗಳ ಸದ್ದು ಮರೆಯಾಗಲಿದೆ.

ಸಬ್‌ಸ್ಟೇಷನ್‌ಗಳ ಸ್ಥಾಪನೆ:ರೈಲ್ವೆ ಮಾರ್ಗಕ್ಕೆ ಬೇಕಾಗುವ ವಿದ್ಯುತ್ ಪೂರೈಕೆಗೆ ಸಬ್‌ ಸ್ಟೇಷನ್‌ಗಳ ಸ್ಥಾಪನೆ ಪೂರ್ಣಗೊಂಡಿದ್ದು, ಸಣ್ಣಪುಟ್ಟ ಕೆಲಸಗಳಷ್ಟೇ ಬಾಕಿಯಿವೆ. ಕಾರವಾರ, ಮುರ್ಡೇಶ್ವರ, ಸೇನಾಪುರ, ಬಾರ್ಕೂರು, ಮೂಲ್ಕಿಯಲ್ಲಿ ಸಬ್‌ ಸ್ಟೇಷನ್ ನಿರ್ಮಾಣವಾಗಿವೆ. ಇದೇರೀತಿ, ಕೊಂಕಣ ರೈಲ್ವೆಯ ಮಾರ್ಗದುದ್ದಕ್ಕೂ ಸ್ಥಾಪನೆ ಮಾಡಲಾಗುತ್ತಿದೆ. ಈ ವರ್ಷ ಡಿಸೆಂಬರ್‌ಗೂ ಮೊದಲೇ ವಿದ್ಯುತ್ ಚಾಲಿತ ರೈಲುಗಳ ಸಂಚಾರ ಈ ಮಾರ್ಗದಲ್ಲಿ ಆರಂಭವಾಗುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT