ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆಯ ಚರ್ಚೆಗೆ ಸಿಗದ ಆದ್ಯತೆ: ಆಕ್ಷೇಪ

ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆ: ವಿರೋಧ ಪಕ್ಷದ ಸದಸ್ಯರ ತೀವ್ರ ಅಸಮಾಧಾನ
Last Updated 20 ಆಗಸ್ಟ್ 2019, 13:13 IST
ಅಕ್ಷರ ಗಾತ್ರ

ಕಾರವಾರ:ಎಂದೂ ಕಂಡರಿಯದ ಭೀಕರ ಪ್ರವಾಹದಿಂದ ಜಿಲ್ಲಾ ಪಂಚಾಯ್ತಿಯ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ತೊಂದರೆಯಾಗಿದೆ. ಆದರೆ, ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಸಂಜೆ 4ರ ವರೆಗೂ ಈ ಬಗ್ಗೆ ಗಂಭೀರವಾದ ಚರ್ಚೆಗೆ ಆಸ್ಪದವೇ ಸಿಗಲಿಲ್ಲ ಎಂದು ವಿರೋಧ ಪಕ್ಷದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಳಿಗ್ಗೆ 11ಕ್ಕೆ ನಿಗದಿಯಾಗಿದ್ದ ಸಭೆಯು 11.45ಕ್ಕೆ ಆರಂಭವಾಯಿತು. ಆರಂಭದಲ್ಲಿ ಸದಸ್ಯ ಜಿ.ಎನ್.ಹೆಗಡೆ ಮುರೇಗಾರ ಮಾತನಾಡಿ, ‘ನೆರೆಯಿಂದ ನಷ್ಟವಾಗಿರುವ ಖಾಸಗಿ ಆಸ್ತಿಗಳ ಮಾಲೀಕರಿಗೆ ₹5 ಲಕ್ಷದ ವರೆಗೆ ಬಡ್ಡಿ ರಹಿತ ಸಾಲ ಘೋಷಣೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸುವುದು ಸೂಕ್ತ. ಇದರಿಂದ ರೈತರಿಗೆ ತಮ್ಮ ಕೆಲಸ ಮಾಡಿಕೊಳ್ಳಲು ಅನುಕೂಲವಾಗಲಿದೆ’ ಎಂದು ಸಲಹೆ ನೀಡಿದರು.

ಮತ್ತೊಬ್ಬ ಸದಸ್ಯ ಗಜಾನನ ಪೈ ಮಾತನಾಡಿ, ‘ಪ್ರವಾಹದಿಂದ ಭತ್ತದ ಸಸಿಗಳು ನಾಶವಾಗಿವೆ. ಈಗ ಪುನಃ ರೈತರಿಗೆ ನೀಡಲು ಕೃಷಿ ಇಲಾಖೆಯಲ್ಲಿ ಬಿತ್ತನೆ ಬೀಜ ಲಭ್ಯವಿದೆಯೇ? ಅಡಿಕೆಗೆ ವ್ಯಾಪಕ ಕೊಳೆರೋಗ ಬಂದು ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ’ ಎಂದು ಪ್ರಸ್ತಾಪಿಸಿದರು.

ಸದಸ್ಯೆ ಸುಮಂಗಲಾ ನಾಯ್ಕ ಮಾತನಾಡಿ, ‘ಅಕ್ಕುಂಜಿ, ಕಲ್ಯಾಣಪುರ, ಮನಮನೆ, ಶಿರಳಗಿ ಮುಂತಾದ ಊರುಗಳ ಸರ್ಕಾರಿ ಶಾಲೆಗಳ ಗೋಡೆಗಳು, ಚಾವಣಿ ಶಿಥಿಲವಾಗಿವೆ. ಅವುಗಳ ದುರಸ್ತಿಗೆ ವ್ಯವಸ್ಥೆ ಮಾಡಬೇಕು’ ಎಂದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯ್ತಿ ಸಿಇಒ ಮೊಹಮ್ಮದ್ ರೋಶನ್, ಅನುದಾನದ ಲಭ್ಯತೆ ಆಧರಿಸಿ ಆದ್ಯತೆ ಮೇರೆಗೆ ಕಾಮಗಾರಿ ಹಮ್ಮಿಕೊಳ್ಳಲಾಗುವುದು ಎಂದರು.

‘ಗೌರವಧನ ನೀಡುವ ಪ್ರಸ್ತಾಪವಿತ್ತು’:‘ನೆರೆಯಿಂದ ಹಾನಿಯ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗುವ ನಿರೀಕ್ಷೆಯಲ್ಲಿದ್ದೆ. ಜಿಲ್ಲಾ ಪಂಚಾಯ್ತಿ ಸದಸ್ಯರ ಒಂದು ತಿಂಗಳ ಗೌರವಧನವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಕೊಡುವ ಬಗ್ಗೆಯೂ ಪ್ರಸ್ತಾಪಿಸಲು ಸಜ್ಜಾಗಿದ್ದೆ. ಆದರೆ, ಅವಕಾಶ ಸಿಗಲಿಲ್ಲ’ ಎಂದು ಸದಸ್ಯೆ ಉಷಾ ಹೆಗಡೆಸುದ್ದಿಗಾರರ ಬಳಿ ಅಸಮಾಧಾನ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ ಪ್ರವಾಹ ಇಳಿದ ಬಳಿಕ ನಡೆದ ಮೊದಲ ಸಾಮಾನ್ಯ ಸಭೆಯಿದು. ಬೇರೆ ವಿಚಾರಗಳನ್ನು ಬದಿಗಿಟ್ಟು ಇದನ್ನು ಮುಖ್ಯವಾಗಿ ಚರ್ಚಿಸಬೇಕಿತ್ತು. ಸುಮ್ಮನೆ ಕಾಲಹರಣ ಮಾಡುವುದು ಸರಿಕಾಣಲಿಲ್ಲ’ ಎಂದು ಸಭೆಯಿಂದ ಹೊರಬಂದ ಅವರು ಹೇಳಿದರು.

‘ಅಕೇಷಿಯಾ ನಿಷೇಧಿಸಿ’: ‘ಸಾಮಾಜಿಕ ಅರಣ್ಯ ಯೋಜನೆಯಲ್ಲಿ ಅಕೇಶಿಯಾ ಗಿಡಗಳನ್ನು ನೆಡಲಾಗುತ್ತಿದೆ. ಅದನ್ನು ನಿಷೇಧಿಸಿ, ಹಣ್ಣಿನ ಗಿಡಗಳನ್ನು ನೆಡಬೇಕು. ಇದರಿಂದ ಕೃಷಿಗೆ ಕೋತಿಗಳ ಕಾಟವನ್ನು ತಡೆಯಬಹುದು’ ಎಂದು ಸದಸ್ಯರಾದ ಶಿವಾನಂದ ಹೆಗಡೆ, ಶ್ರೀಕಲಾ ಶಾಸ್ತ್ರಿ ಒತ್ತಾಯಿಸಿದರು. ಈ ಬಗ್ಗೆ ಎರಡು ವರ್ಷಗಳಿಂದ ಒತ್ತಾಯಿಸುತ್ತಿದ್ದರೂ ಯಾರೂ ಗಮನ ಹರಿಸುತ್ತಿಲ್ಲ ಎಂದು ಪುಷ್ಪಾ ನಾಯಕ ಅಸಮಾಧಾನ ವ್ಯಕ್ತಪಡಿಸಿದರು.

‘ವೇತನ ಕೊಡಿ’:‘ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆಯಡಿ ಡಾಟಾ ಎಂಟ್ರಿ, ವಾಹನ ಚಾಲಕ ಮುಂತಾದ ಕೆಲಸ ಮಾಡುತ್ತಿರುವ ನೌಕರರಿಗೆ ಆರು ತಿಂಗಳಿನಿಂದ ವೇತನ ಸಿಕ್ಕಿಲ್ಲ. ಹಲವರು 12 ವರ್ಷಗಳಿಂದ ತಿಂಗಳಿಗೆ ಕೇವಲ ₹ 5 ಸಾವಿರಕ್ಕೆ ದುಡಿಯುತ್ತಿದ್ದಾರೆ’ ಎಂದು ಸದಸ್ಯ ಆಲ್ಬರ್ಟ್ ಡಿಕೋಸ್ತಾ ಸಭೆಯ ಗಮನಕ್ಕೆ ತಂದರು. ಇದಕ್ಕೆ ಇತರ ಸದಸ್ಯರೂ ಧ್ವನಿಗೂಡಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಮೊಹಮ್ಮದ್ ರೋಶನ್, ‘ಸಿಬ್ಬಂದಿಗೆಕನಿಷ್ಠ ವೇತನವನ್ನು ಪಾವತಿಸಲೇಬೇಕು. ಇನ್ನು ಮುಂದೆ ದಿನಗೂಲಿ ನೌಕರರು ಇರಬಾರದು. ಗ್ರೂಪ್ ಡಿ ನೌಕರರನ್ನು ಏಜೆನ್ಸಿಗಳ ಮೂಲಕ ನೇಮಕಾತಿ ಮಾಡಿಕೊಳ್ಳಲು ಅವಕಾಶವಿದೆ’ ಎಂದರು.

ಇದಕ್ಕೆ ಸದಸ್ಯರು, ಇದರಿಂದಹಲವು ವರ್ಷ ಕರ್ತವ್ಯ ನಿರ್ವಹಿಸಿದವರು ಕೆಲಸ ಕಳೆದುಕೊಳ್ಳುತ್ತಾರೆ ಎಂದು ಆಕ್ಷೇಪಿಸಿದರು. ಈ ಬಗ್ಗೆ ಸ್ಪಷ್ಟನೆ ನೀಡಿದ ರೋಶನ್, ಹೊರಗುತ್ತಿಗೆಯಡಿ ಕೆಲಸ ಮಾಡಿದ ನೌಕರರಿಗೆ ನೇಮಕಾತಿಯಲ್ಲಿ ಆದ್ಯತೆ ನೀಡುವ ಬಗ್ಗೆ ಸದಸ್ಯರು ವಿವರವಾಗಿ ಚರ್ಚಿಸುವುದು ಸೂಕ್ತ ಎಂದು ಸಲಹೆ ನೀಡಿದರು.

‘ಕ್ರೀಡಾಕೂಟ ಮುಂದೂಡಿ’:‘ಶಿಕ್ಷಣ ಇಲಾಖೆಯಿಂದ ಮಳೆಗಾಲದಲ್ಲಿ ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಅದರ ಬದಲು 15 ದಿನ ಮುಂದೂಡಿದರೆ ಸೂಕ್ತ’ ಎಂದು ಜಿ.ಎನ್.ಹೆಗಡೆ ಮುರೇಗಾರ ಹೇಳಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಡಿಡಿಪಿಐ ಮಂಜುನಾಥ ಮತ್ತು ದಿವಾಕರ ಶೆಟ್ಟಿ, ‘ಜಿಲ್ಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಕಡಿಮೆಯಿದ್ದಾರೆ. ಅವರೇ ವಿದ್ಯಾರ್ಥಿಗಳಿಗೆ ತರಬೇತಿ ಹಾಗೂ ಸ್ಪರ್ಧೆಗಳಲ್ಲಿ ನಿರ್ಣಾಯಕರಾಗಿ ಕೆಲಸ ಮಾಡುತ್ತಾರೆ. ಇದರಿಂದ ಕ್ರೀಡಾಕೂಟ ಮುಂದೂಡುವುದು ಕಷ್ಟವಾಗಬಹುದು’ ಎಂದರು. ವಿದ್ಯಾರ್ಥಿಗಳಿಗೆ ಯಾವ ಸ್ಪರ್ಧೆಯೂ ತಪ್ಪಿ ಹೋಗದಂತೆ ಸೂಕ್ತ ನಿರ್ಣಯಕ್ಕೆ ಬರುವಂತೆ ಮೊಹಮ್ಮದ್ ರೋಶನ್ ಸೂಚಿಸಿದರು.

ಜಿಲ್ಲಾ ಪಂಚಾಯ್ತಿಅಧ್ಯಕ್ಷೆ ಜಯಶ್ರೀ ಮೊಗೇರ, ಉಪಾಧ್ಯಕ್ಷ ಸಂತೋಷ ರೇಣಕೆ,ಸ್ಥಾಯಿ ಸಮಿತಿ ಅಧ್ಯಕ್ಷರಾದ ರತ್ನಾಕರ ನಾಯ್ಕ, ಸಂಜಯ ಹಣಬರ, ಜಯಮ್ಮ ಕೃಷ್ಣ ಹಿರಳ್ಳಿ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT