ಸೋಮವಾರ, ಜನವರಿ 20, 2020
17 °C
ವಿಮೆ ಖರೀದಿಸಿದ ಗ್ರಾಹಕರಿಗೆ ಸೂಕ್ತ ಮಾಹಿತಿ ನೀಡದ ಬಗ್ಗೆ ದೂರು

ಸೇವಾ ನ್ಯೂನತೆ: ₹ 8 ಸಾವಿರ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಜೀವ ವಿಮೆಯ ಷರತ್ತುಗಳ ಬಗ್ಗೆ ಗ್ರಾಹಕರಿಗೆ ವಿವರಿಸದ ಪ್ರಕರಣದಲ್ಲಿ ಭಾರತೀಯ ಜೀವ ವಿಮಾ ನಿಗಮಕ್ಕೆ ಜಿಲ್ಲಾ ಗ್ರಾಹಕರ ನ್ಯಾಯ ಮಂಡಳಿಯು ₹ 8 ಸಾವಿರ ದಂಡ ವಿಧಿಸಿದೆ. ಅಲ್ಲದೇ ನಿಬಂಧನೆಗಳನ್ನು ಸರಿಯಾಗಿ ಅರ್ಥವಾಗುವಂತೆ ಹೇಳುವುದು ಸಂಸ್ಥೆಗಳ ಜವಾಬ್ದಾರಿ ಎಂದು ಅಭಿಪ್ರಾಯಪಟ್ಟಿದೆ. 

ನಿವೃತ್ತ ಪೊಲೀಸ್ ಹೆಡ್ ಕಾನ್‍ಸ್ಟೆಬಲ್, ಶಿರಸಿಯ ಲಂಬೋದರ ಗಣಪತಿ ಹೆಬ್ಬಾರ 2004ರಲ್ಲಿ ‘ಜೀವನ ಸರಳ’ ಎಂಬ ವಿಮೆಯನ್ನು ಖರೀದಿಸಿದ್ದರು. ಪ್ರತಿ ಮೂರು ತಿಂಗಳಿಗೆ ಒಮ್ಮೆ ₹ 1,225ರಂತೆ 15 ವರ್ಷ ಪ್ರೀಮಿಯಂ ಕಂತನ್ನು ಅವರು ಪಾವತಿಸಿದ್ದರು. 

ಅವಧಿ ಪೂರ್ಣವಾದ ಬಳಿಕ ₹ 1 ಲಕ್ಷ ದೊರೆಯುತ್ತದೆ ಎಂದು ವಿಮೆ ಏಜೆಂಟ್ ತಿಳಿಸಿದ್ದರು. ಅದನ್ನು ನಂಬಿದ ಲಂಬೋದರ ಹೆಬ್ಬಾರ ಎಲ್ಲ ಕಂತುಗಳನ್ನೂ ಪಾವತಿಸಿದ್ದರು. ಅವಧಿ ಪೂರ್ಣವಾದ ಬಳಿಕ ತಮ್ಮ ಹಣ ಪಡೆಯಲು ಹೋದಾಗ ಸಂಸ್ಥೆಯು ಕೇವಲ ₹ 50,544 ನೀಡಿತ್ತು. ಪುನಃ ವಿಚಾರಿಸಿದಾಗ ₹ 12,636ಗಳನ್ನು ಮಾತ್ರ ನೀಡಲಾಯಿತು. ಪಾಲಿಸಿ ಖರೀದಿಸುವಾಗ ಏಜೆಂಟ್ ತಿಳಿಸಿದಂತೆ ₹ 1 ಲಕ್ಷ ಬರಲು ಇನ್ನೂ ₹ 36,820 ಸಿಗಬೇಕು. ಈ ಬಗ್ಗೆ ನಿರ್ದೇಶನ ನೀಡುವಂತೆ ಅವರು ಗ್ರಾಹಕರ ನ್ಯಾಯ ಮಂಡಳಿಯ ಮೊರೆ ಹೋದರು.

ಅವರ ದೂರನ್ನು ವಿಚಾರಣೆ ಮಾಡಿದ ಜಿಲ್ಲಾ ಗ್ರಾಹಕರ ನ್ಯಾಯ ಮಂಡಳಿಯ ಅಧ್ಯಕ್ಷ ಜಿ.ಎಂ.ಕುಂಬಾರ, ಸದಸ್ಯೆ ಶಾರದಮ್ಮ ಅವರ ಪೀಠವು, ಸೇವಾ ನ್ಯೂನತೆಗಾಗಿ ₹ 5 ಸಾವಿರ ದಂಡ ವಿಧಿಸಿತು. ವ್ಯಾಜ್ಯದ ಖರ್ಚಿಗೆ ₹ 3 ಸಾವಿರವನ್ನು ಶೇ 7ರ ಬಡ್ಡಿಯೊಂದಿಗೆ ನೀಡಬೇಕು ಎಂದು ವಿಮಾ ನಿಗಮಕ್ಕೆ ಆದೇಶಿಸಿತು.

ಈ ವೇಳೆ ತನ್ನ ವಾದ ಮಂಡಿಸಿದ ನಿಗಮವು, ವಿಮೆಯ ಅವಧಿಯಲ್ಲಿ ಗ್ರಾಹಕ ಮೃತಪಟ್ಟರೆ ಆತನಿಗೆ ₹ 1 ಲಕ್ಷ ಸಿಗುತ್ತದೆ. ಅವಧಿ ಮುಕ್ತಾಯವಾದರೆ ₹ 43,275 ಮಾತ್ರ ಕೊಡಲಾಗುತ್ತದೆ. ಅವಧಿ ಮುಕ್ತಾಯವಾದ ನಂತರ ಬಡ್ಡಿ ಸೇರಿಸಿ ಒಟ್ಟು ₹ 63,180 ಪಾವತಿಸಲಾಗಿದೆ ಎಂದು ಹೇಳಿತ್ತು. ಅದನ್ನು ನ್ಯಾಯ ಮಂಡಳಿಯು ಒಪ್ಪಿಕೊಂಡಿತು.

ಜೀವ ವಿಮೆಯ ಷರತ್ತುಗಳನ್ನು ವಿಮಾ ಪತ್ರದಲ್ಲಿ ಇಂಗ್ಲಿಷ್‍ನಲ್ಲಿ ಬರೆಯಲಾಗಿದೆ. ಗ್ರಾಹಕನಿಗೆ ಅರ್ಥವಾಗುವಂತೆ ವಿವರಿಸಿಲ್ಲ. ವಿಮಾ ಪತ್ರದಲ್ಲಿ ಎರಡು ಕಡೆ ₹ 1 ಲಕ್ಷ ಎಂದು ಬರೆಯಲಾಗಿದೆ. ಆದರೆ, ವಿಮೆಯ ಅವಧಿ ಮುಗಿದ ನಂತರ ಎಷ್ಟು ಮೊತ್ತ ಸಿಗುತ್ತದೆ ಎಂದು ಎಲ್ಲೂ ತಿಳಿಸಿಲ್ಲ. ಪ್ರತಿ ಬಾರಿ ಕಂತು ಪಾವತಿಸಲು ಬರುವ ಜ್ಞಾಪನಾ ಪತ್ರದಲ್ಲೂ ಇದರ ಉಲ್ಲೇಖವಿಲ್ಲ. ಈ ಎಲ್ಲ ಅಂಶಗಳನ್ನು ಗಣನೆಗೆ ತೆಗೆದುಕೊಂಡ ನ್ಯಾಯ ಮಂಡಳಿಯು, ಇದನ್ನು ಸೇವಾ ನ್ಯೂನತೆ ಎಂದು ಪರಿಗಣಿಸಿ ದಂಡ ವಿಧಿಸಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು