ಕೆಎಸ್‌ಒಯುನ ಎಲ್ಲ ಕೋರ್ಸ್‌ಗಳಿಗೆ ಅನುಮತಿ ಸಿಗುವ ವಿಶ್ವಾಸ: ಕುಲಪತಿ ಶಿವಲಿಂಗಯ್ಯ

7
ವಿದ್ಯಾರ್ಥಿಗಳ ಹಿತ ಕಾಯಲು ಬದ್ಧ: ಭರವಸೆ

ಕೆಎಸ್‌ಒಯುನ ಎಲ್ಲ ಕೋರ್ಸ್‌ಗಳಿಗೆ ಅನುಮತಿ ಸಿಗುವ ವಿಶ್ವಾಸ: ಕುಲಪತಿ ಶಿವಲಿಂಗಯ್ಯ

Published:
Updated:

ಕಾರವಾರ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ (ಕೆಎಸ್‌ಒಯು) ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಮುಂದಿನ ಐದು ವರ್ಷಗಳವರೆಗೆ ಮಾನ್ಯತೆ ನೀಡಿದೆ. 17 ತಾಂತ್ರಿಕೇತರ ಕೋರ್ಸ್‌ಗಳ ತರಗತಿಗಳನ್ನು ಆರಂಭಿಸಲು ಅನುಮತಿ ನೀಡಿದೆ. ವಿದ್ಯಾರ್ಥಿಗಳು ಆತಂಕ ಪಡಬೇಕಾಗಿಲ್ಲ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾವು 32 ಕೋರ್ಸ್‌ಗಳನ್ನು ಆರಂಭಿಸಲು ಅನುಮತಿ ಕೋರಿದ್ದೇವೆ. ಉಳಿದ 15 ಕೋರ್ಸ್‌ಗಳನ್ನು ಆರಂಭಿಸಲು ಅನುಮತಿ ಸಿಗುವ ಸಂಪೂರ್ಣ ವಿಶ್ವಾಸವಿದೆ. ವಿಶ್ವವಿದ್ಯಾಲಯಕ್ಕೆ ಈಗ ಕಾನೂನಾತ್ಮಕ ಸ್ಥಾನಮಾನ ಸಿಕ್ಕಿದೆ’ ಎಂದು ಸ್ಪಷ್ಟಪಡಿಸಿದರು.

ಯುಜಿಸಿ ನಿಯಮದ ಪ್ರಕಾರ ವಿಶ್ವವಿದ್ಯಾಲಯಕ್ಕೆ ಮಾನ್ಯತೆ ನೀಡಲು ಅಗತ್ಯ ಕಾಯಂ ಬೋಧಕ ಸಿಬ್ಬಂದಿಯಿರಬೇಕು. ಅದಕ್ಕಾಗಿ ಮೂವರು ಪ್ರೊಫೆಸರ್‌ಗಳ ಹುದ್ದೆ ಸೃಜಿಸಲಾಗಿದೆ. ಕಾಯಂ ಸಿಬ್ಬಂದಿ ನೇಮಕಾತಿಯಲ್ಲಿ ವಿಳಂಬವಾದರೆ ನಿವೃತ್ತ ಪ್ರಾಧ್ಯಾಪಕರನ್ನು ತಾತ್ಕಾಲಿಕವಾಗಿ ನೇಮಿಸಲಾಗುವುದು ಎಂದು ವಿವರಿಸಿದರು.

‘2102–13ರ ನಂತರದ ಕೋರ್ಸ್‌ಗಳಿಗೆ ಮಾನ್ಯತೆ ರದ್ದು ಮಾಡಿ 2015ರ ಜೂನ್‌ನಲ್ಲಿ ಯುಜಿಸಿ ಸಾರ್ವಜನಿಕ ಪ್ರಕಟಣೆ ಹೊರಡಿಸಿತು. ಇದರಿಂದ ಸುಮಾರು 95 ಸಾವಿರ ವಿದ್ಯಾರ್ಥಿಗಳಿಗೆ ತೊಂದರೆಯಾಯಿತು. ಆ ಅವಧಿಯಲ್ಲಿ ವಿದ್ಯಾಭ್ಯಾಸವನ್ನು ಅರ್ಧಕ್ಕೇ ನಿಲ್ಲಿಸಿದ ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪುನಃ ದಾಖಲಾತಿ ಮಾಡಿಕೊಳ್ಳಲು ಅವಕಾಶವಿದೆ. ಅವರಿಗೆ ಬೋಧನಾ ಶುಲ್ಕದಲ್ಲಿ ಶೇ 50ರಷ್ಟು ವಿನಾಯಿತಿಯಿದೆ’ ಎಂದು ತಿಳಿಸಿದರು.

ಪ್ರವೇಶ ಬಯಸುವ ವಿದ್ಯಾರ್ಥಿಗಳು ವೆಬ್‌ಸೈಟ್: www.ksoumysore.karnataka.gov.in ಇಲ್ಲಿಂದ ಅರ್ಜಿ ಹಾಗೂ ಶುಲ್ಕ ಪಾವತಿಯ ಚಲನ್ ಪಡೆದುಕೊಳ್ಳಬೇಕು. ಶುಲ್ಕ ಪಾವತಿಸಿದ ಬಳಿಕ ಅರ್ಜಿ ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಪ್ರಾದೇಶಿಕ ಕೇಂದ್ರಗಳಲ್ಲಿ ಸಲ್ಲಿಸಿ ಪ್ರವೇಶ ಪಡೆಯಬಹುದು. ತಮಗೆ ಹತ್ತಿರದ ಅಧ್ಯಯನ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ ಎಂದು ಹೇಳಿದರು.

ದೂರ ಶಿಕ್ಷಣದ ಮೂಲಕ ತಾಂತ್ರಿಕ ಶಿಕ್ಷಣ, ಹೊರ ರಾಜ್ಯಗಳಲ್ಲೂ ಕೋರ್ಸ್‌ಗಳನ್ನು ಆರಂಭಿಸಿದ್ದು, ಖಾಸಗಿ ಸಂಸ್ಥೆಗಳಿಗೆ ಫ್ರಾಂಚೈಸಿ ನೀಡಿದ್ದಕ್ಕೆ ಯುಜಿಸಿ ಆಕ್ಷೇಪ ವ್ಯಕ್ತಪಡಿಸಿತ್ತು. ತಾಂತ್ರಿಕ ಕೋರ್ಸ್‌ಗಳ ಬೋಧನೆ ಕುರಿತು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಅದರ ಆದೇಶದ ಪ್ರಕಾರ ನಡೆದುಕೊಳ್ಳಲಾಗುವುದು ಎಂದು ಹೇಳಿದರು.

ಪ್ರಾದೇಶಿಕ ಅಧ್ಯಯನ ಕೇಂದ್ರ: ಕೆಎಸ್ಒಯು ಕಾರವಾರದಲ್ಲಿ ಪ್ರಾದೇಶಿಕ ಅಧ್ಯಯನ ಕೇಂದ್ರ ಹೊಂದಿದೆ. ವಿಳಾಸ ಇಂತಿದೆ: ಮೊದಲನೇ ಮಹಡಿ, ಯುಎಸ್‌ಕೆವಿ ಹಳೆಯ ಕಟ್ಟಡ, ಸವಿತಾ ವೃತ್ತದ ಮುಖ್ಯ ರಸ್ತೆ, ಕಾರವಾರ – 583 301.

ಕಲಿಕಾ ಸಹಾಯ ಕೇಂದ್ರಗಳು

1. ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು, ಕಾರವಾರ. 

2. ಎಂಇಎಸ್ – ಎಂಎಂ ಕಲಾ ಮತ್ತು ವಿಜ್ಞಾನ ಕಾಲೇಜು, ಶಿರಸಿ.

3. ಡಾ.ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾನ ಕಾಲೇಜು, ಕುಮಟಾ.

4. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಪಿ.ಜಿ.ಸೆಂಟರ್, ಪ್ರಭಾತ್ ನಗರ, ಹೊನ್ನಾವರ.

ಕೆಎಸ್‌ಒಯು ಪ್ರಾದೇಶಿಕ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ವಿಜಯಪ್ರಕಾಶ್, ಸುಧಾಕರ ಹೊಸಳ್ಳಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !