ಫಾ.ಡೆನಿಸ್ ಮಸ್ಕರೆನಸ್ ಅಂತಿಮ ಯಾತ್ರೆ

ಭಾನುವಾರ, ಏಪ್ರಿಲ್ 21, 2019
26 °C

ಫಾ.ಡೆನಿಸ್ ಮಸ್ಕರೆನಸ್ ಅಂತಿಮ ಯಾತ್ರೆ

Published:
Updated:
Prajavani

ಹಳಿಯಾಳ: ಕ್ರೈಸ್ತರ ಧರ್ಮಗುರು ಫಾ.ಡೆನಿಸ್ ಮಸ್ಕರೆನಸ್ (63) ಅವರ ಅಂತ್ಯಕ್ರಿಯೆ ಪಟ್ಟಣದಲ್ಲಿ ಬುಧವಾರ ನೆರವೇರಿತು. ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆಗೆ ಗುರಿಯಾಗಿದ್ದ ಅವರು, ಏ.8ರಂದು ನಿಧನರಾಗಿದ್ದರು.

ಬುಧವಾರ ಬೆಳಿಗ್ಗೆ ಪಟ್ಟಣದ ಮಿಲಾಗ್ರಿಸ್ ಚರ್ಚ್‌ನಲ್ಲಿ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಇಡಲಾಗಿತ್ತು. ಕ್ರೈಸ್ತರ ಸಂಪ್ರದಾಯದಂತೆ ಮೃತರ ಆತ್ಮಕ್ಕೆ ಶಾಂತಿ ಕೋರಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಪಾರ್ಥಿವ ಶರೀರದ ಅಂತಿಮ ಯಾತ್ರೆ ಪ್ರಮುಖ ಬೀದಿಯಿಂದ ಸಾಗಿ ಸ್ಮಶಾನಕ್ಕೆ ತಲುಪಿತು. 

ದಕ್ಷಿಣ ಕನ್ನಡ ಜಿಲ್ಲೆಯ ಬಜ್ಪೆಯಲ್ಲಿ 1955ರ ಸೆ.22ರಂದು ಅವರು ಜನಿಸಿದ್ದರು. 1984ರ ಮೇ 12ರಂದು ಗುರುದೀಕ್ಷೆ ಪಡೆದರು. ದಾಂಡೇಲಿಯ ಚರ್ಚ್‌ನಲ್ಲಿ ಮೊದಲ ಧರ್ಮಗುರುವಾಗಿ ಕರ್ತವ್ಯ ನಿಭಾಯಿಸಿದರು. ನಂತರ ಹಳಿಯಾಳ, ಚಂದಾವರ, ದೀವಳ್ಳಿ ಹಾಗೂ ಶಿರಸಿ ಭಾಗಗಳಲ್ಲಿ ಅಧ್ಯಾತ್ಮಿಕ ಸೇವೆ ಸಲ್ಲಿಸಿದರು. 

ಫಾ.ಡೆನಿಸ್ ಮಸ್ಕರೆನಸ್ ಸಹಸ್ರಾರು ಬಡ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡಿದ್ದರು. ಯುವ ಸಮುದಾಯಕ್ಕೆ ಕೌಶಲ, ಶಿಕ್ಷಣ ಪಡೆಯುವಂತೆ ಮಾರ್ಗದರ್ಶನ ಮಾಡುತ್ತಿದ್ದರು. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದ ಅವರು, ಸಾರ್ವಜನಿಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸುವಂತೆ ಪ್ರೇರೇಪಣೆ ನೀಡುತ್ತಿದ್ದರು. ಉತ್ತಮ ವಾಗ್ಮಿ ಹಾಗೂ ಉತ್ತಮ ಆಡಳಿತಗಾರರಾಗಿದ್ದರು. 

ಬುಧವಾರ ನಡೆದ ಅಂತಿಮ ಯಾತ್ರೆಯಲ್ಲಿ ಜಿಲ್ಲೆಯ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಧರ್ಮಗುರುಗಳು ಪಾಲ್ಗೊಂಡಿದ್ದರು. ಕಾರವಾರ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಡೆರಿಸ್ ಫರ್ನಾಂಡಿಸ್ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಸಚಿವ ಆರ್.ವಿ.ದೇಶಪಾಂಡೆ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ, ಬೆಂಗಳೂರು ಗೋಸಾಯಿ ಮಠದ ಮಂಜುನಾಥ ಮಹಾರಾಜ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಪದಾಧಿಕಾರಿಗಳು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !