ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರಾಂತ್ಯ ಕರ್ಫ್ಯೂ: ಜನ ಸಂಚಾರ ವಿರಳ

ನಿರ್ಬಂಧಕ್ಕೆ ಪೂರಕವಾದ ಸಂಕ್ರಾಂತಿ ರಜೆ, ಕಾರವಾರದ ಮೀನು ಮಾರುಕಟ್ಟೆ ಬಂದ್‌
Last Updated 15 ಜನವರಿ 2022, 15:28 IST
ಅಕ್ಷರ ಗಾತ್ರ

ಕಾರವಾರ: ಕೋವಿಡ್ ನಿಯಂತ್ರಣಕ್ಕೆ ಜಾರಿಯಾಗಿರುವ ವಾರಾಂತ್ಯದ ಕರ್ಫ್ಯೂವಿಗೆ ನಗರದಲ್ಲಿ ಶನಿವಾರ ಜನಸ್ಪಂದನೆ ದೊರೆಯಿತು. ರಾಷ್ಟ್ರೀಯ ಹೆದ್ದಾರಿ 66 ಸೇರಿದಂತೆ ವಿವಿಧ ರಸ್ತೆಗಳಲ್ಲಿ ವಾಹನಗಳ ಸಂಚಾರ ಅತ್ಯಂತ ವಿರಳವಾಗಿತ್ತು.

ಸಂಕ್ರಾಂತಿ ಹಬ್ಬದ ಸಲುವಾಗಿ ಸರ್ಕಾರಿ ಕಚೇರಿಗಳಿಗೆ ಶನಿವಾರ ರಜೆಯಿತ್ತು. ಜೊತೆಗೇ ಕೋವಿಡ್ ಮುನ್ನೆಚ್ಚರಿಕೆ ಕ್ರಮವಾಗಿ ನಗರದ ಮೀನು ಮಾರುಕಟ್ಟೆಯನ್ನು ಒಂದು ವಾರದ ಮುಚ್ಚಲಾಗಿದೆ ಎಂದು ನಗರಸಭೆ ಶುಕ್ರವಾರ ತಿಳಿಸಿತ್ತು. ಇದು ಕೂಡ ನಗರದಲ್ಲಿ ಜನರ ಸಂಚಾರ ನಿಯಂತ್ರಣಕ್ಕೆ ಬರಲು ಸಹಕಾರಿಯಿತು.

ನಗರದ ಪ್ರಮುಖ ರಸ್ತೆಗಳಲ್ಲಿ ಕೆಲವೆಡೆ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದು, ಅನಗತ್ಯವಾಗಿ ಸಂಚರಿಸುವ ವಾಹನಗಳ ಮೇಲೆ ನಿಗಾ ವಹಿಸಿದ್ದರು. ಔಷಧಿ, ಬೇಕರಿಗಳು, ಕಿರಾಣಿ, ದಿನಸಿ ಅಂಗಡಿಗಳು, ತರಕಾರಿ, ಹಾಲು, ಮಾಂಸ ಮಾರಾಟದ ಮಳಿಗೆಗಳು ಮಾತ್ರ ತೆರೆದಿದ್ದವು. ಉಳಿದಂತೆ ಎಲ್ಲ ವ್ಯವಹಾರಗಳೂ ವಾರಾಂತ್ಯ ಕರ್ಫ್ಯೂ ಸಲುವಾಗಿ ಸ್ಥಗಿತಗೊಂಡಿವೆ. ಜಿಲ್ಲೆಯಾದ್ಯಂತ ಭಾನುವಾರವೂ ಇದೇ ಸನ್ನಿವೇಶ ಕಂಡುಬರಲಿದೆ.

ಎರಡು ಕ್ಲಸ್ಟರ್‌ಗಳಿಗೆ ರಜೆ:

ಕಾರವಾರ: ಶಾಲಾ ವಿದ್ಯಾರ್ಥಿಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚು ವರದಿಯಾಗುತ್ತಿರುವ ಕಾರಣ, ಕಾರವಾರ ನಗರ ಮತ್ತು ಹೊನ್ನಾವರ ‍ಪಟ್ಟಣದ ಪ್ರಾಥಮಿಕ ಶಾಲೆಗಳಿಗೆ (1ರಿಂದ 8ನೇ ತರಗತಿ) ಜ.17ರಿಂದ 21ರವರೆಗೆ ರಜೆ ಘೋಷಿಸಲಾಗಿದೆ.

ಈ ಬಗ್ಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಶನಿವಾರ ಆದೇಶ ಹೊರಡಿಸಿದ್ದಾರೆ. ಕಾರವಾರದ ಒಂದು ಮತ್ತು ಹೊನ್ನಾವರದ ಎರಡು ಪ್ರಾಥಮಿಕ ಶಾಲೆಗಳಲ್ಲಿ ಐದಕ್ಕಿಂತ ಹೆಚ್ಚು ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿದೆ. ಹಾಗಾಗಿ ಆ ಪ್ರದೇಶಗಳನ್ನು ಕ್ಲಸ್ಟರ್ ಎಂದು ಗುರುತಿಸಲಾಗಿದೆ.

ಎರಡೂ ಕಡೆಗಳಲ್ಲಿ, ಪ್ರಥಮ ಪಿ.ಯು., ಮತ್ತು ಪದವಿ ಕಾಲೇಜುಗಳಲ್ಲಿ ಶೇ 50ರಷ್ಟು ವಿದ್ಯಾರ್ಥಿಗಳ ಬಲದೊಂದಿಗೆ ಪರ್ಯಾಯ ತರಗತಿಗಳನ್ನು ಹಮ್ಮಿಕೊಳ್ಳಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಕೋವಿಡ್ ಶಿಷ್ಟಾಚಾರ ಪಾಲನೆಗೆ ಶಿಕ್ಷಣ ಇಲಾಖೆ, ಪಿ.ಯು. ಶಿಕ್ಷಣ ಇಲಾಖೆ ಹಾಗೂ ಪದವಿ ಕಾಲೇಜುಗಳ ನೋಡಲ್ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಶೇ 4.29ಕ್ಕೇರಿಕೆ:

ಜಿಲ್ಲೆಯಲ್ಲಿ ಕೋವಿಡ್ ದೃಢಪಡುವ ಪ್ರಮಾಣವು ಭಾನುವಾರ ಮತ್ತಷ್ಟು ಏರಿಕೆ ಕಂಡಿದ್ದು, ಶೇ 4.29ಕ್ಕೇರಿದೆ. ಈ ಪ್ರಮಾಣವು ಶನಿವಾರ ಶೇ 3.43ರಷ್ಟಿತ್ತು. ಶೇ 5ಕ್ಕಿಂತಲೂ ಅಧಿಕವಾದರೆ ಜಿಲ್ಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತವು ಕೆಲವು ಕಠಿಣ ನಿಯಮಗಳನ್ನು ಹೇರುವ ಸಾಧ್ಯತೆಯಿದೆ.

₹ 38,400 ದಂಡ ವಸೂಲಿ:

ಜಿಲ್ಲೆಯಾದ್ಯಂತ ಕೋವಿಡ್ ನಿಯಮಾವಳಿಗಳನ್ನು ಪಾಲಿಸದವರ ವಿರುದ್ಧ ಪೊಲೀಸರ ಕಾರ್ಯಾಚರಣೆ ಮುಂದುವರಿದಿದೆ. ವಾರಾಂತ್ಯದ ಕರ್ಫ್ಯೂ ದಿನವಾದ ಶನಿವಾರ ಮುಖಗವಸು ಧರಿಸದೇ ಸಂಚರಿಸುತ್ತಿದ್ದ 384 ಮಂದಿಗೆ ತಲಾ ₹ 100ರಂತೆ, ಒಟ್ಟು ₹ 38,400 ದಂಡ ವಿಧಿಸಲಾಗಿದೆ. ವಾಹನ ಮುಟ್ಟುಗೋಲಿನ ಪ್ರಕರಣಗಳು ದಾಖಲಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT