ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರಿಕಾಂಬಾ ಜಾತ್ರೆ ಪ್ರಸಾದಕ್ಕೆ 3 ಲಕ್ಷ ಲಡ್ಡು !

ಬಿಡುವಿಲ್ಲದೇ ಕೆಲಸ ಮಾಡುತ್ತಿರುವ ಬಾಣಸಿಗರು
Last Updated 1 ಮಾರ್ಚ್ 2020, 13:41 IST
ಅಕ್ಷರ ಗಾತ್ರ

ಶಿರಸಿ: ಮಾರಿಕಾಂಬಾ ದೇವಾಲಯದ ಅನ್ನ ಛತ್ರದಲ್ಲಿ ಈಗ ಬಾಣಸಿಗರಿಗೆ ಬಿಡುವಿಲ್ಲದ ಕೆಲಸ. ಧಗಧಗನೆ ಉರಿವ ಬೆಂಕಿಯ ಮುಂದೆ ಕುಳಿತು ಕೊಪ್ಪರಿಗೆಯಂತಹ ಬಂಡಿಯಲ್ಲಿ ಬಾಣಸಿಗರು ಬೂಂದಿ ಕಾಳು ಕರಿದು, ಸಿಹಿಲಡ್ಡು ತಯಾರಿಸುತ್ತಿದ್ದಾರೆ.

ಮಾ.3ರಿಂದ ಒಂಬತ್ತು ದಿನಗಳವರೆಗೆ ನಡೆಯುವ ಮಾರಿಕಾಂಬಾ ಜಾತ್ರೆಗೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಜಾತ್ರೆಗೆ ಬರುವ ಭಕ್ತರಿಗೆ ದೇವಿಯ ಪ್ರಸಾದವಾಗಿ ತಿರುಪತಿ ಲಡ್ಡು ಮಾದರಿಯ ಲಡ್ಡು ತಯಾರಿಸಲು ದೇವಾಲಯದ ಆಡಳಿತ ಮಂಡಳಿ ಮುಂದಾಗಿದೆ. ಒಂದು ವಾರದಿಂದ 35ಕ್ಕೂ ಹೆಚ್ಚು ಬಾಣಸಿಗರು ಲಡ್ಡು ಹಾಗೂ ರವೆ ಪ್ರಸಾದ ಸಿದ್ಧಪಡಿಸುವಲ್ಲಿ ನಿರತರಾಗಿದ್ದಾರೆ.

‘ಬೆಳಿಗ್ಗೆ 8.30ರಿಂದ ರಾತ್ರಿ 8.30ರವರೆಗೆ ನಿರಂತರವಾಗಿ ಕೆಲಸ ಮಾಡುತ್ತೇವೆ. ಜಾತ್ರೆ ಮುಗಿಯುವ ತನಕವೂ ಇದು ಮುಂದುವರಿಯುತ್ತದೆ. ನಾಲ್ಕು ಬಂಡಿಗಳಿಂದ ದಿನವೊಂದಕ್ಕೆ 2 ಕ್ವಿಂಟಲ್ ಕಾಳು ಸಿದ್ಧವಾಗುತ್ತಿದೆ. ಈಗಾಗಲೇ 30 ಕ್ವಿಂಟಲ್ ಕಡಲೆಹಿಟ್ಟು, 100 ಕ್ವಿಂಟಲ್ ಸಕ್ಕರೆ, 165 ಡಬ್ಬಿ ಎಣ್ಣೆಗಳು ಬಂದಿವೆ. ಈ ಸಂಗ್ರಹ ಖಾಲಿಯಾದ ಮೇಲೆ ಮತ್ತೆ ಸಾಮಗ್ರಿಗಳು ಬರುತ್ತವೆ’ ಎಂದು ಕಾಳು ಕರಿಯುತ್ತಿದ್ದ ಮಂಜುನಾಥ ಹೆಗಡೆ, ನರಸಿಂಹ ಹೆಗಡೆ ಹೇಳಿದರು.

‘ಕರಿದ ಕಾಳಿನ ಜೊತೆಗೆ ಯಾಲಕ್ಕಿ, ಗೋಡಂಬಿ, ಒಣದ್ರಾಕ್ಷಿ ಸೇರಿಸಿ ಯಂತ್ರದ ಮೂಲಕ ಲಡ್ಡು ತಯಾರಿಸಲಾಗುತ್ತದೆ. ಯಂತ್ರದಲ್ಲಿ ಸೆಕೆಂಡಿಗೆ ಒಂದರಂತೆ ಲಡ್ಡು ಮಾಡಬಹುದು’ ಎಂದು ಗುತ್ತಿಗೆದಾರ ಗಣೇಶ ಹೆಗಡೆ ಹೇಳಿದರು.

ಕಳೆದ ಜಾತ್ರೆಯಲ್ಲಿ ಎರಡು ಲಡ್ಡುಗಳಿರುವ ಪ್ರಸಾದ ಪ್ಯಾಕೆಟ್‌ಗೆ ₹ 35 ದರ ನಿಗದಿಪಡಿಸಲಾಗಿತ್ತು. ಅಂದಾಜು 1.5 ಲಕ್ಷ ಲಡ್ಡು ಮಾರಾಟವಾಗಿತ್ತು. ಈ ಬಾರಿ ಪ್ಯಾಕೆಟ್‌ ದರವನ್ನು ₹ 40ಕ್ಕೆ ನಿಗದಿಪಡಿಸಲಾಗಿದೆ. ಕಳೆದ ಜಾತ್ರೆಯಲ್ಲಿ ಒಬ್ಬರು ಒಂದು ಪ್ಯಾಕೆಟ್ ಪಡೆಯಲು ಅವಕಾಶವಿತ್ತು. ಈ ಬಾರಿ ಅಗತ್ಯವಿದ್ದಷ್ಟು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಧರ್ಮದರ್ಶಿ ಮಂಡಳಿ ಅಧ್ಯಕ್ಷ ಡಾ. ವೆಂಕಟೇಶ ನಾಯ್ಕ ಪ್ರತಿಕ್ರಿಯಿಸಿದರು.

ಈಗಾಗಲೇ ಆಹಾರ ಸುರಕ್ಷತಾ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ, ಲಡ್ಡು ಪ್ರಸಾದದ ಗುಣಮಟ್ಟ ಪರೀಕ್ಷಿಸಿದ್ದಾರೆ. ಮಾರಿಕಾಂಬಾ ಕಲ್ಯಾಣ ಮಂಟಪದ ಆವರಣದಲ್ಲಿ ದೇವಸ್ಥಾನ ಸಾಂಪ್ರದಾಯಿಕ ರವೆ ಪ್ರಸಾದ ಸಿದ್ಧವಾಗುತ್ತಿದೆ. ಇಲ್ಲಿ ಸಹ ಹತ್ತಾರು ಕೆಲಸಗಾರರು ದಿನವಿಡೀ ಕೆಲಸ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT