ಶಿರಸಿ: ಇ-ಖಾತೆ ನಿಯಮ ಸರಳೀಕರಣಕ್ಕೆ ಒತ್ತಾಯಿಸಿ ಕಾರ್ಮಿಕರ ಪ್ರತಿಭಟನೆ

7
ಸಮಸ್ಯೆ ಬಗೆಹರಿಸಲು ಸರ್ಕಾರಕ್ಕೆ ಆಗ್ರಹ

ಶಿರಸಿ: ಇ-ಖಾತೆ ನಿಯಮ ಸರಳೀಕರಣಕ್ಕೆ ಒತ್ತಾಯಿಸಿ ಕಾರ್ಮಿಕರ ಪ್ರತಿಭಟನೆ

Published:
Updated:
Deccan Herald

ಶಿರಸಿ: ಅಸ್ತಿತ್ವದಲ್ಲಿರುವ ಇ-ಖಾತೆ ಹಾಗೂ ಲೇಔಟ್ ಕಡ್ಡಾಯ ನಿಯಮ ಸರಳೀಕರಣಕ್ಕೆ ಆಗ್ರಹಿಸಿ, ಸಾವಿರಾರು ಕಾರ್ಮಿಕರು ಸೋಮವಾರ ಇಲ್ಲಿ ಪ್ರತಿಭಟನೆ ನಡೆಸಿದರು.

ಕೆನರಾ ಬಾರ್ ಬೆಂಡಿಂಗ್ ಅಸೋಸಿಯೇಷನ್ ನೇತೃತ್ವದಲ್ಲಿ ಮೆರವಣಿಗೆ ನಡೆಸಿದ ಕಾರ್ಮಿಕರು, ಉಪವಿಭಾಗಾಧಿಕಾರಿ ಕೆ.ರಾಜು ಮೊಗವೀರ ಅವರಿಗೆ ಮನವಿ ಸಲ್ಲಿಸಿದರು. ಇ-ಖಾತೆ ಸಮಸ್ಯೆಯಿಂದ ಜಿಲ್ಲೆಯ ಶೇ 80ರಷ್ಟು ಆಸ್ತಿ ಅಕ್ರಮದ ಪಟ್ಟಿಗೆ ಸೇರಿದೆ. ಸಾರ್ವಜನಿಕರ ಆಸ್ತಿಗಳು ಇದ್ದೂ ಇಲ್ಲದಂತಾಗಿವೆ. ಜನರಿಗೆ ಆಸ್ತಿಯನ್ನು ಮಾರಾಟ ಮಾಡಲು ಆಗದೆ, ಮನೆಯನ್ನು ಕಟ್ಟಿಕೊಳ್ಳಲು ಆಗದೇ ಆಸ್ತಿ ಹಕ್ಕು ಕಳೆದುಕೊಂಡಂತಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

1976ರ ನಂತರದ ನಿವೇಶನ ಲೇಔಟ್ ಆಗದಿದ್ದರೆ, ಅಕ್ರಮ ಎಂದು ಘೋಷಿಸಲು ಸರ್ಕಾರ ನಿಯಮ ರೂಪಿಸಿರುವುದು ತೀವ್ರ ಸಮಸ್ಯೆಯಾಗಿದೆ. ಈ ಜಿಲ್ಲೆ ಗುಡ್ಡಗಾಡು ಪ್ರದೇಶವಾದ್ದರಿಂದ ಎಲ್ಲೆಡೆ ಅನ್ವಯವಾಗುವ ನಿಯಮ ಸರಳೀಕರಣಗೊಳಿಸಬೇಕು ಅಥವಾ ಅದನ್ನು ರದ್ದುಪಡಿಸಬೇಕು. ಕಂದಾಯ ಇಲಾಖೆಯಲ್ಲೇ ಸ್ಥಿರಾಸ್ತಿಗಳ ದಾಖಲೆ ನಮೂದಿಸಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.

ಇ–ಖಾತೆ ಹೋರಾಟ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಆನವಟ್ಟಿ, ‘ನಿಯಮದ ತೊಡಕಿನಿಂದ ಮನೆ ಕಟ್ಟುವ ಪ್ರಮಾಣ ಕಡಿಮೆಯಾಗಿದೆ. ಕಟ್ಟಡ ಕಾರ್ಮಿಕರು, ಬಾರ್ ಬೆಂಡರ್ಸ್, ಪೇಂಟರ್ಸ್‌, ಕಾರ್ಪೆಂಟರ್ಸ್‌ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಸರ್ಕಾರ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು’ ಎಂದರು.  ಪ್ರಮುಖರಾದ ನಾಗರಾಜ ಭಟ್ಟ, ರಾಜಾರಾಮ ಹೆಗಡೆ, ವೆಂಕಟೇಶ ನಾಯ್ಕ, ಆರ್.ಜಿ.ನಾಯಕ, ರಾಜು ಪೈ ಇದ್ದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !