ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಫ್‌ಡೌನ್ ಕಥೆಗಳು | ಕೆಳಾಸೆಗಿಲ್ಲ ಹಿರಿದಾಸೆ... ಬೇಕಿದೆ ಪುಟ್ಟರಸ್ತೆ!

* ಮಳೆಗಾಲ್ದಾಗೆ ಮಾತ್ರ ಭಾಳ್ ಕಷ್ಟ * ಮೈ ಜುಮ್ಮೆನ್ನಿಸುವ ಕ್ರಾಸ್‌ಕಂಟ್ರಿ ರೇಸ್‌ * ಹಿಡಿ ಉಪ್ಪಿಗೂ ಒಂಬತ್ತು ಕಿ.ಮೀ ದೂರ ಸಾಗಬೇಕು
Last Updated 25 ಜೂನ್ 2020, 19:30 IST
ಅಕ್ಷರ ಗಾತ್ರ

ಕೆಳಾಸೆ (ಶಿರಸಿ): ‘ಹಳ್ಳಿ ಅಂದ್ರೆನೇ ಅಷ್ಟು ತಂಪ್ಪು. ಪ್ಯಾಟೆಯಷ್ಟ್ ಧಗೆನೂ ಇಲ್ಲ. ಒಂದಿನ ಪ್ಯಾಟೆ ಹೋದ್ರೆ ಕುಡದಷ್ಟ್ ನೀರು ಸಾಕಾಗದಿಲ್ಲ. ಮನೇಲಿ ಕೆಲ್ಸಾನಾದ್ರೂ ಮಾಡ್ಬಹುದು, ಪ್ಯಾಟೆ ಹೋಗ್ ಬರುದ್ ಬ್ಯಾಡಾ, ಅಷ್ಟು ಸುಸ್ತಾಕ್ಯತೆ’ ಎನ್ನುತ್ತ ಮರದ ತುಂಡಿನ ಕಾಲುಸಂಕದ ಮೇಲೆ ಸರಸರನೆ ಹೆಜ್ಜೆ ಹಾಕುತ್ತಿದ್ದರು ಸಣ್ಣು ಗೌಡ.

ಜೊರ್ರನೆ ಸುರಿವ ಮಳೆ, ಕೈಯಲ್ಲಿ ಕೊಡೆ ಹಿಡಿದ ಮೂರು ವರ್ಷದ ಪುಟಾಣಿ ದಿಶಾಂತ್, ಕಂಬಳಿಕೊಪ್ಪೆ ಹೊದ್ದ ಅವನ ಅಕ್ಕ ವಿದ್ಯಾ ಅದೇ ಕಾಲುಸಂಕದ ಮೇಲೆ ಅಜ್ಜನನ್ನು ಹಿಂಬಾಲಿಸುತ್ತಿದ್ದರು. ಮಳೆಯ ಗದ್ದಲದಲ್ಲಿ ಮಾತು ಸ್ಪಷ್ಟವಾಗಿ ಕೇಳುತ್ತಿರಲಿಲ್ಲ.

ತುಸು ಏರುದನಿ ಮಾಡಿದ ಸಣ್ಣು ಗೌಡರು, ‘ಹಳ್ಳಿಯಲ್ಲೇ ಉಳ್ದು ಉಳ್ದು ರೂಢಿಯಾಗ್ಬುಟದೆ. ಹಳ್ಳಿನೇ ಚಲೋವಾ ನಮ್ಗೆ. ಎಷ್ಟು ಬಿಸಲಲ್ಲಿ ಕೆಲ್ಸ ಮಾಡಿದ್ರೂ ಸುಸ್ತಾಗಲ್ಲ. ಆ ಪ್ಯಾಟೆ ಕೊರೊನಾದ ಹೆದ್ರಿಕೆನೂ ಇಲ್ಲ. ಆದ್ರೆ, ಮಳೆಗಾಲ್ದಾಗೆ ಮಾತ್ರ ಭಾಳ್ ಕಷ್ಟ’ ಎಂದು ಬಾಗಿ ಬೆಳೆದಿದ್ದ ಗಿಡವನ್ನು ಕಡಿದು ದಾರಿ ಮಾಡಿಕೊಂಡು ತೋಟದ ಕಡೆ ಹೊರಟರು.

ಸಣ್ಣು ಗೌಡರ ಮನೆ ಇದ್ದಿದ್ದು ಶಿರಸಿ ತಾಲ್ಲೂಕಿನ ಕುದ್ರಗೋಡ ಗ್ರಾಮದ ಕೆಳಾಸೆಯಲ್ಲಿ. ತಾಲ್ಲೂಕು ಕೇಂದ್ರದಿಂದ 21 ಕಿ.ಮೀ ಡಾಂಬರು ರಸ್ತೆಯಲ್ಲಿ ಸಾಗಿದರೆ ಸಾಲ್ಕಣಿ, ಅಲ್ಲಿಂದ ಕುದ್ರಗೋಡ ತಲುಪಲು ಏಳು ಕಿಲೋ ಮೀಟರ್ ದೂರ. ರಸ್ತೆಯಲ್ಲಿ ಒಂದೆರಡು ಕಡೆ ಕಾಂಕ್ರೀಟ್ ಹಾಸು ಕಂಡರೂ, ನಿಟ್ಟುಸಿರು ಬಿಡುವಷ್ಟರಲ್ಲಿ ಮತ್ತೆ ಕಚ್ಚಾರಸ್ತೆಯೊಂದಿಗೆ ಬೆಸೆದು, ಉದ್ದಕ್ಕೂ ಮಣ್ಣಿನ ರಸ್ತೆಯಲ್ಲೇ ಸಾಗಿದ ಅನುಭವ ಕೊಡುತ್ತದೆ. ಕುದ್ರಗೋಡಿನಿಂದ ಕೆಳಾಸೆಗೆ ಮತ್ತೆ ಎರಡು ಕಿಲೋ ಮೀಟರ್ ಮುಂದಕ್ಕೆ ಹೋಗಬೇಕು. ಇಲ್ಲಿನ ಮುಗ್ಧ ಜನರಿಗೆ ಸವಾಲೆಂಬುದು ಜೀವನಕ್ರಮವಾಗಿದೆ.

ಕೆಳಾಸೆಯಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಿದೆ. ಈ ಶಾಲೆ ಸುತ್ತುವರಿದು ಎಂಟ್ಹತ್ತು ಮನೆಗಳು ಒಟ್ಟೊಟ್ಟಿಗಿವೆ. ಇನ್ನುಳಿದವೆಲ್ಲ ಕಾಡಿನ ಅಂಚಿನ ಗದ್ದೆಯ ತಡಿಯಲ್ಲಿ ಅಲ್ಲೊಂದು ಇಲ್ಲೊಂದು ಎಂಬಂತೆ ಹರಡಿಕೊಂಡಿವೆ. ಜೋರಾಗಿ ‘ಕೂ’ ಹೊಡೆದರೂ, ಕಾಡಿನ ಮರಕ್ಕೆ ಅಪ್ಪಳಿಸುವ ದನಿ, ಆಚೆ ಮನೆಗೆ ಕೇಳಿಸುವುದಿಲ್ಲ.

ಇಲ್ಲಿರುವ ಸರ್ಕಾರಿ ಕಟ್ಟಡವೆಂದರೆ ಶಾಲೆಯೊಂದೇ. ಖಾಸಗಿ ಕಟ್ಟಡಗಳೆಂದರೆ ಮನೆ, ಕೊಟ್ಟಿಗೆಗಳು ಮಾತ್ರ. ಇಲ್ಲಿನವರು ಒಂದು ಹಿಡಿ ಉಪ್ಪು ತರಲೂ ಒಂಬತ್ತು ಕಿ.ಮೀ ದೂರದ ಸಾಲ್ಕಣಿಗೇ ಓಡಬೇಕು. ಕಿರಾಣಿಯಂಗಡಿ, ಪಾನ್‌ಬೀಡಾ, ಚಾ ಅಂಗಡಿ, ಕ್ಯಾಂಟೀನ್, ಸಲೂನ್ ಇಂತಹ ದೈನಂದಿನ ತೀರಾ ಅಗತ್ಯಗಳು ಕೂಡ ಇಲ್ಲಿ ಕಾಣಸಿಗವು. ಆದರೂ, ನೆಲದ ನಂಟು, ಬದುಕಿನ ಒತ್ತಾಸೆ ಈ ಜನರಲ್ಲಿ ಅನಿವಾರ್ಯತೆಯನ್ನು ಮೆಟ್ಟಿನಿಲ್ಲುವ ಛಲ ಬೆಳೆಸಿದೆ.

ಊರಿನ ಜನರ ಮುಖ್ಯ ಉದ್ಯೋಗ ಕೂಲಿ ಕೆಲಸ. ಸಾಲ್ಕಣಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅಡಿಕೆ ತೋಟದ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಾರೆ. ಹಿಂದೆ ಅಪ್ಪಂದಿರು ಕಾಲ್ನಡಿಗೆಯಲ್ಲಿ ಹೋಗುತ್ತಿದ್ದರೆ, ಈಗಿನ ಯುವಕರು ಬೈಕ್ ಮೇಲೆ ಹೋಗುತ್ತಾರೆ. ಕೊರಕಲು ರಸ್ತೆಯಲ್ಲೂ ಬೈಕ್‌ಗಳ ಸಂಚಾರ ಹೆಚ್ಚಾಗಿರುವುದೇ ಈ ಊರಿನ ದೊಡ್ಡ ಅಭಿವೃದ್ಧಿ. ಊರಿನ ಯುವಕರು ಈ ರಸ್ತೆಯಲ್ಲಿ ಬೈಕ್‌ ಓಡಿಸುವುದನ್ನು ಕಂಡರೆ, ಕ್ರಾಸ್‌ಕಂಟ್ರಿ ರೇಸ್‌ ನೆನಪಿಗೆ ಬಂದು ಮೈ ಜುಮ್ಮೆನ್ನುತ್ತದೆ.

‘ಕುದ್ರಗೋಡಿನಲ್ಲಿ ನಾಲ್ಕೈದು ವರ್ಷಗಳ ಹಿಂದೆ ಸಣ್ಣ ಸೇತುವೆ ನಿರ್ಮಿಸಿದ್ದರಿಂದ ಮಳೆಗಾಲದಲ್ಲಿ ಕಾಲುಸಂಕ ಕಟ್ಟುವುದು ತಪ್ಪಿದೆ. ಆದರೆ, ಕುಂಬಾರಗದ್ದೆ ಹೊಳೆ ತುಂಬಿದರೆ, ಕೆಳಾಸೆಯ ಮೇಲ್ಭಾಗ ತಲುಪುವುದು ಕಷ್ಟ. ಬೈಕ್‌ ಸೀಟ್‌ವರೆಗೆ ನೀರು ಬಂದರೂ ಬೈಕ್ ದಾಟಿಸಿ ಬಿಡುತ್ತೇವೆ. ನೀರಿನ ಹರಿವು ಇನ್ನೂ ಹೆಚ್ಚಾದರೆ, ಮಾತ್ರ ಆ ಕಡೆ ಹೋಗಲು ಆಗದು. ಕುಂಬಾರಗದ್ದೆ ಹಳ್ಳಕ್ಕೆ ಸೇತುವೆ ಆಗಲಿಕ್ಕೇ ಬೇಕು’ ಎಂದರು ಯುವಕ ರಾಮಚಂದ್ರ ಗೌಡ.

‘ಸಾಲ್ಕಣಿಯಿಂದ ಈಚೆಗೆ ಬಸ್ ಬರದೇ ದಶಕವೇ ಕಳೆದಿರಬಹುದು. ಮಳೆಗಾಲದಲ್ಲಿ ಶಿಕ್ಷಕರಿಗೆ ಶಾಲೆಗೆ ಬರಲೂ ಕಷ್ಟ. ಮಾಸ್ತರು ರಜೆ ಮಾಡಿದರೆ ಅಕ್ಕೋರನ್ನು (ಶಿಕ್ಷಕಿ) ನಾವು ಬೈಕ್‌ ಮೇಲೆ ಸಾಲ್ಕಣಿಯಿಂದ ಕರೆದುಕೊಂಡು ಬರುತ್ತೇವೆ. ನಮ್ಮ ಮಕ್ಕಳಿಗೆ ವಿದ್ಯೆ ಬೇಕಲ್ಲವಾ? ಅದಕ್ಕಾದರೂ ಹೀಗೆ ಮಾಡುವುದು ಅನಿವಾರ್ಯ’ ಎನ್ನುತ್ತ ಮೊಣಕೈಗೆ ಆತುಕೊಂಡಿದ್ದ ಮಗನತ್ತ ಅವರು ದೃಷ್ಟಿಯಿಟ್ಟರು.

ಅದೇ ಹೊತ್ತಿಗೆ ದೇವು ಗೌಡರು ಬೈಕ್ ತಂದು ನಿಲ್ಲಿಸಿದರು. ‘ಗಳಿಸಿದ ಕೂಲಿ ನಿತ್ಯದ ಊಟಕ್ಕೆ ಸಾಕು. ಹೀಗಾಗಿ, ಮಳೆಗಾಲಕ್ಕೆಂದು ಕಿರಾಣಿ ಸಾಮಗ್ರಿ ದಾಸ್ತಾನು ಮಾಡಿಕೊಳ್ಳುವಷ್ಟು ಶಕ್ತಿಯಿಲ್ಲ. ಒಂದೆರಡು ದಿನಕ್ಕಾಗುವಷ್ಟು ತರುವುದು, ಖಾಲಿಯಾದ ಮೇಲೆ ಮತ್ತೆ ಬೈಕ್‌ ಚಾಲು ಮಾಡುವುದು. ಅಷ್ಟರಲ್ಲಿ ಹೊಳೆ ಬಂದರೆ, ನೀರು ಇಳಿಯುವ ತನಕ ಕಾಯುವುದು’ ಎನ್ನುತ್ತ ಬೈಕ್ ಬಾಕ್ಸಿನಿಂದ ಬೇಳೆಕಾಳಿನ ಪೊಟ್ಟಣ ತೆಗೆದರು.

‘ನಾಲ್ಕಾರು ವರ್ಷಗಳ ಈಚೆಗೆ ಕರಡ (ಒಂದು ಜಾತಿಯ ಹುಲ್ಲು) ಹೊದೆಸುತ್ತಿದ್ದ ಮನೆಗಳು ಹಂಚನ್ನು ಕಂಡಿವೆ. ಮಣ್ಣಿನ ಗೋಡೆಗಳು ಸಿಮೆಂಟ್ ಲೇಪವನ್ನು ಮೆತ್ತಿಕೊಂಡಿವೆ. ಊರು ಅಷ್ಟೋ ಇಷ್ಟೋ ಅಭಿವೃದ್ಧಿಯಾದ ಲಕ್ಷಣ ಮನೆಗಳ ಸ್ವರೂಪದಲ್ಲಿ ಕಾಣುತ್ತಿದೆ’ ಎಂದು ಹೇಳಲು ಅವರು ಮರೆಯಲಿಲ್ಲ.

ಕುದ್ರಗೋಡ ಸಮೀಪದ ಇನ್ನೂ ಹಲವು ಹಳ್ಳಿಗಳಿಗೆ ಮೂಲಸೌಕರ್ಯ ಮರೀಚಿಕೆಯಾಗಿದೆ. ಅಲ್ಲಲ್ಲಿ ವಿದ್ಯುತ್ ಕಂಬಗಳು, ತಂತಿಗಳು ಕಾಣುತ್ತವೆ. ಇದೊಂದೇ ಇಲ್ಲಿನ ಬೆಳಕು. ಗುಡ್ಡ ಹತ್ತಿದರೆ ಮೊಬೈಲ್ ಸಿಗ್ನಲ್ ಸಿಗುತ್ತದೆ. ನೆಂಟರಿಷ್ಟರ ಜೊತೆ ಮೊಬೈಲ್‌ನಲ್ಲಿ ಮಾತನಾಡಿದ ಆನಂದ ಗುಡ್ಡವೇರಿದ ದಣಿವನ್ನು ಮರೆಸುತ್ತದೆ.

ಕೆಳಾಸೆಯ ಬಯೋಡೇಟಾ

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನಲ್ಲಿರುವ ಗ್ರಾಮ ಕುದ್ರಗೋಡ. ಶಿರಸಿ–ಸಿದ್ದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಗ್ರಾಮವಿದೆ. ಇಲ್ಲಿರುವ ಒಂದು ಹಳ್ಳಿ ಕೆಳಾಸೆ. ಅರಣ್ಯದಿಂದ ಸುತ್ತುವರಿದಿರುವ ಊರಿನಲ್ಲಿ ಕರೆವಕ್ಕಲಿಗರ 40 ಕುಟುಂಬಗಳು, ನಾಮಧಾರಿಗಳ ನಾಲ್ಕಾರು ಕುಟುಂಬಗಳು ನೆಲೆಸಿವೆ. ತುಂಡು ಹಿಡುವಳಿಯ ಗದ್ದೆಯಲ್ಲಿ ಮುಂಗಾರು ಭತ್ತ ಬೆಳೆಯುತ್ತಾರೆ. ಮುಗಿಲಿಗೆ ಮುಖ ಮಾಡಿರುವ ಮರಗಳು, ಹಸಿರು ಕೆನೋಪಿ ನಡುವಿನ ರಸ್ತೆಯಲ್ಲಿ ಸಾಗುವುದೇ ಖುಷಿ. ಆದರೆ, ಕೊರಕಲು ರಸ್ತೆಯಲ್ಲಿ ಕೊಂಚ ಲಕ್ಷ್ಯ ತಪ್ಪಿದರೂ ಬೈಕ್‌ನಿಂದ ಬೀಳುವುದು ಖಚಿತ.

ಜನಸಂಖ್ಯೆ: ಸುಮಾರು 180

ಶಾಲೆಗೆ ಹೋಗುವ ಮಕ್ಕಳು: 45

ಕೃಷಿ ಭೂಮಿ: 50 ಎಕರೆ ಖುಷ್ಕಿ ಭೂಮಿ

ಸಾರಿಗೆ ಸೌಲಭ್ಯ: ಬಸ್‌ಗಳು ಇಲ್ಲ, ಬೈಕ್‌ಗಳೇ ಆಧಾರ

ಶಿಕ್ಷಣ ಸೌಲಭ್ಯ: ಕಿರಿಯ ಪ್ರಾಥಮಿಕ ಶಾಲೆ

ಆಸ್ಪತ್ರೆ: 10 ಕಿ.ಮೀ ದೂರ

ದಿನಸಿ ಸಾಮಗ್ರಿ ಅಂಗಡಿ: 10 ಕಿ.ಮೀ ದೂರ

ಗ್ರಾಮ ಪಂಚಾಯ್ತಿ ಕಚೇರಿ: 10 ಕಿ.ಮೀ ದೂರ

ಮಳೆ ಬಂದರೆ ರಜೆ

‘ಕೆಳಾಸೆ ಶಾಲೆಯಲ್ಲಿ 22 ಮಕ್ಕಳಿದ್ದಾರೆ. ಇಬ್ಬರು ಶಿಕ್ಷಕರು ಇದ್ದಾರೆ. ನಾವು ಊರ ಹುಡುಗರೆಲ್ಲ ಸೇರಿ ಒಟ್ಟಿಗೇ ಶಾಲೆಗೆ ನಡೆದುಕೊಂಡು ಹೋಗುತ್ತೇವೆ. ಮಳೆಗಾಲದಲ್ಲಿ ಹಳ್ಳಕ್ಕೆ ನೆಗಸು ಬಂದರೆ, ಶಾಲೆಗೆ ರಜೆ ಮಾಡಬೇಕು. ಕಳೆದ ವರ್ಷ ಒಂದು ವಾರ ರಜೆ ಕೊಟ್ಟಿದ್ದರು. ಮಳೆಗಾಲದ ಮೂರು ತಿಂಗಳಲ್ಲಿ 10–12 ದಿನ ಶಾಲೆ ತಪ್ಪಿಸುವುದಾದರೂ ಆಯಿತು. ಈ ವರ್ಷ ಆರನೇ ತರಗತಿಗೆ ನಂಗೆ ಯಾವ ಶಾಲೆಗೆ ಕಳುಹಿಸುತ್ತಾರೋ ಗೊತ್ತಿಲ್ಲ’ ಎಂದಳು ವಿದ್ಯಾರ್ಥಿನಿ ವಿದ್ಯಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT