ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಹದಗೆಟ್ಟ ರಸ್ತೆ: ಪರದಾಟ

ಮಂದಗತಿಯಲ್ಲಿ ಸಾಗಿದ ನಗರೋತ್ಥಾನ ಕಾಮಗಾರಿ; ನಾಗರಿಕರ ಆಕ್ರೋಶ
Last Updated 21 ಮೇ 2018, 12:31 IST
ಅಕ್ಷರ ಗಾತ್ರ

ಚಿತ್ರದುರ್ಗ: ಇಲ್ಲಿನ ಕೆಲ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳದ್ದೇ ಸಾಮ್ರಾಜ್ಯ. ಟಾರು ಕಿತ್ತು ಹೋಗಿ ಮಣ್ಣಿಗೂ ರಸ್ತೆಯ ಮೇಲ್ಮೈಗೂ ವ್ಯತ್ಯಾಸ ಇಲ್ಲದಂತಾಗಿದೆ. ಆಟೊ, ದ್ವಿಚಕ್ರ ವಾಹನ ಸವಾರರು ಪರದಾಡುವಂತಾಗಿದೆ.

ಬಿ.ಡಿ. ರಸ್ತೆಯ ಎಸ್‌ಬಿಐ ಬ್ಯಾಂಕ್‌ ಮುಂಭಾಗದಿಂದ ನೇರವಾಗಿ ರಾಜಬೀದಿ ದೊಡ್ಡಪೇಟೆಗೆ ಹಾಗೂ ಧರ್ಮಶಾಲಾ ರಸ್ತೆಯಿಂದ ವಾಸವಿ ವಿದ್ಯಾಸಂಸ್ಥೆ ಮಾರ್ಗವಾಗಿ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದೆ. ಇದರಿಂದ ಇಲ್ಲಿನ ನಿವಾಸಿಗಳು ತೊಂದರೆ ಪಡುವಂತಾಗಿದೆ.

ಸಂಚರಿಸುವುದೇ ಕಷ್ಟಕರ: ಒಳಚರಂಡಿ ಕಾಮಗಾರಿ ಹಾಗೂ ನೂತನ ರಸ್ತೆ ನಿರ್ಮಾಣಕ್ಕಾಗಿ ಟಾರು ಕಿತ್ತು ಹಾಕಲಾಗಿದ್ದು, ಅನೇಕ ದಿನಗಳಿಂದ ಇಲ್ಲಿ ಸಂಚರಿಸುವುದೇ ಕಷ್ಟಕರವಾಗಿದೆ. ಅದಕ್ಕೂ ಮುನ್ನ ಓಡಾಡಲು ರಸ್ತೆಯೇನು ಯೋಗ್ಯವಾಗಿರಲಿಲ್ಲ. ಒಂದು ವರ್ಷದಿಂದಲೂ ಇಲ್ಲಿನ ನಾಗರಿಕರು, ವಾಹನ ಸವಾರರು ಹೈರಾಣಾಗಿ ಹೋಗಿದ್ದಾರೆ.

‘ನಗರಸಭೆ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಜಿಲ್ಲಾಡಳಿತವನ್ನು ಶಪಿಸುತ್ತಲೇ ಅನೇಕರು ಈ ರಸ್ತೆಗಳಲ್ಲಿ ಸಂಚರಿಸುತ್ತಿದ್ದಾರೆ’ ಎನ್ನುತ್ತಾರೆ ವಾಹನ ಸವಾರರಾದ ರಘು, ರಮೇಶ್, ರಾಜು, ಫೈರೋಜ್.

ಯಾಮಾರಿದರೆ ಅಪಾಯ: ‘ಸದ್ಯಕ್ಕೆ ಈ ಮಾರ್ಗದ ರಸ್ತೆಗಳೆಲ್ಲ ಕಲ್ಲುಮಯವಾಗಿದೆ. ವಿದ್ಯುತ್ ವ್ಯತ್ಯಯ ಉಂಟಾದಾಗ ಈಗಾಗಲೇ ಕೆಲ ಸವಾರರು ಬಿದ್ದು, ಗಾಯಗೊಂಡಿದ್ದಾರೆ. ನೂತನ ರಸ್ತೆ ನಿರ್ಮಾಣಕ್ಕಾಗಿ ಲಕ್ಷ್ಮಿ ಬಜಾರ್ ರಸ್ತೆಗೆ ಹಾಕಲಾಗಿರುವ ಜಲ್ಲಿ ಕಲ್ಲುಗಳು ಮಳೆ ಬಂದಾಗಲೆಲ್ಲ ಚದುರಿ ಹೋಗುತ್ತಿವೆ. ಸ್ವಲ್ಪ ಯಾಮಾರಿದರೂ ಕೈಕಾಲುಗಳಿಗೆ ಪೆಟ್ಟು ಬೀಳಲಿದೆ. ಮಳೆಗಾಲ ಪ್ರಾರಂಭವಾದ ಹಿನ್ನೆಲೆಯಲ್ಲಿ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಮುಂದಾಗಬೇಕು’ ಎನ್ನುತ್ತಾರೆ ಮಹಮ್ಮದ್ ಆಲಿ.

ಒಂದು ಕಾಮಗಾರಿ ಪ್ರಾರಂಭವಾದರೆ, ಅದನ್ನು ತ್ವರಿತವಾಗಿ ಮುಗಿಸಬೇಕು. ಗುಣಮಟ್ಟ ಕಾಯ್ದುಕೊಳ್ಳಬೇಕು. ಸರ್ಕಾರ ನಗರೋತ್ಥಾನದಡಿ ನೀಡಿರುವ ಅನುದಾನ ಸಮರ್ಪಕವಾಗಿ ಬಳಕೆಯಾದಾಗ ಯೋಜನೆ ಸಾರ್ಥಕವಾಗಲು ಸಾಧ್ಯ. ಹಳ್ಳಿಗಿಂತಲೂ ಹದಗೆಟ್ಟ ರಸ್ತೆ ನಗರದಲ್ಲಿವೆ. ಶೀಘ್ರ ಕಾಮಗಾರಿ ಪೂರ್ಣಗೊಳಿಸಬೇಕು ಎಂಬುದು ಸ್ಥಳೀಯರ ಒತ್ತಾಯ.

ಅಧಿಕಾರಿಗಳ ನಿರ್ಲಕ್ಷ್ಯ: ಆರೋಪ

‘ಈ ರಸ್ತೆ ಮಾರ್ಗಗಳಲ್ಲಿ ಖಾಸಗಿ ಆಸ್ಪತ್ರೆಗಳಿವೆ. ಗರ್ಭಿಣಿಯರು ಆಟೊದವರು ಬರಲು ಹಿಂದೇಟು ಹಾಕುತ್ತಿದ್ದಾರೆ. ವಾಸವಿ ವಿದ್ಯಾಸಂಸ್ಥೆ ಮುಂಭಾಗದಲ್ಲಿ ಹಳೆಯ ತರಕಾರಿ ಮಾರುಕಟ್ಟೆ ಇದ್ದು, ನಿತ್ಯವೂ ನೂರಾರು ಮಂದಿ ಬರುತ್ತಾರೆ. ರಸ್ತೆ ಹದಗೆಟ್ಟ ಕಾರಣ ತೊಂದರೆ ಅನುಭವಿಸುವಂತಾಗಿದೆ’ ಎನ್ನುತ್ತಾರೆ ಚಿತ್ರಕಲಾವಿದ ನಾಗರಾಜ್ ಬೇದ್ರೆ.

‘ಇದೇ ಮಾರ್ಗದಲ್ಲಿ ಶಾಲೆಗಳಿವೆ. ವಿದ್ಯಾರ್ಥಿಗಳು ತೊಂದರೆ ಎದುರಿಸುವಂತಾಗಿದೆ. ನಗರೋತ್ಥಾನದ ಮೂರನೇ ಹಂತದ ಕಾಮಗಾರಿ ಸಂಪೂರ್ಣ ಮಂದಗತಿಯಲ್ಲಿ ಸಾಗುತ್ತಿದೆ. ಅಧಿಕಾರಿಗಳನಿರ್ಲಕ್ಷವೇ ಇದಕ್ಕೆ ಕಾರಣ’ ಎಂದು ಅವರು ದೂರಿದ್ದಾರೆ.

**
ಮುಂದಿನ ವಾರದಿಂದಲೇ ಡಾಂಬರೀಕರಣ ನಡೆಯಲಿದ್ದು, ರಸ್ತೆಗಳ ಗುಣಮಟ್ಟ ಪರಿಶೀಲಿಸಲು ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ
– ಮಂಜುನಾಥ್ ಗೊಪ್ಪೆ, ನಗರಸಭೆ ಅಧ್ಯಕ್ಷ 

- ಬೋರೇಶ ಎಂ.ಜೆ. ಬಚ್ಚಬೋರನಹಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT