ಆರೋಗ್ಯ ವಿಮೆಯಡಿ ಪ್ರತಿ ಪ್ರಜೆ: ಸಚಿವ ಅನಂತಕುಮಾರ್ ಹೆಗಡೆ

ಮಂಗಳವಾರ, ಮಾರ್ಚ್ 26, 2019
33 °C
ಕೇಂದ್ರ ಸರ್ಕಾರದ ಯೋಜನೆ ತಿಳಿಸಿದ

ಆರೋಗ್ಯ ವಿಮೆಯಡಿ ಪ್ರತಿ ಪ್ರಜೆ: ಸಚಿವ ಅನಂತಕುಮಾರ್ ಹೆಗಡೆ

Published:
Updated:
Prajavani

ಶಿರಸಿ: 2020ರ ವೇಳೆಗೆ ದೇಶದ ಪ್ರತಿ ಪ್ರಜೆ ಆರೋಗ್ಯ ವಿಮೆಯಡಿ ಒಳಪಡಬೇಕು ಎಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೊಳಿಸಿದೆ. ಮೊದಲ ಹಂತದಲ್ಲಿ 50 ಕೋಟಿ ಜನರನ್ನು ತಲುಪಲಾಗುತ್ತಿದೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆರೋಗ್ಯ ಮತ್ಉತ ಕುಟುಂಬ ಕಲ್ಯಾಣ ಇಲಾಖೆ, ಭಾರತೀಯ ವೈದ್ಯಕೀಯ ಸಂಘ, ಸ್ಕೊಡ್‌ವೆಸ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ ಮಂಗಳವಾರದಿಂದ ಎರಡು ದಿನ ಹಮ್ಮಿಕೊಂಡಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಆರೋಗ್ಯ ಮೇಳ ಉದ್ಘಾಟಿಸಿ, ಅವರು ಮಾತನಾಡಿದರು. ಆಯುಷ್ಮಾನ್ ಭಾರತ್ ಯೋಜನೆಯ ನಿಯಮಗಳನ್ನು ಸರಳೀಕರಣಗೊಳಿಸಲಾಗುವುದು. ಮುಂದಿನ ದಿನಗಳಲ್ಲಿ ಯಾವುದೇ ಅಡೆತಡೆ ಇಲ್ಲದೇ, ಸರ್ಕಾರಿ ಆಸ್ಪತ್ರೆಗಳ ನಿರ್ಬಂಧವಿಲ್ಲದೇ ಸಾರ್ವಜನಿಕರು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುವಂತಾಗಲು ಪ್ರಯತ್ನ ನಡೆದಿದೆ ಎಂದರು. ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ‘ವೆಲ್‌ನೆಸ್ ಸೆಂಟರ್’ ಪ್ರಾರಂಭಿಸಲು ಯೋಚಿಸಲಾಗಿದೆ. ಶರೀರದ ಸ್ವಾಸ್ಥ್ಯ ಕಾಯ್ದುಕೊಂಡು, ರೋಗಬರದಂತೆ ತಡೆಗಟ್ಟುವ ನಿಟ್ಟಿನಲ್ಲಿ ಈ ಕೇಂದ್ರ ಮಾರ್ಗದರ್ಶನ ಮಾಡಲಿದ್ದು, ದೇಶದ ಎಲ್ಲ ಗ್ರಾಮಾಂತರ ಪ್ರದೇಶಗಳಲ್ಲಿ ಇದು ಕಾರ್ಯಾನ್ವಯಗೊಳ್ಳಲಿದೆ. ಇಡೀ ಜಗತ್ತು ಆಯುರ್ವೇದದ ಕಡೆ ನೋಡುತ್ತಿದೆ. ಆಯುರ್ವೇದ, ನೈಸರ್ಗಿಕ ಚಿಕಿತ್ಸೆ, ಸಿದ್ಧ, ಯುನಾನಿ ಎಲ್ಲ ರೀತಿ ಚಿಕಿತ್ಸೆಗಳನ್ನು ಒದಗಿಸಲು ಸರ್ಕಾರ ಯೋಚಿಸಿದೆ. ಡಯಗ್ನೋಸ್ಟಿಕ್ ಸೆಂಟರ್‌ಗಳನ್ನು ಪ್ರಾರಂಭಿಸಿ ಕಡಿಮೆ ಖರ್ಚಿನಲ್ಲಿ ಆರೋಗ್ಯ ತಪಾಸಣೆ ಸೌಲಭ್ಯವನ್ನು ಮನೆಬಾಗಿಲಿನಲ್ಲಿ ಒದಗಿಸುವ ಬಗ್ಗೆ ಯೋಚಿಸಲಾಗಿದೆ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ರತ್ನಾಕರ ನಾಯ್ಕ, ಜಿ.ಎನ್.ಹೆಗಡೆ, ಬಸವರಾಜ ದೊಡ್ಮನಿ, ಉಷಾ ಹೆಗಡೆ, ತಾಲ್ಲೂಕು ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಹಳದೋಟ, ಸದಸ್ಯರಾದ ಪ್ರೇಮಾ ಬೇಡರ್, ಲತಾ ನಾಯ್ಕ, ನಗರಸಭೆ ಸದಸ್ಯ ಗಣಪತಿ ನಾಯ್ಕ, ಜಿಲ್ಲಾ ಯೋಜನಾಧಿಕಾರಿ ವಿ.ಎಂ.ಹೆಗಡೆ, ಐಎಂಎ ಶಿರಸಿ ಘಟಕ ಕಾರ್ಯದರ್ಶಿ ತನುಶ್ರೀ ಹೆಗಡೆ, ಆಯುಷ್ ಅಧಿಕಾರಿ ಲಲಿತಾ ಶೆಟ್ಟಿ ಇದ್ದರು. ಜಿಲ್ಲಾ ಆರೋಗ್ಯಾಧಿಕಾರಿ ಅಶೋಕಕುಮಾರ ಸ್ವಾಗತಿಸಿದರು. ಎಸ್.ಜಿ.ನಾಯಕ ನಿರೂಪಿಸಿದರು. ತಾಲ್ಲೂಕು ಆರೋಗ್ಯಾಧಿಕಾರಿ ವಿನಾಯಕ ಭಟ್ಟ ವಂದಿಸಿದರು.

ಆರೋಗ್ಯ ಮೇಳದ ಸೇವೆ
ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ, ಪಾರ್ಶ್ವವಾಯು, ಮಾನಸಿಕ ಆರೋಗ್ಯ, ಕಿವಿ, ಮೂಗು, ಗಂಟಲು ಸಮಸ್ಯೆ, ಚರ್ಮರೋಗ, ಮೂಳೆ ಮತ್ತು ಕೀಲು ರೋಗ, ಕ್ಷಯರೋಗ, ಕುಷ್ಠರೋಗ, ಅಂಧತ್ವ ಕುರಿತು ತಜ್ಞ ವೈದ್ಯರು ಪರೀಕ್ಷೆ ನಡೆಸಿದರು. ಪ್ರಯೋಗಾಲಯ ಪರೀಕ್ಷೆಗಳಾದ ರಕ್ತ, ಕಫ, ಮೂತ್ರ ಪರೀಕ್ಷೆ, ಕ್ಷ ಕಿರಣ, ಸ್ಕ್ಯಾನಿಂಗ್, ಇಸಿಜಿ ಸೇವೆಯನ್ನು ರೋಗಿಗಳಿಗೆ ನೀಡಲಾಯಿತು. ಶಿವಮೊಗ್ಗದ ನಾರಾಯಣ ಹೃದಯಾಲಯ, ಮಂಗಳೂರಿನ ಶ್ರೀನಿವಾಸ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಕೆ.ಎಸ್.ಹೆಗಡೆ ಹಾಗೂ ಇತರ ಆಸ್ಪತ್ರೆಗಳ ತಜ್ಞ ವೈದ್ಯರು ರೋಗಿಗಳ ತಪಾಸಣೆ ನಡೆಸಿದರು. ಬುಧವಾರ ಸಂಜೆ ಮೇಳ ಮುಕ್ತಾಯಗೊಳ್ಳಲಿದೆ.

**

ಸಮಗ್ರ ವೈದ್ಯಕೀಯ ಪದ್ಧತಿಯನ್ನು ಅಳವಡಿಸಲು ಕೇಂದ್ರ ಸರ್ಕಾರ ಯೋಚಿಸಿದೆ. 2022ರ ವೇಳೆಗೆ ದೇಶದ ಎಲ್ಲ ಮೂಲೆಗಳಲ್ಲಿ ಈ ಸೇವೆ ಲಭ್ಯವಾಗಲಿದೆ
– ಅನಂತಕುಮಾರ್ ಹೆಗಡೆ, ಕೇಂದ್ರ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !