ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಗೆ ಜನರಿಂದ ಹಣಕಾಸಿನ ನೆರವು

ನೆನಪಿನ ಸುರುಳಿ ಬಿಚ್ಚಿಟ್ಟ ಜನಸಂಘದ ಕಾರ್ಯಕರ್ತರಾಗಿದ್ದ ಶಂಭುಲಿಂಗ ಹೆಗಡೆ
Last Updated 25 ಮಾರ್ಚ್ 2019, 20:00 IST
ಅಕ್ಷರ ಗಾತ್ರ

ಶಿರಸಿ: ‘ಆಗ ಚುನಾವಣೆ ಬಂತೆಂದರೆ ಜನರು ‘ಚುನಾವಣಾ ಫಂಡ್’ ಎಂದು ಅಷ್ಟಿಷ್ಟು ಹಣ ಕೊಡುತ್ತಿದ್ದರು. ಸ್ಪರ್ಧಿಸುವ ಅಭ್ಯರ್ಥಿಯ ಪರ ಖರ್ಚಿಗೆ ಇದೇ ಹಣವೇ ಬಂಡವಾಳವಾಗಿತ್ತು’ ಎಂದು 1972ರ ಕಾಲದ ಚುನಾವಣೆಯ ನೆನಪು ಮಾಡಿಕೊಂಡರು ಆಗಿನ ಜನಸಂಘದ ಕಾರ್ಯಕರ್ತರಾಗಿದ್ದ ಶಂಭುಲಿಂಗ ಹೆಗಡೆ.

‘ಚುನಾವಣೆ ಪ್ರಚಾರಕ್ಕೆ ಸೈಕಲ್ಲೇ ವಾಹನ. ಕಾಲ್ನಡಿಗೆಯಲ್ಲಿ ಹೋಗುವಾಗ ಕೆಲವೊಮ್ಮೆ ನಾಟಾ ಹೊತ್ತು ಹೋಗುವ ಲಾರಿ ಸಿಕ್ಕರೆ ನಮ್ಮ ಅದೃಷ್ಟ. ಇಲ್ಲದಿದ್ದರೆ ದಿನಕ್ಕೆ 8–10 ಕಿ.ಮೀ ನಡೆದು, ಹಳ್ಳಿಗಳನ್ನು ತಲುಪಿ, ಮತ ಕೇಳುತ್ತಿದ್ದೆವು. ಅಲ್ಲಿಗೆ ಹೋದಾಗ ಜನರು ಚುನಾವಣೆ ಖರ್ಚಿಗೆಂದು ₹10ರಿಂದ ₹ 100ರವರೆಗೆ ಅವರ ಸಾಮರ್ಥ್ಯಕ್ಕೆ ತಕ್ಕಷ್ಟು ನೆರವಾಗುತ್ತಿದ್ದರು. ಅವರು ಕೊಟ್ಟ ಹಣಕ್ಕೆ ಪಕ್ಷದ ರಸೀದಿ ನೀಡುತ್ತಿದ್ದೆವು. ಬಿಳಿ ಹಾಳೆಯ ಮೇಲೆ ಕೆಂಪು ಶಾಯಿಯಲ್ಲಿ ದೀಪ ಬಿಡಿಸಿ, ಕಪ್ಪು ಶಾಯಿಯಲ್ಲಿ ಜನಸಂಘಕ್ಕೆ ಮತ ಕೊಡಿ ಎಂದು ಬರೆದು, ಗೋಡೆಗೆ ಅಂಟಿಸುತ್ತಿದ್ದೆವು’ ಎಂದು ಅವರು ನಾಲ್ಕು ದಶಕಗಳ ಹಿಂದಿನ ಚುನಾವಣೆಯ ಸ್ವಾರಸ್ಯ ತೆರೆದಿಟ್ಟರು.

‘1977ರ ಚುನಾವಣೆ ಹೊತ್ತಿಗೆ ಕರಪತ್ರ ಮುದ್ರಿಸುವ ವ್ಯವಸ್ಥೆ ಬಂತು. ಲಕ್ಷ್ಮೀನಾರಾಯಣ ಪ್ರೆಸ್‌ನ ಸುರೇಶ ಮರಾಠಿ ಅವರಲ್ಲಿ ಉದ್ರಿ ಮಾಡಿ, ಕರಪತ್ರ ಮುದ್ರಿಸಿದರೆ, ಮತ್ತೊಂದು ಚುನಾವಣೆ ಬರುವುದರೊಳಗಾಗಿ ಹಿಂದಿನ ಚುನಾವಣೆಯ ಸಾಲ ಬಾಕಿ ಅಂತೂ ತೀರಿರುತ್ತಿತ್ತು. ಆಗ ಹುಲೇಕಲ್ ಜಿಲ್ಲಾ ಪಂಚಾಯ್ತಿ ಕ್ಷೇತ್ರದ ಹೊಣೆ ನನ್ನದಾಗಿತ್ತು. ಸೈಕಲ್ ಮೇಲೆ ಹಳ್ಳಿಗೆ ಹೋಗುತ್ತಿದ್ದೆವು. ಆಗ ಹಳ್ಳಿಗರಿಗೆ ಕಾಂಗ್ರೆಸ್ ಬಿಟ್ಟರೆ ಬೇರೆ ಪಕ್ಷವೇ ಗೊತ್ತಿರಲಿಲ್ಲ. ಕೆಲವು ವಿದ್ಯಾವಂತರು, ಬಲವಾದ ವಿರೋಧ ಪಕ್ಷ ಹುಟ್ಟಬೇಕು ಎನ್ನುತ್ತಿದ್ದರು’ ಎಂದ ಅವರು, ಆಗಿನ ಜನಸಂಘದ ಕಾರ್ಯಕರ್ತರ ನಿಷ್ಠೆಯನ್ನು ಸ್ಮರಿಸಿದರು.

‘ಆರೆಂಟು ಕಾರ್ಯಕರ್ತರ ತಂಡ ಹಳ್ಳಿ ಮನೆಗಳಿಗೆ ಊಟದ ಹೊತ್ತಿನಲ್ಲಿ ಭೇಟಿ ಕೊಟ್ಟರೆ, ಅನಿರೀಕ್ಷಿತ ಅತಿಥಿಗಳಾದರೂ ನಮಗೆ ಊಟ ಸಿಗುತ್ತಿತ್ತು. ಮನೆಯವರು ಹೊಸದಾಗಿ ಅಡುಗೆ ಮಾಡಿಕೊಂಡು ಆನಂತರ ಊಟ ಮಾಡುತ್ತಿದ್ದರು. ಪ್ರಚಾರಕ್ಕೆ ಹೋಗುತ್ತಿದ್ದ ಎಲ್ಲ ಪಕ್ಷಗಳ ಕಾರ್ಯಕರ್ತರಿಗೂ ಇದೇ ಆತಿಥ್ಯ. ವರ್ಷಗಳು ಕಳೆದಂತೆ ಕಾರ್ಯಕರ್ತರು ಹೆಚ್ಚಾದರು. ಮನೆ ಊಟ ಹೋಗಿ, ಕಾರ್ಯಕರ್ತರಿಗೆ ಪಕ್ಷವೇ ಚಹಾ ಕೊಡುವ ರೂಢಿ ಬಂತು. ಸೇವೆಗೆ ಮುಡಿಪಾಗಿದ್ದ ಕಾರ್ಯಕರ್ತರು, ಸಂಬಳಕ್ಕೆ ದುಡಿಯುವ ವೃತ್ತಿಪರರಾದರು’ ಎಂದು ಬದಲಾದ ಕಾಲಚಕ್ರವನ್ನು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT