ರೈಲ್ವೆ ‘ಟರ್ಮಿನಲ್’ ನಿರ್ಮಾಣಕ್ಕೆ ಆಗ್ರಹ

ಕಾರವಾರ: ಇಲ್ಲಿನ ಶಿರವಾಡ ರೈಲು ನಿಲ್ದಾಣವನ್ನು ‘ಟರ್ಮಿನಲ್’ ಆಗಿ ಬದಲಾಯಿಸಬೇಕು. ಕಾರವಾರ– ಬೆಂಗಳೂರು ರೈಲಿನ ಸಮಯವನ್ನು ಬದಲಿಸಬಾರದು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ (ನಾರಾಯಣ ಗೌಡ ಬಣ) ಕಾರ್ಯಕರ್ತರು ರೈಲು ನಿಲ್ದಾಣಕ್ಕೆ ಸೋಮವಾರ ಮುತ್ತಿಗೆ ಹಾಕಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮುಖಂಡ ರಾಜೀವ ಗಾಂವಕರ, ‘ಕಾರವಾರದಲ್ಲಿ ಟರ್ಮಿನಲ್ ನಿರ್ಮಾಣ ಮಾಡಬೇಕು ಎಂಬ ಬೇಡಿಕೆಯು 30 ವರ್ಷಗಳಿಂದ ಬಾಕಿದೆ. ಬೆಂಗಳೂರಿನಿಂದ ಕಾರವಾರಕ್ಕೆ ಬರುವ ರೈಲನ್ನು ನಿರ್ವಹಣೆ ಸಲುವಾಗಿ ಗೋವಾದ ಮಡಗಾಂವ್‌ಗೆ ಕಳುಹಿಸಲಾಗುತ್ತದೆ. ಇಂಧನ ತುಂಬಿಸಿಕೊಳ್ಳುವುದು, ಸ್ವಚ್ಛತೆ ಹಾಗೂ ಇತರ ನಿರ್ವಹಣೆಯನ್ನು ಅಲ್ಲಿ ಮಾಡಲಾಗುತ್ತದೆ. ಖಾಲಿ ರೈಲನ್ನು ದಿನವೂ ಸುಮಾರು 120 ಕಿಲೋಮೀಟರ್ ಹೋಗುವಂತೆ ಮಾಡುವುದು ವ್ಯರ್ಥ ವೆಚ್ಚವಾಗುತ್ತದೆ’ ಎಂದು ವಿವರಿಸಿದರು.
‘ಟರ್ಮಿನಲ್ ಇಲ್ಲದಿದ್ದರೆ ಕರಾವಳಿಯಲ್ಲಿ ರೈಲು ಸೇವೆಗಳ ಅಭಿವೃದ್ಧಿಯಾಗದು. ಈ ಹಿಂದೆ ರೈಲ್ವೆ ಸಚಿವರಾಗಿದ್ದ ಮಮತಾ ಬ್ಯಾನರ್ಜಿ ಅವರನ್ನೂ ಭೇಟಿಯಾಗಿ ವಿವರಿಸಲಾಗಿತ್ತು. ಅವರೂ ಅದಕ್ಕೆ ಸಹಮತ ವ್ಯಕ್ತಪಡಿಸಿದ್ದರು. ಆದರೆ, ಬಳಿಕ ಯಾವುದೇ ಉಪಯೋಗವಾಗಲಿಲ್ಲ. ಹಾಗಾಗಿ ಇಲ್ಲಿ ಟರ್ಮಿನಲ್ ನಿಲ್ದಾಣ ಆಗುವ ತನಕ ನಮ್ಮ ಹೋರಾಟ ನಿಲ್ಲಬಾರದು’ ಎಂದು ಹೇಳಿದರು.
‘ರಾಜ್ಯದ ಕರಾವಳಿಯಲ್ಲಿ ಸುಮಾರು 270 ಕಿಲೋಮೀಟರ್ ಉದ್ದಕ್ಕೆ ಕೊಂಕಣರೈಲ್ವೆ ಹಳಿಗಳಿವೆ. ಈ ಯೋಜನೆಗೆ ಜಮೀನು ಕಳೆದುಕೊಂಡವರ ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡುವಲ್ಲಿ ಕೂಡ ಅನ್ಯಾಯ ಮಾಡಲಾಗಿದೆ. ನಿಗಮದ ಉನ್ನತ ಸ್ಥರಗಳ ಬಹುತೇಕ ಹುದ್ದೆಗಳಲ್ಲಿ ಅನ್ಯರಾಜ್ಯಗಳವರೇ ಇದ್ದಾರೆ. ಕನ್ನಡಿಗರನ್ನು ‘ಗ್ರೂಪ್ ಡಿ’ ದರ್ಜೆಯ ನೌಕರಿಗೆ ಸೀಮಿತಗೊಳಿಸಲಾಗಿದೆ. ಯೋಜನೆಯ ಎರಡನೇ ಅತಿದೊಡ್ಡ ಸಹಭಾಗಿ ಗಳಾಗಿರುವ ಕನ್ನಡಿಗರಿಗೆ ನೌಕರಿಗಳಲ್ಲಿ ಸಮಾನ ಪಾಲು ಸಿಗಬೇಕು’ ಎಂದು ಆಗ್ರಹಿಸಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಭಾಸ್ಕರ ಪಟಗಾರ ಮಾತನಾಡಿ, ‘ಕರಾವಳಿಯ ರೈಲ್ವೆ ಉದ್ಯೋಗಗಳಿಗೆ ಕರಾವಳಿ ಕರ್ನಾಟಕದ ಅಭ್ಯರ್ಥಿಗಳನ್ನೇ ನೇಮಿಸಬೇಕು. ಕನ್ನಡ ಬಲ್ಲ ಅಭ್ಯರ್ಥಿಗಳ ನೇಮಕಾತಿಗಾಗಿ ವಿಶೇಷ ಮೀಸಲಾತಿ ನಿಗದಿಪಡಿಸಬೇಕು’ ಎಂದು ಒತ್ತಾಯಿಸಿದರು.
‘ಸಮಯ ಬದಲಾವಣೆ ಸಲ್ಲದು’
‘ಕರಾವಳಿ ಜನರ ಜೀವನಾಡಿಯಂತಿರುವ ಕಾರವಾರ– ಬೆಂಗಳೂರು ರೈಲಿನ ಸಮಯ ಬದಲಾವಣೆ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ. ಸರಕು ಸಾಗಣೆ ರೈಲು, ರೋರೋ ರೈಲು, ದಕ್ಷಿಣ ರೈಲ್ವೆ ರೈಲುಗಳ ಸಂಚಾರಕ್ಕಾಗಿ ಈ ರೈಲಿನ ಸಂಚಾರವನ್ನು ತಡೆಹಿಡಿಯುವ ಪದ್ಧತಿ ನಿಲ್ಲಬೇಕು. ಮಂಗಳೂರಿನ ಪಡೀಲ್ ಬೈಪಾಸ್ ಮೂಲಕ ಬೆಂಗಳೂರಿಗೆ ರೈಲುಗಳ ಸಂಚಾರ ಮುಂದುವರಿಸಬೇಕು’ ಎಂದು ಭಾಸ್ಕರ ಪಟಗಾರ ಆಗ್ರಹಿಸಿದರು.
ಕೊಂಕಣ ರೈಲ್ವೆಯ ಪ್ರಾದೇಶಿಕ ರೈಲ್ವೆ ವ್ಯವಸ್ಥಾಪಕ ಭಾಳಾ ಸಾಹೇಬ್ ನಿಕಂ ಮನವಿ ಸ್ವೀಕರಿಸಿ, ಬೇಡಿಕೆಗಳ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ನರೇಂದ್ರ ತಳೇಕರ್, ತಿಮ್ಮಪ್ಪ ನಾಯಕ, ಪೂರ್ಣಿಮಾ ಮಹೇಕರ್, ಅಶೋಕ ಗೌಡ, ಮೋಹನದಾಸ ಗೌಡ, ಹರೀಶ ಗೌಡ ಹಾಗೂ ಇತರ ಕಾರ್ಯಕರ್ತರು ಇದ್ದರು.
***
ಕೊಂಕಣ ರೈಲ್ವೆ ಯೋಜನೆಯಲ್ಲಿ ಅನ್ಯಾಯವಾಗದಂತೆ ತಡೆಯಲು ರಾಜಕೀಯ ಇಚ್ಛಾಶಕ್ತಿ ಕೊರತೆಯಲ್ಲ. ಜನಸಾಮಾನ್ಯರಲ್ಲಿ ಹೋರಾಟದ ಮನೋಭಾವ ಕಡಿಮೆಯಾಗಿದ್ದು ಕಾರಣ.
– ರಾಜೀವ ಗಾಂವಕರ, ಹೋರಾಟಗಾರ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.