ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಮಳೆಗಾಲಕ್ಕೆ ಹೊರಜಗತ್ತು ಮರೆಯುವ ಹಳ್ಳಿ

ಮೂಲಸೌಕರ್ಯ ವಂಚಿತ ಮುಂಡಗಾರ, ಎಡಗಾರ ಗ್ರಾಮಗಳು
Last Updated 2 ಜೂನ್ 2022, 5:29 IST
ಅಕ್ಷರ ಗಾತ್ರ

ಶಿರಸಿ: ಮಳೆಗಾಲ ಆರಂಭವಾಗುವುದರೊಳಗಾಗಿ ನಾಲ್ಕು ತಿಂಗಳಿಗೆ ಸಾಕಾಗುವಷ್ಟು ದಿನಸಿ ಸಾಮಗ್ರಿ ಸಂಗ್ರಹಿಸಿಟ್ಟುಕೊಳ್ಳಬೇಕು. ಜ್ವರ, ಕೆಮ್ಮಿನ ಔಷಧಿಯನ್ನೂ ತಂದಿಟ್ಟುಕೊಳ್ಳಬೇಕು. ಇದು ತಾಲ್ಲೂಕಿನ ಬಂಡಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮುಂಡಗಾರ, ಎಡಗಾರ, ಇತರ ಕೆಲ ಗ್ರಾಮಗಳ ಸ್ಥಿತಿ.

ಗ್ರಾಮಗಳ ಅಭಿವೃದ್ಧಿಯ ಮಂತ್ರ ಪಠಿಸುತ್ತಿರುವ ಆಡಳಿತ ವ್ಯವಸ್ಥೆ ಹಲವು ದಶಕ ಕಳೆದರೂ ಜಡ್ಡಿ, ಕೆಸಿನಮನೆ ಸೇರಿದಂತೆ ಈ ಭಾಗದ 60ಕ್ಕೂ ಹೆಚ್ಚು ಮನೆಗಳ ಜನರಿಗೆ ಅಗತ್ಯ ರಸ್ತೆ, ಸೇತುವೆ ವ್ಯವಸ್ಥೆ ಕಲ್ಪಿಸದ ಕಾರಣ ಜನರು ತೊಂದರೆಯಲ್ಲಿ ದಿನ ಕಳೆಯುತ್ತಿದ್ದಾರೆ. ವರ್ಷದ ನಾಲ್ಕು ತಿಂಗಳು ವನವಾಸ ಇಲ್ಲಿನ ಜನರ ಪಾಲಿಗೆ ಕಟ್ಟಿಟ್ಟ ಬುತ್ತಿ.

ಶಿರಸಿ–ಕುಮಟಾ ರಸ್ತೆಯಲ್ಲಿರುವ ರಾಗಿಹೊಸಳ್ಳಿಯಿಂದ ಸುಮಾರು ಏಳು ಕಿ.ಮೀ ದೂರದ ಕಾಡಿನ ಮಧ್ಯೆ ಇರುವ ಮುಂಡಗಾರ ಮತ್ತಿತರ ಗ್ರಾಮದ ಜನರಿಗೆ ಈಗಲೂ ಕಚ್ಚಾ ರಸ್ತೆಯೇ ಗತಿಯಾಗಿದೆ. ಇದೇ ರಸ್ತೆಯ ಮಧ್ಯೆ ಮೂರು ಬಾರಿ ಸಿಗುವ ಕಲ್ಲಹಳ್ಳಕ್ಕೆ ಕಿರಿದಾದ ಕಾಂಕ್ರೀಟ್ ಕಾಲುಸಂಕವಷ್ಟೇ ಇದೆ. ಇಲ್ಲಿ ದ್ವಿಚಕ್ರ ವಾಹನ ಮಾತ್ರ ಸಾಗಲು ಸಾಧ್ಯವಿದೆ.

ಮಳೆಗಾಲದಲ್ಲಿ ಹಳ್ಳ ತುಂಬಿ ಹರಿದರೆ ಕಾಲುಸಂಕ ಮುಳುಗುತ್ತದೆ. ಆಗ ಜನರಿಗೆ ಹೊರ ಜಗತ್ತಿನ ಸಂಪರ್ಕವೂ ತಪ್ಪಿ ಹೋಗುತ್ತದೆ. ಇದೇ ಕಾರಣಕ್ಕೆ ಗ್ರಾಮಸ್ಥರು ಮಳೆಗಾಲಕ್ಕೆ ಬೇಕಾದ ಪದಾರ್ಥಗಳನ್ನು ಮುಂಚಿತವಾಗಿ ಸಂಗ್ರಹಿಸಿಕೊಳ್ಳುತ್ತಾರೆ. ಶಾಲೆಗೆ ತೆರಳುವ ಮಕ್ಕಳನ್ನು ನೆಂಟರ ಮನೆಯಲ್ಲಿ ಬಿಡುವ ಅನಿವಾರ್ಯತೆಯೂ ಉಂಟಾಗುತ್ತದೆ.

‘120ಕ್ಕೂ ಹೆಚ್ಚು ಜನಸಂಖ್ಯೆ ಇರುವ ಗ್ರಾಮಗಳಿಗೆ ಅಗತ್ಯ ಸೌಕರ್ಯ ಒದಗಿಸುವಂತೆ ಹಲವು ಬಾರಿ ಮನವಿ ನೀಡಲಾಗಿದೆ. ದೊಡ್ಡ ಸೇತುವೆಯನ್ನು ನಿರ್ಮಿಸಿಕೊಡಬೇಕು ಎಂದು ಹಿಂದಿನಿಂದಲೂ ಒತ್ತಾಯಿಸಿದ್ದೇವೆ. ಈವರೆಗೂ ಸೌಕರ್ಯ ಸಿಗದ ಕಾರಣ ಮಳೆಗಾಲವನ್ನು ಅತಿ ಕಷ್ಟದಿಂದ ಕಳೆಯುತ್ತಿದ್ದೇವೆ’ ಎನ್ನುತ್ತಾರೆ ಸ್ಥಳೀಯರಾದ ಕೃಷ್ಣ ಮರಾಠಿ.

‘ಜನಸಂಖ್ಯೆ ಕಡಿಮೆ ಇದ್ದರೂ ಮುಂಡಗಾರ ಭಾಗದ ಗ್ರಾಮಗಳು ವಿಸ್ತಾರ ಪ್ರದೇಶ ಹೊಂದಿದೆ. ರಸ್ತೆ, ಸೇತುವೆ ನಿರ್ಮಾಣಕ್ಕೆ ಗ್ರಾಮ ಪಂಚಾಯ್ತಿ ಅನುದಾನ ಸಾಲುತ್ತಿಲ್ಲ. ವಿಶೇಷ ಅನುದಾನ ಬಿಡುಗಡೆಯಾದರೆ ಮಾತ್ರ ಸೌಕರ್ಯ ಒದಗಿಸಬಹುದು. ಇದನ್ನು ಹಲವಾರು ಬಾರಿ ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ’ ಎಂದು ಬಂಡಲ ಗ್ರಾಮ ಪಂಚಾಯ್ತಿ ಸದಸ್ಯ ದೇವರಾಜ ಮರಾಠಿ ಹೇಳಿದರು.

ರಸ್ತೆ ಮೇಲ್ದರ್ಜೆಗೆ
‘ರಾಗಿಹೊಸಳ್ಳಿಯಿಂದ ಮುಂಡಗಾರ ಮಾರ್ಗವಾಗಿ ಬೆಣಗಾಂವ ಸಂಪರ್ಕಿಸುವ ಅಂದಾಜು 8 ಕಿ.ಮೀ ಉದ್ದದ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ರಸ್ತೆಯಾಗಿ ಕಳೆದ ವರ್ಷ ಮೇಲ್ದರ್ಜೆಗೇರಿಸಲಾಗಿದೆ. ಈ ರಸ್ತೆ ಅಭಿವೃದ್ಧಿಗೊಂಡರೆ ಗ್ರಾಮಸ್ಥರ ಸಮಸ್ಯೆ ಬಹುತೇಕ ಬಗೆಹರಿಯುತ್ತದೆ’ ಎಂದು ಬಂಡಲ ಗ್ರಾಮ ಪಂಚಾಯ್ತಿ ಪಿಡಿಒ ಪವಿತ್ರಾ ಹೇಳಿದರು.

‘ಅರಣ್ಯದಲ್ಲಿ ಸಾಗಿರುವ ಈ ರಸ್ತೆಯನ್ನು ಈಗಾಗಲೆ ಪರಿಶೀಲಿಸಲಾಗಿದೆ. ಹೊಸ ರಸ್ತೆ ನಿರ್ಮಾಣಕ್ಕೆ ಅಗತ್ಯ ಅಂದಾಜುಪಟ್ಟಿ ಸಿದ್ಧಪಡಿಸುವ ಹಂತದಲ್ಲಿದೆ’ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು.

ಶಿಕ್ಷಕರಿಲ್ಲದ ಶಾಲೆ
ಮುಂಡಗಾರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ ವರ್ಷ ಐವರು ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಆದರೆ ಶಾಲೆಗೆ ಕಾಯಂ ಶಿಕ್ಷಕರಿಲ್ಲದ ಕಾರಣ ಇನ್ನೂ ತರಗತಿ ಆರಂಭಗೊಂಡಿಲ್ಲ ಎಂಬುದು ಗ್ರಾಮಸ್ಥರ ಆರೋಪ. ‘ಅತಿಥಿ ಶಿಕ್ಷಕರೊಬ್ಬರನ್ನು ಗ್ರಾಮಸ್ಥರು ಹುಡುಕಿಕೊಟ್ಟರೆ ಶಾಲೆಗೆ ನಿಯೋಜಿಸುತ್ತೇವೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಗ್ರಾಮದಲ್ಲಿ ಪದವೀಧರರು ಯಾರೊಬ್ಬರೂ ಇಲ್ಲ’ ಎಂಬುದು ಅವರ ದೂರು.

‘ಶಾಲೆಗೆ ಅತಿಥಿ ಶಿಕ್ಷಕರೊಬ್ಬರನ್ನು ನಿಯೋಜಿಸಿ ಸಮಸ್ಯೆ ಬಗೆಹರಿಸುತ್ತೇವೆ’ ಎಂದು ಬಿಇಒ ಎಂ.ಎಸ್.ಹೆಗಡೆ ಪ್ರತಿಕ್ರಿಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT