7
ಕೊಡಾಬೈಲು ಸರ್ಕಾರಿ ಶಾಲೆಗೆ ಒಬ್ಬರೇ ಶಿಕ್ಷಕ

ಮುಚ್ಚುವ ಭೀತಿಯಲ್ಲಿದ್ದ ಶಾಲೆಯಲ್ಲಿ ಹೊಸ ಬೆಳಕು

Published:
Updated:
kodabail

ಸಿದ್ದಾಪುರ: ಮಕ್ಕಳ ಸಂಖ್ಯೆ ಕುಸಿತದಿಂದ ಇನ್ನೆನು ಮುಚ್ಚುವ ಭೀತಿಯಲ್ಲಿದ್ದ ಹೆಂಗವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊಂಬತ್ತು ಕೊಡಾಬೈಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಎರಡಂಕಿಯ ಮಕ್ಕಳು ಸೇರ್ಪಡೆಗೊಳ್ಳುವ ಮೂಲಕ ಹೊಸ ಕನಸೊಂದು ಗರಿಗೆದರಿದೆ.

ಗ್ರಾಮೀಣ ಭಾಗದಲ್ಲಿರುವ ಕೊಡಾಬೈಲು ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕುಂಠಿತಗೊಂಡು ಮುಚ್ಚುವ ಭೀತಿ ಇತ್ತು. ಶಾಲೆ ಉಳಿಯಬೇಕು ಎನ್ನುವ ನೆಲೆಯಲ್ಲಿ ಶ್ರಮಿಸಿದ್ದರಿಂದ ಸಾರ್ಥಕತೆ ಫಲವಾಗಿ ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ 16 ವಿದ್ಯಾರ್ಥಿಗಳು ಸೇರ್ಪಡೆ ಆಗಿರುವುದು ವಿಶೇಷ.

ಈ ಮೂಲಕ ಶಾಲೆ ಉಳಿಸುವಿಕೆಯ ಕನಸು ಜೀವಂತವಾಗಿದೆ. ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾದರೂ ವಿದ್ಯಾರ್ಥಿಗಳಿಗೆ ಪಾಠ, ಪಠ್ಯೇತರ ಚಟುವಟಿಕೆಗಳಿಗೆ ಒಬ್ಬರೇ ಶಿಕ್ಷಕ ಇದ್ದಾರೆ. ಮಕ್ಕಳ ಶೈಕ್ಷಣಿಕ ಚಟುವಟಿಕೆ ಹಾಗೂ ಇಲಾಖೆ ಕರ್ತವ್ಯ ನಿಭಾಯಿಸುವುದೆ ಈಗಿರುವ ಶಿಕ್ಷಕರಿಗೆ ಸವಾಲಿನ ಕೆಲಸ.

ಹೆಂಗವಳ್ಳಿ ತೊಂಬತ್ತು ಕೊಡಾಬೈಲು ಶಾಲೆಯ ಉಳಿವಿಗೆ, ಶಾಲೆಯಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಳಕ್ಕೆ ಪಟ್ಟ ಶ್ರಮ ಬೆಟ್ಟದಷ್ಟು.  ಶಾಲಾ ಮುಖ್ಯ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು, ಹಳೆ ವಿದ್ಯಾರ್ಥಿಗಳು ಒಂದಾಗಿ ಗ್ರಾಮದಲ್ಲಿನ ಮನೆ ಮನೆಗೆ ತೆರಳಿ ಶಿಕ್ಷಣದ ಮಾಹಿತಿ ಹಾಗೂ ಸರ್ಕಾರಿ ಶಾಲೆಯಲ್ಲಿ ಸಿಗುವ ಸವಲತ್ತುಗಳ ಕುರಿತು ತಿಳಿಸಿ, ಮಕ್ಕಳನ್ನು ಶಾಲೆಗೆ ದಾಖಲಿಸುವಲ್ಲಿ ಯಶಸ್ಸು ಕಂಡಿದ್ದಾರೆ. ಕೊಡಾಬೈಲು, ಮೂಡುಬೆಟ್ಟು ಭಾಗದಿಂದ ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದು, ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಇನ್ನೂ ಮಕ್ಕಳು ಶಾಲೆಗೆ ಸೇರ್ಪಡೆಯಾಗುವ ನಿರೀಕ್ಷೆಯೊಂದಿಗೆ ಕಾರ್ಯತತ್ಪರರಾಗಿದ್ದಾರೆ.

ಸ್ಥಳೀಯ ದಾನಿಗಳು ಹಾಗೂ ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಉಚಿತ ವಾಹನದ ವ್ಯವಸ್ಥೆ ಮಾಡಲಾಗಿದೆ. ಇದಕ್ಕೂ ಮೊದಲು ಶಾಲೆಯಲ್ಲಿ ಯಾವುದೇ ಸೌಲಭ್ಯಗಳಿರಲಿಲ್ಲ. ಮೂಲ ಸೌಕರ್ಯ ವೃದ್ಧಿಗೆ ವಿಶೇಷವಾಗಿ ಶ್ರಮಿಸಲಾಗಿದೆ. ದಾನಿಗಳ ಸಹಕಾರದಿಂದ ಶಾಲೆಯಲ್ಲಿ ಟೈಲ್ಸ್ ಹಾಕಲಾಗಿದೆ. ಮುಚ್ಚುವ ಭೀತಿಯಲ್ಲಿದ್ದ ಶಾಲೆಗೆ ಮಕ್ಕಳ ಸಂಖ್ಯೆ ಎಂಟು ಪಟ್ಟು ಜಾಸ್ತಿಯಾದರೂ ಶಾಲೆಗೆ ಶಿಕ್ಷಕರು ಮಾತ್ರ ಒಬ್ಬರೇ.

ಇರುವ ಒಬ್ಬ ಶಿಕ್ಷಕ ಇಲಾಖೆ ಕೆಲಸ ಕಾರ್ಯಗಳಿಗೆ ತೆರಳಿದರೆ ಶಾಲೆಯಲ್ಲಿ ಶಿಕ್ಷಕರಿಲ್ಲದೆ ಮಕ್ಕಳಿಗೆ ಪಾಠವಿಲ್ಲ! ಕೆಲವು ಶಾಲೆಗಳಲ್ಲಿ ಗೌರವ ಶಿಕ್ಷಕರನ್ನು ನೇಮಿಸುವ ಮೂಲಕ ಶಿಕ್ಷಣಕ್ಕೆ ತೊಡಕಾಗದಂತೆ ನೋಡಿಕೊಳ್ಳಲಾಗುತ್ತಿದೆ. ಹೆಂಗವಳ್ಳಿ ತೊಂಬತ್ತು ಕೊಡಾಬೈಲು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗೌರವ ಶಿಕ್ಷಕರ ನೇಮಕವೂ ಕೂಡ ಆಗಿಲ್ಲ. ಇಲಾಖೆಯು ಸರ್ಕಾರಿ ಶಾಲೆಯನ್ನು ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದರೆ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣದೊಂದಿಗೆ ಮಕ್ಕಳ ದಾಖಲಾತಿ ಹೆಚ್ಚಿಸಬಹುದು ಎನ್ನುವುದು ಸ್ಥಳೀಯರ ಆಗ್ರಹ.

ಶಿಕ್ಷಕರ ನೇಮಕಕ್ಕೆ ಆದ್ಯತೆ ಸಿಗಬೇಕು

ಗ್ರಾಮೀಣ ಭಾಗದ ಸರ್ಕಾರಿ ಶಾಲೆ ಉಳಿಸಲು ಶಿಕ್ಷಣ ಇಲಾಖೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಮಕ್ಕಳ ಸಂಖ್ಯೆ ಏರಿಕೆಯಾದಾಗ ಶಾಲೆಗೆ ಇಬ್ಬರು ಶಿಕ್ಷಕರನ್ನು ನೇಮಿಸುವ ಕಾರ್ಯವಾಗಬೇಕು. ಈ ಕುರಿತು ಇಲಾಖೆಗೆ ಮನವಿ ಸಲ್ಲಿಸಲಿದ್ದೇವೆ ಶಾಲೆಯ ಹಳೆವಿದ್ಯಾರ್ಥಿ ಬೋಜು ಮಡಿವಾಳ ಹೇಳಿದರು.

ಸ್ಥಳೀಯರು, ಹಳೆ ವಿದ್ಯಾರ್ಥಿಗಳ ವಿಶೇಷ ಪ್ರಯತ್ನದಿಂದ ಮಕ್ಕಳ ಸಂಖ್ಯೆ ಹೆಚ್ಚಾಗಿರುವುದು ಸಂತೋಷ ನೀಡಿದೆ. ಗುಣಮಟ್ಟದ ಶಿಕ್ಷಣ ಒದಗಿಸಲು ಪ್ರಾಮಾಣಿಕ ಪ್ರಯತ್ನ
- ಪ್ರವೀಣ್ ಕುಮಾರ್ ಹೆಗ್ಡೆ, ಮುಖ್ಯಶಿಕ್ಷಕ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !