ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಕಾಯ್ದೆಗಳ ತಿದ್ದುಪಡಿಗೆ ವ್ಯಾಪಕ ವಿರೋಧ

ವಿವಿಧ ಸಂಘಟನೆಗಳಿಂದ ಪ್ರತಿಭಟನೆ, ಮೆರವಣಿಗೆ, ವಾಹನ ಸಂಚಾರಕ್ಕೆ ತಡೆ
Last Updated 26 ನವೆಂಬರ್ 2020, 12:45 IST
ಅಕ್ಷರ ಗಾತ್ರ

ಕಾರವಾರ: ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ಮಾಡಬಾರದು, ರೈತ ವಿರೋಧಿ ಭೂ ಸುಧಾರಣಾ ಕಾಯ್ದೆಯನ್ನು ರದ್ದು ಮಾಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆ.ಸಿ.ಟಿ.ಯು) ನೇತೃತ್ವದಲ್ಲಿ ನಗರದಲ್ಲಿ ಗುರುವಾರ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

ಕೇಂದ್ರ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ನೌಕರರು ನಗರದ ಕಾರ್ಪೊರೇಷನ್ ಬ್ಯಾಂಕ್ ಶಾಖೆಯ ಎದುರು ಪ್ರತಿಭಟನೆ ನಡೆಸಿ ಘೋಷಣೆ ಕೂಗಿದರು. ಸಿಬ್ಬಂದಿ ಕೊರತೆಯ ನಡುವೆ ಒತ್ತಡದಲ್ಲಿ ಕೆಲಸ ಮಾಡಬೇಕಿದೆ. ಆದರೆ, ಅದಕ್ಕೆ ಸಮನಾದ ವೇತನ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿ.ಐ.ಟಿ.ಯು ನೇತೃತ್ವದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಮಾಲಾದೇವಿ ದೇವಸ್ಥಾನ ಮೈದಾನದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಗರದ ಬಸ್ ನಿಲ್ದಾಣದ ಬಳಿ ಮಾನವ ಸರಪಳಿ ರಚಿಸಿ, ಲಂಡನ್ ಬ್ರಿಜ್ ಬಳಿ ವಾಹನ ಸಂಚಾರ ತಡೆದು ಪ್ರತಿಭಟನೆ ಹಮ್ಮಿಕೊಂಡರು.

ಬ್ಯಾಂಕ್ ನೌಕರರ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವಾಸುದೇವ ಶೇಟ್, ‘ಕೇಂದ್ರ ಸರ್ಕಾರವು ದೊಡ್ಡ ಉದ್ಯಮಿಗಳ ಸಾಲದ ವಸೂಲಿಗೆ ಕ್ರಮ ಕೈಗೊಳ್ಳಬೇಕು. ಬ್ಯಾಂಕ್‌ಗಳನ್ನು ವಿಲೀನ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ. ಜನ ಸಾಮಾನ್ಯರು ಬ್ಯಾಂಕ್‌ಗಳಲ್ಲಿ ಠೇವಣಿಯಿಟ್ಟ ಹಣಕ್ಕೆ ಬಡ್ಡಿ ದರ ಹೆಚ್ಚಿಸಬೇಕು. ಈ ಮೂಲಕ ಅವರ ಗಳಿಕೆಗೆ ಸೂಕ್ತ ರೀತಿಯಲ್ಲಿ ನಿರ್ದೇಶನ ನೀಡಬೇಕು’ ಎಂದು ಒತ್ತಾಯಿಸಿದರು.

ವಾಹನ ಸಂಚಾರಕ್ಕೆ ತಡೆಯ ಸಂದರ್ಭದಲ್ಲಿ ಮಾತನಾಡಿದ ಸಿ.ಐ.ಟಿ.ಯು ಪ್ರಮುಖರಾದ ಯಮುನಾ ಗಾಂವ್ಕರ್, ‘ಸರ್ಕಾರವು ಕಾಯ್ದೆಗಳ ಮೂಲಕ ಶ್ರಮಿಕ ವರ್ಗದ ಧ್ವನಿ ಅಡಗಿಸಲು ಮುಂದಾಗಿದೆ. ರೈತರ, ಜನ ಸಾಮಾನ್ಯರ ವಿರೋಧಿ ಕಾಯ್ದೆಗಳನ್ನು ಹಾಗೂ ಈ ಮೊದಲಿದ್ದ ಕಾನೂನುಗಳಿಗೆ ತಿದ್ದುಪಡಿ ತರುವ ಮೂಲಕ ಜನಸಾಮಾನ್ಯರ ಬಾಯಿ ಮುಚ್ಚಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಾಂತ ರೈತ ಸಂಘದ ಮುಖಂಡ ಶ್ಯಾಮನಾಥ ನಾಯ್ಕ ಮಾತನಾಡಿ, ‘ಸರ್ಕಾರವು ಕೆಲವು ದಿನಗಳ ಹಿಂದೆ ಜಾರಿಗೆ ತಂದಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಯ್ದೆಯ ತಿದ್ದುಪಡಿ ಹಾಗೂ ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿಯಿಂದ ವ್ಯವಸಾಯದ ಜಮೀನು ಉದ್ದಿಮೆದಾರರ ಪಾಲಾಗಬಹುದು. ಈ ಬಗ್ಗೆ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಸಂಕಷ್ಟದ ದಿನಗಳು ಬರಬಹುದು’ ಎಂದು ಕಳವಳ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ವಿನೋದ ಬಾಂದೇಕರ್, ಎಚ್.ಕೆ.ನಾಯಕ, ಗಜಾ ಮೇಸ್ತಾ, ಪ್ರಶಾಂತ ನಾಯ್ಕ, ದೀಪಕ ಕುಡಾಳ್ಕರ್, ಮಂಜುಳಾ ಕಾಣಕೋಣಕರ್, ಮಾಯಾ ಕಾಣೇಕರ್, ತಾರಾ ನಾಯ್ಕ, ನಿರ್ಮಲಾ ನಾಯ್ಕ, ವೈಶಾಲಿ ನಾಯ್ಕ, ಅಕ್ಷರ ದಾಸೋಹ ಸಂಘಟನೆಯ ಜಯಶ್ರೀ ಗೌಡ, ಶೈಲಾ ಹರಿಕಂತ್ರ, ಎಸ್‌.ಎಫ್‌.ಐ.ನ ವಿಶಾಲ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT