ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶೋಧನೆ ಗೂಗಲ್ ಹುಡುಕಾಟಕ್ಕೆ ಸೀಮಿತವಾಗುವುದು ಅಪಾಯಕಾರಿ: ಪ್ರೊ.ಎ.ವಿ.ನಾವಡ

ರಾಷ್ಟ್ರಮಟ್ಟದ ಕಮ್ಮಟಕ್ಕೆ ಚಾಲನೆ
Last Updated 18 ಜುಲೈ 2022, 8:40 IST
ಅಕ್ಷರ ಗಾತ್ರ

ಶಿರಸಿ: 'ಸಾಹಿತ್ಯ ಸಂಶೋಧನೆಗಳು ಗೂಗಲ್ ಹುಡುಕಾಟಕ್ಕೆ ಸೀಮಿತವಾಗಿರುವುದು ಅಪಾಯಕಾರಿ' ಎಂದು ಹಿರಿಯ ಸಂಶೋಧಕ ಪ್ರೊ.ಎ.ವಿ.ನಾವಡ ಹೇಳಿದರು.

ತಾಲ್ಲೂಕಿನ ಸೋಂದಾ ಸ್ವಾದಿ ದಿಗಂಬರ ಜೈನ ಮಠದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಆಯೋಜಿಸಲಾದ ಐದು ದಿನಗಳ ರಾಷ್ಟಮಟ್ಟದ ಕನ್ನಡ ಸಾಹಿತ್ಯ ಸಂಶೋಧನಾ ಕಮ್ಮಟಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

'ಸಂಶೋಧಕರು ಇಂಟರನೆಟ್ ಆಧರಿಸಿ ಅಧ್ಯಯನ ನಡೆಸುವುದು ಕಡಿಮೆಯಾಗಬೇಕು. ಸಾಹಿತ್ಯಗಳ ಸಮಗ್ರ ಅಧ್ಯಯನ ನಡೆಯಬೇಕು. ಸಂಶೋಧನೆ ಎಂದರೆ ಸ್ಥಾಪಿತ ಸತ್ಯಗಳ ಮರುಶೋಧ. ಆದರೆ, ಕೆಲವರ ಪಾಲಿಗೆ ಸಂಶೋಧನೆ ಎಂದರೆ ಸತ್ಯ ಅಳಿಸಿಹಾಕಿ ಹೊಸ ಸಿದ್ದಾಂತ ಪ್ರತಿಷ್ಠಾಪಿಸಿ ಕೆಲಸವಾಗುತ್ತಿದೆ'ಎಂದರು.

'ಕಮ್ಮಟ ಸಾಹಿತ್ಯ ಸಂಶೋಧನೆಗೆ ಹೊಸ ಆಯಾಮ ನೀಡಬೇಕಿದೆ. ಸಂಶೋಧನೆ ಪರಿಭಾಷೆ ಬದಲಾಗಿದೆ. ಸಾಹಿತ್ಯ ಪಠ್ಯವನ್ನು ಸಾಂಸ್ಕೃತಿಕ ಪಠ್ಯವಾಗಿ ಪರಿಗಣಿಸುವ ಪದ್ಧತಿ ಬೆಳೆಯುತ್ತಿದೆ. ಆದರೆ ಸಂಶೋಧನೆ ಎಂದರೆ ವಿಶ್ವವಿದ್ಯಾಲಯಗಳಲ್ಲಿ ಪಿ.ಎಚ್.ಡಿ.ಗೆ ಸೀಮಿತವಾಗುತ್ತಿರುವುದು ಬೇಸರದ ಸಂಗತಿ' ಎಂದರು.

'ಉನ್ನತ ಶಿಕ್ಷಣದ ಗುಣಮಟ್ಟ ಇಳಿಕೆಯಾಗುತ್ತಿದೆ. ಪಿ.ಎಚ್.ಡಿ‌. ಸಂಶೋಧನೆ ವೇತನ ಹೆಚ್ಚಳ, ಮುಂಬಡ್ತಿ ಸುತ್ತ ಗಿರಕಿ ಹೊಡೆಯುತ್ತಿದೆ. ಇದರಿಂದ ಪರಿಣಾಮಕಾರಿ ಸಂಶೋಧ‌ನೆ ನಡೆಯುತ್ತಿಲ್ಲ' ಎಂದರು.

'ಮಾರ್ಗದರ್ಶಕರೆ ವಿಷಯ ನೀಡಿ ಸಂಶೋಧನೆಗೆ ವಿದ್ಯಾರ್ಥಿಗಳು ಇಳಿದರೆ ವಿಸ್ತ್ರತ ಆಯಾಮ ಕಳೆದುಕೊಳ್ಳಲಿದೆ. ಎಡ, ಬಲ ಸಿದ್ಧಾಂತಗಳ ತಿಕ್ಕಾಟ, ಜಾತಿ ಸಂಘರ್ಷ ಸ್ಥಗಿತಗೊಳ್ಳದು' ಎಂದರು.

'ಸಂಶೋಧನೆ ಎಂದರೆ ತಪ್ಪಸಿನಂತೆ. ವಿಸ್ತಾರವಾದ ಓದು, ಸಮರ್ಪಕ ಟಿಪ್ಪಣಿ ಒದಗಿಸುವುದು, ಆಳವಾದ ಅಧ್ಯಯನ ಅಗತ್ಯವಿದೆ. ವಿಷಯಗಳನ್ನು ಪ್ರಕಟಿಸುವಾಗ ಕರಾರುವಕ್ಕಾದ ಮಾಹಿತಿ ಇಡಬೇಕು' ಎಂದು ಸಲಹೆ ನೀಡಿದರು.

'ಸೃಜನಶೀಲತೆ, ಸಹಜ ಸಾಹಿತ್ಯ ಎಂಬ ವರ್ಗೀಕರಣ ಸರಿಯಲ್ಲ. ಸ‌ಂಶೋಧನೆಗೆ ಪ್ರತಿ ಕೃತಿಯೂ ಪರಿಕರವಾಗಬಲ್ಲದು' ಎಂದರು.

ಜೈನ ಮಠದ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಜ್ಞಾನ ಹಂಚುವ ವಿಚಾರಗಳು ಮನುಷ್ಯನಿಗೆ ಆಹಾರದಷ್ಟೆ ಪ್ರಾಮುಖ್ಯವಾಗಿದೆ. ಸಂಶೋಧನೆಗಳು ಜ್ಞಾನದ ವ್ಯಾಪ್ತಿ ವಿಸ್ತರಿಸುವಂತಿರಬೇಕು ಎಂದರು.

'ಭಾಷೆಗಳ ಮೇಲೆ ಪ್ರೀತಿ ಇರಬೇಕು. ಆದರೆ, ಅನ್ಯ ಭಾಷೆಗಳನ್ನು ದ್ವೇಷಿಸುವ ಪ್ರವೃತ್ತಿ ಬೆಳೆಯಬಾರದು' ಎಂದರು.

'ಸಂಶೋಧನೆಗಳು ಇತಿಹಾಸ ತಿಳಿಸಿ, ಭವಿಷ್ಯತ್ತಿಗೆ ದಾರಿ ತೋರುವ ಪ್ರಕ್ರಿಯೆ ಆಗಬೇಕು' ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಮ್ಮಟದ ನಿರ್ದೇಶಕ ಡಾ.ಕೆ‌.ಸಿ.ಶಿವಾರೆಡ್ಡಿ, 'ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸಲು ಸಾಹಿತ್ಯ ಸಂಶೋಧಕರು ದಾರಿ ಹುಡುಕಬೇಕು. ಈ ನಿಟ್ಟಿನಲ್ಲಿ ಚರ್ಚೆಗೆ ಕಮ್ಮಟ ನಾಂದಿಯಾಗಲಿದೆ' ಎಂದರು.

'ಸಂಶೋಧನೆಗಳು ಕಾಲಕ್ಕೆ ತಕ್ಕಂತೆ ಸುಧಾರಣೆ ಕಾಣಬೇಕು. ಸಂಶೋಧನೆಯ ಮಾರ್ಗದ ಕುರಿತು ಸಂಶೋಧಕರು ಮೊದಲೇ ಅರಿತಿರಬೇಕು. ಸಂಶೋಧನೆಯ ಪ್ರತಿಫಲ ಸಮಾಜಕ್ಕೆ ಸಿಗಬೇಕು' ಎಂದರು.

ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಸಂಶೋಧನಾರ್ಥಿಗಳ ಜತೆಗೆ ದೇಶದ ಹಲವೆಡೆಯಿಂದಲೂ ಸಂಶೋಧಕರು ಪಾಲ್ಗೊಂಡಿದ್ದರು. ಅಕಾಡೆಮಿ ರಿಜಿಸ್ಟ್ರಾರ್ ಕರಿಯಪ್ಪ ಎನ್., ಕಮ್ಮಟದ ಸಹ ನಿರ್ದೇಶಕ ಡಿ.ಕೆ.ಚಿತ್ತಯ್ಯ ಪೂಜಾರ್, ಸದಸ್ಯ ಸಂಚಾಲಕರಾದ ದತ್ತಗುರು ಹೆಗಡೆ, ಜಿನದತ್ತ ಹಡಗಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT