ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರೆಲೆಗೆ ಜೀವ ತುಂಬುವ ‘ತೃಪ್ತಿ’: ಹಳ್ಳಿ ಹುಡುಗಿಯ ಸಾಧನೆ

ಹಳ್ಳಿ ಹುಡುಗಿಯ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆ
Last Updated 28 ಮೇ 2022, 19:31 IST
ಅಕ್ಷರ ಗಾತ್ರ

ಶಿರಸಿ: ಪ್ರಕೃತಿಯ ಸೊಬಗನ್ನು ಹೆಚ್ಚಿಸುವ ಹಸಿರೆಲೆಗೆ ಚಿತ್ರದ ಮೂಲಕ ಜೀವ ತುಂಬಬಹುದು ಎಂಬುದನ್ನು ಸಿದ್ದಾಪುರ ತಾಲ್ಲೂಕಿನ ಹೊಸಮಂಜು ಗ್ರಾಮದ ತೃಪ್ತಿ ನಾಯ್ಕ ತೋರಿಸಿಕೊಟ್ಟಿದ್ದಾರೆ. ಈ ಮೂಲಕ ಹಳ್ಳಿ ಹುಡುಗಿ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.

ಮನೆಯ ಸುತ್ತಮುತ್ತ ಸಿಗುವ ಹಲಸು, ಅಶ್ವತ್ಥ ಎಲೆಯ ಮೇಲೆ ಚಿತ್ತಾರ ಮೂಡಿಸುವ ಮೂಲಕ ನೋಡುಗರನ್ನು ನಿಬ್ಬೆರಗಾಗಿಸುವ ಕಲೆ ತೃಪ್ತಿಗೆ ಕರಗತವಾಗಿದೆ. ಕೆಲವು ತಿಂಗಳ ಹಿಂದೆ ಎಂಟು ಹಲಸಿನ ಎಲೆಯಲ್ಲಿ ರಾಷ್ಟ್ರಗೀತೆ ಬರೆಯುವ ಮೂಲಕ ರಾಷ್ಟ್ರಮಟ್ಟದ ಸಾಧನೆ ಮೆರೆದಿದ್ದಾರೆ. ಇದನ್ನೇ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗುರುತಿಸಿ, ಗೌರವಿಸಿದೆ.

ಪಕ್ಷಿಗಳು, ಪ್ರಾಣಿಗಳು, ಪ್ರಕೃತಿಯ ಸೊಬಗು, ಕೀಟ ಹೀಗೆ ಹಲವು ಬಗೆಯ ಚಿತ್ರ ವೈವಿಧ್ಯಗಳನ್ನು ಬಿಡಿಸಲು ತೃಪ್ತಿಗೆ ಹಸಿರು ಎಲೆ ಸಾಕು. ದೇಶದ ನಕಾಶೆಯನ್ನೂ ಎಲೆಯಲ್ಲಿ ಚಿತ್ರಿಸುವ ಅವರ ಕೈಚಳಕಕ್ಕೆ ಮಾರುಹೋಗದವರಿಲ್ಲ.

ತೃಪ್ತಿ ಬಾಲ್ಯದಿಂದ ಈ ಕಲೆ ಕರಗತ ಮಾಡಿಕೊಂಡವರೇನಲ್ಲ. ಎರಡು ವರ್ಷದ ಹಿಂದೆ ಸಮಯ ಕಳೆಯಲು ಎಲೆಯ ಮೇಲೆ ಚಿತ್ರ ರಚಿಸುತ್ತಿದ್ದರು. ದಿನ ಕಳೆದಂತೆ ಇದೇ ಹವ್ಯಾಸವಾಗಿ ಬದಲಾಯಿತು. ಈಗ ಕಲೆಯಲ್ಲಿ ಸಾಕಷ್ಟು ಪರಿಣತಿ ಪಡೆಯುತ್ತಿದ್ದಾರೆ.

ದೇಶಮಟ್ಟದಲ್ಲಿ ಹೆಸರು ಮಾಡಿದ ತೃಪ್ತಿ ಸಿದ್ದಾಪುರ ತಾಲ್ಲೂಕು ಕೇಂದ್ರದಿಂದ 10 ಕಿ.ಮೀ ದೂರದ ಹೊಸಮಂಜು ಎಂಬ ಕುಗ್ರಾಮದವರು. ಇಲ್ಲಿನ ಮಂಜುನಾಥ ಮತ್ತು ಮೋಹಿನಿ ನಾಯ್ಕ ದಂಪತಿಯ ಹಿರಿಯ ಪುತ್ರಿ. ಸದ್ಯ ಕಾರವಾರದ ಶಿವಾಜಿ ಶಿಕ್ಷಣ ವಿದ್ಯಾಲಯದಲ್ಲಿ ಬಿ.ಎಡ್ ವ್ಯಾಸಂಗ ಮಾಡುತ್ತಿದ್ದಾರೆ.

‘ಕೋವಿಡ್ ಲಾಕ್‍ಡೌನ್ ವೇಳೆ ಮನೆಯಲ್ಲೇ ಕುಳಿತು ಆನ್‍ಲೈನ್ ತರಗತಿಗೆ ಹಾಜರಾಗುತ್ತಿದ್ದೆ. ಬಿಡುವಿನ ವೇಳೆಯಲ್ಲಿ ‘ಲೀಫ್ ಆರ್ಟ್’ ಆರಂಭಿಸಿದೆ. ಸತತ ಪ್ರಯತ್ನದ ಫಲವಾಗಿ ದಿನ ಕಳೆದಂತೆ ಉತ್ತಮ ಚಿತ್ರ ರಚನೆ ಸಾಧ್ಯವಾಯಿತು. ರಾಷ್ಟ್ರಗೀತೆ ಬರೆದು ಹೆಸರು ಮಾಡಬೇಕು ಎಂಬ ಯೋಚನೆಯೊಂದಿಗೆ ಕಾರ್ಯಪ್ರವೃತ್ತಳಾದವಳಿಗೆ ಅಲ್ಪ ಯಶ ದೊರೆಯಿತು’ ಎನ್ನುತ್ತಾರೆ ತೃಪ್ತಿ ನಾಯ್ಕ.

ಲೀಫ್ ಆರ್ಟ್‍ನಲ್ಲಿ ಇನ್ನಷ್ಟು ಪರಿಣತಿ ಸಾಧಿಸಿ ವಿಶ್ವದಾಖಲೆಯ ಸಾಧನೆ ಮಾಡಬೇಕು ಎಂಬ ಗುರಿ ಹೊಂದಿದ್ದೇನೆ. ಆ ದಿಶೆಯಲ್ಲಿ ಪ್ರಯತ್ನ ಸಾಗಿದೆ.

- ತೃಪ್ತಿ ನಾಯ್ಕ,ಕಲಾವಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT