ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ: ಭೂಕುಸಿತ, ಕಳಚೆ ಕಳಚಿದ ಪರಂಪರೆಯ ಕೊಂಡಿ

ಸಂಪೂರ್ಣ ಗ್ರಾಮ ಸ್ಥಳಾಂತರಕ್ಕೆ ಮುಖ್ಯಮಂತ್ರಿ ಸೂಚನೆ
Last Updated 30 ಜುಲೈ 2021, 19:30 IST
ಅಕ್ಷರ ಗಾತ್ರ

ಕಾರವಾರ: ಈ ಊರಿನ ವ್ಯಾಪ್ತಿ ಸಣ್ಣದಾದರೂ ಐತಿಹಾಸಿಕ ಮಹತ್ವವಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಇಲ್ಲಿನ 30 ಮಂದಿ ಭಾಗವಹಿಸಿದ್ದರು. ಇಲ್ಲಿ 1885ರಲ್ಲೇ ಸರ್ಕಾರಿ ಶಾಲೆ ಪ್ರಾರಂಭವಾಗಿತ್ತು. 1953ರಲ್ಲಿ ಅಂದಿನ ಮುಂಬೈ ರಾಜ್ಯದ ಸಚಿವ ವಿ.ಕೆ.ಸಾಠೆ ಎಂಬುವವರು ಭೇಟಿ ನೀಡಿದ್ದರು.

ಭಾರಿ ಭೂಕುಸಿತದಿಂದ ಜರ್ಝರಿತವಾಗಿರುವ ಯಲ್ಲಾಪುರ ತಾಲ್ಲೂಕಿನ ವಜ್ರಳ್ಳಿ ತಾಲ್ಲೂಕಿನ ಕಳಚೆಯಲ್ಲಿ ಇಂತಹ ಹಲವು ವಿಶೇಷಗಳಿವೆ. ‘ಈಗ ಬೆಟ್ಟಗಳ ನಡುವೆ ಬಿರುಕು ಬಿಟ್ಟು, ಮಣ್ಣು ಜಾರಿದ್ದು, ಪರಂಪರೆಯ ಕೊಂಡಿ ಕಳಚುತ್ತಿದೆ. ಹಾಗಾಗಿ ಇನ್ನುಮುಂದೆ ಇಲ್ಲಿ ಜೀವನ ಸಾಧ್ಯವಿಲ್ಲ, ನಮ್ಮನ್ನು ಸ್ಥಳಾಂತರ ಮಾಡಿ’ ಎಂಬುದು ಸ್ಥಳೀಯರ ಆಗ್ರಹವೂ ಆಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅದಕ್ಕೆ ಪೂರಕವಾಗಿ ಸ್ಪಂದಿಸಿದ್ದು, 15 ಎಕರೆ ಜಮೀನು ಗುರುತಿಸಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.

‘ಗಾಂಧೀಜಿ ಅವರ ಸ್ವರಾಜ್ಯ ಪರಿಕಲ್ಪನೆಯನ್ನು ಇಲ್ಲಿನ ಜನ ಪಾಲಿಸಿದ್ದರು. ಉಪ್ಪು ಮತ್ತು ಬಟ್ಟೆಯ ಹೊರತಾಗಿ ಜೀವನಕ್ಕೆ ಬೇಕಾದ ಎಲ್ಲವನ್ನೂ ತಾವೇ ಸಿದ್ಧಪಡಿಸಿಕೊಳ್ಳುತ್ತಿದ್ದರು. ಸ್ವಾತಂತ್ರ್ಯಕ್ಕೂ ಮೊದಲು ಗೋವಾ ರಾಜ್ಯವು ಇಲ್ಲಿಗೆ ಸಮೀಪದಲ್ಲಿತ್ತು. ಆಗ ಅಲ್ಲಿಂದ ತರಲಾಗುತ್ತಿದ್ದ ಉಪ್ಪಿಗೆ ಬದಲಾಗಿ, ಇಲ್ಲಿ ಬೆಳೆಯುತ್ತಿದ್ದ ಅಡಿಕೆ ಮತ್ತು ತೆಂಗನ್ನು ವಿನಿಮಯ ಮಾಡಿಕೊಳ್ಳಲಾಗುತ್ತಿತ್ತು ಎಂದು ದಾಖಲೆಗಳಲ್ಲಿ ಉಲ್ಲೇಖವಿದೆ. ಅಂದಿನ ಕಾಲದಲ್ಲಿ ಗೋವಾಕ್ಕೆ ಸಾಗುತ್ತಿದ್ದ ಉಪ್ಪಿನ ಮಾರ್ಗ ಇನ್ನೂ ಇದೆ’ ಎನ್ನುತ್ತಾರೆ ಊರಿನ ಹಿರಿಯರು.

‘ಕಳಚೆಗೆ ಯಲ್ಲಾಪುರ ತಾಲ್ಲೂಕಿನಲ್ಲೇ ವಿಶೇಷ ಸ್ಥಾನಮಾನವಿದೆ. 18ನೇ ಶತಮಾನದಲ್ಲಿ ಇಡೀ ತಾಲ್ಲೂಕಿನಲ್ಲಿ ಕಳಚೆಯ ಹೊರತಾಗಿ ಮತ್ತೆಲ್ಲೂ ಶಾಲೆಗಳಿರಲಿಲ್ಲ. 1973ರಲ್ಲಿ ಸಂಸ್ಕೃತ ಪಾಠಶಾಲೆ ಶುರುವಾಗಿತ್ತು. ಬೇರೆ ಊರಿನ ವಿದ್ಯಾರ್ಥಿಗಳು ಇಲ್ಲಿಗೆ ಬಂದು ವಿದ್ಯಾಭ್ಯಾಸ ಮಾಡುತ್ತಿದ್ದರು’ ಎನ್ನುತ್ತಾರೆ ಊರಿನ ಮುಖಂಡ ವೆಂಕಟ್ರಮಣ ಹೆಗಡೆ ಬೆಳ್ಳಿ.

‘ನನ್ನ ಅಜ್ಜನೂ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಇಲ್ಲಿ ಗಂಡಸರಷ್ಟೇ ಅಲ್ಲದೇ ದೇವಕಿ ಭಟ್ಟ, ಅಮ್ಮಕ್ಕ ಗದ್ದೆ ಮುಂತಾದ ಮಹಿಳೆಯರೂ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ತುರ್ತು ಪರಿಸ್ಥಿತಿ ವಿರುದ್ಧವೂ ಜೈಲು ಭರೋ ಮಾಡಿದ್ದರು’ ಎಂದು ಅವರು ಹೇಳುತ್ತಾರೆ.

‘ಊರಿನಲ್ಲಿ ಈಗ ಎರಡು ಸರ್ಕಾರಿ ಪ್ರಾಥಮಿಕ ಶಾಲೆಗಳು, ಒಂದು ಪ್ರೌಢಶಾಲೆಯಿದೆ. ಶೇ 100ರ ಫಲಿತಾಂಶದ ಸಾಧನೆಯೂ ಇದೆ. ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉತ್ತಮ ಉದ್ಯೋಗದಲ್ಲಿದ್ದಾರೆ. ಬೇರೆ ರಾಜ್ಯಗಳಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳಿದ್ದಾರೆ. ರಾಜಕೀಯ ಕ್ಷೇತ್ರದಲ್ಲೂ ಹೆಸರು ಮಾಡಿದ್ದಾರೆ’ ಎಂದು ನೆನಪಿಸಿಕೊಳ್ಳುತ್ತಾರೆ.

‘ಸಮೀಪದ ಊರುಗಳಿಗೆ ವಿದ್ಯುತ್ ಸಿಗುವ ಮೊದಲೇ ಕಳಚೆಗೆ ಸಂಪರ್ಕವಾಗಿದೆ. 1969ರಲ್ಲಿ ಸೇವಾ ಸಹಕಾರ ಸಂಘಕ್ಕೆ ಅಂದಿನ ಹಣಕಾಸು ಸಚಿವ ರಾಮಕೃಷ್ಣ ಹೆಗಡೆ ಅಡಿಗಲ್ಲಿಟ್ಟಿದ್ದರು. 1987–88ರಲ್ಲಿ ಸರ್ಕಾರಿ ಪ್ರೌಢಶಾಲೆ ಶುರುವಾಯಿತು. ಕದ್ರಾ, ಕೊಡಸಳ್ಳಿ ಜಲಾಶಯಗಳು, ಕೈಗಾ ಅಣು ವಿದ್ಯುತ್ ಸ್ಥಾವರಕ್ಕೆ ಜಮೀನು, ಮನೆ ಕಳೆದುಕೊಂಡವರು ಇಲ್ಲಿನವರು. ಹೀಗೆ ನಾನಾ ಕಾರಣಗಳಿಂದ ನಿರಾಶ್ರಿತರಾಗಿ ಗುಳ್ಳಾಪುರ, ಅರಬೈಲ್, ಹೆಗ್ಗಾರ, ಕನಕನಹಳ್ಳಿ ಭಾಗದಲ್ಲಿ ತಮ್ಮ ಜೀವನವನ್ನು ಕಟ್ಟಿಕೊಂಡಿದ್ದಾರೆ. ಈ ರೀತಿ ಸಮಾಜಕ್ಕೆ ಅನೇಕ ಕೊಡುಗೆ ಕೊಟ್ಟ ಊರು ನಮ್ಮದು’ ಎಂದು ವಿವರಿಸುತ್ತಾರೆ.

ಸತತ 25 ವರ್ಷಗಳಿಂದ ಇಲ್ಲಿ ಸಾರ್ವಜನಿಕ ಗಣೇಶೋತ್ಸವ ನಡೆಯುತ್ತಿದೆ. ಲಕ್ಷ್ಮೀನರಸಿಂಹ ಯುವಕ ಸಂಘವು ಪ್ರತಿ ವರ್ಷ ನಾಡಹಬ್ಬ ನವರಾತ್ರಿ ಸಂದರ್ಭದಲ್ಲಿ ಶಾರದೋತ್ಸವ ಆಯೋಜಿಸುತ್ತಿದೆ. ಈ ರೀತಿ ಹತ್ತಾರು ವಿಶೇಷಗಳನ್ನು ಹೊಂದಿರುವ ಕಳಚೆಯ ಪಾರಂಪರಿಕ ಕೊಂಡಿಯನ್ನು ಭೂ ಕುಸಿತ ಕಳಚಿದೆ. ಪ್ರಾಕೃತಿಕ ವಿಕೋಪದಿಂದಾಗಿ ಎಲ್ಲವೂ ನೆನಪಾಗಿ ಮಾತ್ರ ಉಳಿಯುವಂತೆ ಮಾಡಿದೆ.

ಪ್ರಸಿದ್ಧ ಕಳಚೆ ಕಲ್ಲು: ಕಳಚೆಯಲ್ಲಿರುವ ಬೃಹತ್ ಕಲ್ಲೊಂದು ಪರಿಸರ ಪ್ರಿಯರ ಕುತೂಹಲದ ಕೇಂದ್ರ. ‘ಕಳಚೆ ಕಲ್ಲು’ ಎಂದೇ ಪ್ರಸಿದ್ಧವಾಗಿರುವ ಏಕಶಿಲೆಯನ್ನು ಶಿವರಾಮ ಕಾರಂತರು ಕುತೂಹಲದಿಂದ ವೀಕ್ಷಿಸಲು ಬಂದಿದ್ದರು ಎಂದು ಇಲ್ಲಿನವರು ಹೇಳುತ್ತಾರೆ.

ಇಲ್ಲಿ ಶತಮಾನಗಳಿಂದಲೂ ಯಕ್ಷಗಾನ ಬಯಲಾಟಗಳು ಪ್ರಮುಖ ಸಾಂಸ್ಕೃತಿಕ ಕಾರ್ಯಕ್ರಮವಾಗಿದೆ. ವಿದ್ಯುತ್ ಹಾಗೂ ಅನಿಲದ ಸೌಲಭ್ಯವಿಲ್ಲದ ಕಾಲದಲ್ಲಿ ಸ್ಥಳಿಯವಾಗಿ ಸಿಗುತ್ತಿದ್ದ ‘ನಾಗ ಎಣ್ಣೆ ಪಂಜಿನ ಬೆಳಕಿನ ಯಕ್ಷಗಾನ ಬಯಲಾಟ’ ಪ್ರಸಿದ್ಧವಾಗಿತ್ತು ಎಂದು ಸ್ಮರಿಸುತ್ತಾರೆ.

***
ಕಳಚೆಯು ಸಾಮಾಜಿಕವಾಗಿ ತುಂಬ ಜಾಗೃತವಾದ ಕೇಂದ್ರ. ಸ್ವಾತಂತ್ರ್ಯ ಹೋರಾಟ, ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟಗಳಲ್ಲಿ ಇಲ್ಲಿನವರು ಸಕ್ರಿಯವಾಗಿ ಭಾಗವಹಿಸಿದ್ದರು.
– ವೆಂಕಟ್ರಮಣ ಹೆಗಡೆ ಬೆಳ್ಳಿ, ಕಳಚೆ ನಿವಾಸಿ.

***
ಘಟ್ಟ ಪ್ರದೇಶವಾದರೂ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿತ್ತು. ಭೂ ಕುಸಿತದಿಂದಾಗಿ ಎಲ್ಲವೂ ಕೊಚ್ಚಿಹೋಗಿವೆ. ಜನರಿಗೆ ಆಘಾತವಾಗಿದ್ದು, ವಿಶ್ವಾಸ ತುಂಬುವ ಕೆಲಸ ಆಗಬೇಕಿದೆ.
– ಉಮೇಶ ಭಾಗ್ವತ, ಅಧ್ಯಕ್ಷ, ಸಹ್ಯಾದ್ರಿ ಸೇವಾ ಸಹಕಾರ ಸಂಘ ಕಳಚೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT