ಋಷಿ–ಕೃಷಿ ಸಂಸ್ಕೃತಿಯಿಂದ ಖುಷಿ: ಎಸ್.ಆರ್.ಸತೀಶ್ಚಂದ್ರ

ಶುಕ್ರವಾರ, ಮೇ 24, 2019
29 °C
ಸ್ವರ್ಣವಲ್ಲಿಯಲ್ಲಿ ಎರಡು ದಿನಗಳ ಕೃಷಿ ಜಯಂತಿ ಮುಕ್ತಾಯ

ಋಷಿ–ಕೃಷಿ ಸಂಸ್ಕೃತಿಯಿಂದ ಖುಷಿ: ಎಸ್.ಆರ್.ಸತೀಶ್ಚಂದ್ರ

Published:
Updated:
Prajavani

ಶಿರಸಿ: ಋಷಿ ಸಂಸ್ಕೃತಿ ಮತ್ತು ಕೃಷಿ ಸಂಸ್ಕೃತಿ ಸಮ್ಮಿಲನವಾದರೆ ಖುಷಿ ಸಂಸ್ಕೃತಿ ಈ ನೆಲದಲ್ಲಿ ಚಿಗುರುತ್ತದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಹೇಳಿದರು.

ತಾಲ್ಲೂಕಿನ ಸ್ವರ್ಣವಲ್ಲಿ ಮಠದಲ್ಲಿ ಶುಕ್ರವಾರ ಮುಕ್ತಾಯಗೊಂಡ ಕೃಷಿ ಜಯಂತಿಯ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೃಷಿ ಈ ನೆಲದ ಪರಂಪರೆಯಾಗಿದೆ. ಕೃಷಿಕರು ಖುಷಿಯಾಗಿರಲು ಋಷಿಗಳ ಮಾರ್ಗದರ್ಶನ ಬೇಕು. ಭಾರತ ಶಕ್ತಿಶಾಲಿಯಾಗಿ ಬೆಳೆಯಲು ಇಲ್ಲಿನ ಆಧ್ಯಾತ್ಮಿಕ ಕೇಂದ್ರಗಳು ಕಾರಣವಾಗಿವೆ. ನೆಲಮೂಲದ ಸಂಸ್ಕೃತಿಯೆಡೆ ಗೌರವವಿರುವ ಧಾರ್ಮಿಕ ಮುಖ್ಯಸ್ಥರು, ಗುರುಗಳ ಕಾರಣದಿಂದ ದೇಶ ವಿಶ್ವಗುರುವಾಗುವತ್ತ ದಾಪುಗಾಲು ಇಡುತ್ತಿದೆ. ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವುದು ಸರ್ಕಾರ, ವಿಶ್ವವಿದ್ಯಾಲಯ, ಸರ್ಕಾರಿ ಇಲಾಖೆಗಳ ಕೆಲಸವಾಗಿದೆ. ಆದರೆ ಈ ಕೆಲಸವನ್ನು ಅಧ್ಯಾತ್ಮ ಕೇಂದ್ರವೊಂದು ಮಾಡುತ್ತಿರುವುದು ಶ್ಲಾಘನೀಯ ಎಂದರು.

ಕೃಷಿ ತಜ್ಞ ಶಂಕರ ಭಟ್ಟ ಬದನಾಜೆ ಮಾತನಾಡಿ, ‘ಕೃಷಿ ಸಂಸ್ಕೃತಿ ವಿಸ್ತರಿಸಲು ಜನರು ಕೃಷಿ ಹಾಗೂ ಕೃಷಿ ಪೂರಕ ಉತ್ಪನ್ನಗಳನ್ನೇ ಹೆಚ್ಚಾಗಿ ಬಳಸಬೇಕು. ಹಾಗಾದಾಗ ಕೃಷಿ ಪರಂಪರೆ ತನ್ನಿಂದ ತಾನಾಗಿಯೇ ಬೆಳೆಯುತ್ತದೆ’ ಎಂದರು. ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಜಿ.ವಿ.ಹೆಗಡೆ ಹುಳಗೋಳ ನಿರ್ಣಯ ಮಂಡಿಸಿದರು. ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ, ಗ್ರಾಮಾಭ್ಯುದಯದ ಅಧ್ಯಕ್ಷ ಶಿವಾನಂದ ದೀಕ್ಷಿತ್ ಇದ್ದರು. ಶಾಂಭವಿ ಭಟ್ಟ ಪ್ರಾರ್ಥಿಸಿದರು. ಆರ್.ಎನ್.ಹೆಗಡೆ ಸ್ವಾಗತಿಸಿದರು. ಸುರೇಶ ಹಕ್ಕಿಮನೆ ನಿರೂಪಿಸಿದರು. ಆರ್.ಎಸ್.ಹೆಗಡೆ ವಂದಿಸಿದರು.

ಕೃಷಿ ಜಯಂತಿ ನಿರ್ಣಯ:

* ಬಿದಿರು ಬೆಳೆಯನ್ನು ಉತ್ತೇಜಿಸಲು ಅಂಗಾಂಶ ಕಸಿಯಿಂದ ತಯಾರಾದ ಉತ್ತಮ ಸಸಿಗಳನ್ನು ರೈತರಿಗೆ ಸುಲಭ ದರದಲ್ಲಿ ಅರಣ್ಯ ಇಲಾಖೆ ಒದಗಿಸಬೇಕು

* ಮಾರುಕಟ್ಟೆಯಲ್ಲಿ ದೊರೆಯುವ ಸಾವಯವ ಗೊಬ್ಬರಗಳ ಗುಣಮಟ್ಟ ಕಾಪಾಡಲು ಕೃಷಿ ಇಲಾಖೆ ಬಿಗಿಯಾದ ಕ್ರಮ ಕೈಗೊಳ್ಳಬೇಕು

* ಬೇಸಿಗೆಯ ಬಿಸಿಲಿನಿಂದ ಬೆಳೆ ಕಾಪಾಡಲು ಮಲೆನಾಡಿನಲ್ಲಿ ಹರಿಯುವ ಸಣ್ಣ ಹಳ್ಳಗಳಲ್ಲಿ ಏತ ನೀರಾವರಿ ಯೋಜನೆ ಕೈಗೊಳ್ಳಬೇಕು

* ಕೃಷಿಕರಿಗೆ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳು ಏಕಗವಾಕ್ಷಿ ವ್ಯವಸ್ಥೆಯಲ್ಲಿ ಪ್ರಾಥಮಿಕ ಸಹಕಾರಿ ಸಂಘದಲ್ಲಿ ಸಿಗುವಂತಾಗಬೇಕು

* ಕೃಷಿಕರ ವಾಸ್ತವ್ಯ ಸ್ಥಳವಾದ ಬೆಟ್ಟ, ಹಾಡಿ, ಗಾಂವಠಾಣಾ ಮುಂತಾದ ಸ್ಥಳಗಳನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸುವುದು ಕಷ್ಟದ ಸಂಗತಿಯಾದ್ದರಿಂದ ಕೃಷಿಕರಿಗೆ ಅಗತ್ಯ ಗೃಹ ಸಾಲ ಸೌಲಭ್ಯ ದೊರೆಯುತ್ತಿಲ್ಲ. ಕೃಷಿಕರ ಗೃಹ ನಿರ್ಮಾಣ ಸಂಬಂಧಿಸಿ ಕಾನೂನು ಸಡಿಲಗೊಳಿಸಿ ಸಲೀಸಾಗಿ ಸಾಲ ದೊರಕುವಂತೆ ಮಾಡಬೇಕು

* ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಬ್ರಿಟಿಷ್ ವಸಹಾತು ಅರಣ್ಯ ನೀತಿ ಜಾರಿಯಲ್ಲಿದೆ. ರೈತ ಬೆಳೆದ ಅರಣ್ಯ ಉತ್ಪನ್ನ, ಮರ ಮಟ್ಟುಗಳನ್ನು‌ ಮಾರಲು ಅರಣ್ಯ ಇಲಾಖೆ‌ಯ ಶೋಷಣೆ ಎದುರಿಸುವಂತಾಗಿದೆ. ಕಾನೂನು ಬದಲಿಸಿ ಪಂಚಾಯ್ತಿ ಮಟ್ಟದಲ್ಲಿ ಪರವಾನಿಗೆ ದೊರಕುವಂತಾಗಬೇಕು

* ಕೃಷಿ ಮತ್ತು ತೋಟಗಾರಿಕಾ ವ್ಯವಸಾಯ ಕ್ರಮವನ್ನು ಪ್ರೌಢಶಾಲಾ ಪಠ್ಯಕ್ರಮದಲ್ಲಿ ಅಳವಡಿಸಿ ಶಾಲೆಗಳಲ್ಲಿ ಅದರ ಪ್ರಾಯೋಗಿಕ ಶಿಕ್ಷಣ ಕಡ್ಡಾಯಗೊಳಿಸಬೇಕು

* ಅಂತರ್ಜಲ ಮಟ್ಟ ಹೆಚ್ಚಿಸಲು ಪ್ರತಿಯೊಂದು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಮಳೆ‌ಕೊಯ್ಲು ಮತ್ತು ಇಂಗುಗುಂಡಿ ನಿರ್ಮಿಸಲು ಸರ್ಕಾರ ಪ್ರೋತ್ಸಾಹಧನ ನೀಡಬೇಕು

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !