ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರ ಶ್ರಮ ಗೌರವಿಸುವುದು ಹೊಣೆಗಾರಿಕೆ: ನ್ಯಾಯಾಧೀಶ ಶಾಂತವೀರ ಶಿವಪ್ಪ

Last Updated 1 ಮೇ 2019, 11:14 IST
ಅಕ್ಷರ ಗಾತ್ರ

ಶಿರಸಿ: ನಾಡು ಸುವ್ಯವಸ್ಥಿತವಾಗಿರಲು ವಿಶೇಷ ಕೊಡುಗೆ ನೀಡುವ ಕಾರ್ಮಿಕರ ಶ್ರಮವನ್ನು ಸಮಾಜ ಗೌರವಿಸಬೇಕು ಎಂದು ಹೆಚ್ಚುವರಿ ಜಿಲ್ಲಾನ್ಯಾಯಾಧೀಶ ಶಾಂತವೀರ ಶಿವಪ್ಪ ಹೇಳಿದರು.

ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಕಂದಾಯ ಇಲಾಖೆ, ಕಾರ್ಮಿಕ ಇಲಾಖೆ, ಗೃಹ ನಿರ್ಮಾಣ ಕಾರ್ಮಿಕರ ಸಂಘ, ಭಾರತೀಯ ಮಜ್ದೂರ್ ಸಂಘ ಜಂಟಿಯಾಗಿ ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ಬುಧವಾರ ಇಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಮಾಜಿಕವಾಗಿ ಕೆಳ ಸ್ಥರದಲ್ಲಿ ಗುರುತಿಸಿಕೊಳ್ಳುವ ಕಾರ್ಮಿಕರು ದೇಶ ಕಟ್ಟುವ ಕಾರ್ಯ ಮಾಡುತ್ತಾರೆ. ಇಂಥಕಾರ್ಮಿಕರ ಶ್ರಮಕ್ಕೆ ಗೌರವ ಕೊಡುವುದು ಸಮಾಜದ ಜವಾಬ್ದಾರಿಯಾಗಿದೆ. ಕಾರ್ಮಿಕ ದಿನಾಚರಣೆ ಮಾತ್ರ ಆಚರಿಸದೇ, ಅವರನ್ನು ಗೌರವದಿಂದ ನೋಡುವ ಮನೋಭಾವಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶೆ ಸುನೀತಾ ಮಾತನಾಡಿ, ‘ಕಾರ್ಮಿಕರನ್ನು ಬಂಧುಗಳಂತೆ ನೋಡುವ ಕಾಲ ಬರಬೇಕು. ಕಾರ್ಮಿಕ ನೀತಿ ರೂಪುಗೊಂಡಿದ್ದರೂ, ಅದರ ಅನುಷ್ಠಾನ ಸರಿಯಾಗಿ ಆಗುತ್ತಿಲ್ಲ. ಹೀಗಾಗಿ ಕಾರ್ಮಿಕರ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಪ್ರತಿ ಕಾರ್ಮಿಕ ನೋಂದಣಿ ಮಾಡಿಸಿಕೊಳ್ಳಬೇಕು. ಸರ್ಕಾರದ ವಿವಿಧ ಸೌಲಭ್ಯ ಪಡೆಯಬೇಕು. ಕಾರ್ಮಿಕರು ಅಸಂಘಟಿತ ವಲಯದಿಂದ ಸಂಘಟಿತ ವಲಯದೆಡೆ ಸಾಗಬೇಕು ಎಂದು ಹೇಳಿದರು.

ಗದಗದ ಪಂಡಿತ ಪುಟ್ಟರಾಜ ಗವಾಯಿ ಸಂಗೀತ ಶಾಲೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನ್ಯಾಯಾಧೀಶರಾದ ನರೇಂದ್ರ ಬಿ.ಆರ್‌, ಶಂಕರ ರೆಡ್ಡಿ ಡಿ.ವಿ, ವಕೀಲ ಸಂಘದ ಅಧ್ಯಕ್ಷ ಎಸ್.ಎನ್.ನಾಯ್ಕ, ಕಾರ್ಮಿಕ ಸಂಘಟನೆಗಳ ಪ್ರಮುಖರಾದ ಮಹೇಶ ನಾಯ್ಕ, ಕಮಲಾಕರ ಆಚಾರ್ಯ ಇದ್ದರು. ಕಾರ್ಮಿಕ ಇಲಾಖೆ ಅಧಿಕಾರಿ ಬಿ.ಎನ್.ಬೆಟಗೇರಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT