ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳ್ಳಬಟ್ಟಿಯೆಡೆಗೆ ವ್ಯಸನಿಗಳ ದೃಷ್ಟಿ

ಲಾಕ್‌ಡೌನ್ ಕಾರಣ ಮದ್ಯದಂಗಡಿ ಬಂದ್
Last Updated 18 ಏಪ್ರಿಲ್ 2020, 14:22 IST
ಅಕ್ಷರ ಗಾತ್ರ

ಯಲ್ಲಾಪುರ: ಲಾಕ್‌ಡೌನ್ ಜಾರಿಯಲ್ಲಿರುವ ಕಾರಣ ಕಳೆದ 25 ದಿನಗಳಿಂದ ಮದ್ಯದಂಗಡಿಗಳು ಬಂದ್ ಆಗಿವೆ. ಮದ್ಯವಿಲ್ಲದೇ ಕಂಗಾಲಾಗಿರುವ ವ್ಯಸನಿಗಳು, ಕಂಟ್ರಿ ಮದ್ಯದೆಡೆಗೆ ಮುಖ ಮಾಡಿದ್ದಾರೆ.

ದಿಢೀರ್ ಆಗಿ ಲಾಕ್‌ಡೌನ್ ಘೋಷಣೆಯಾದ ಕಾರಣ ಮದ್ಯವ್ಯಸನಿಗಳಿಗೆ ಮದ್ಯ ಸಂಗ್ರಹಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲ. ಅಲ್ಲದೇ, ಮದ್ಯದಂಗಡಿ ಮಾಲೀಕರಿಗೂ ಸುಳಿವು ಇರಲಿಲ್ಲ. ಹಾಗಾಗಿ, ಅಂಗಡಿ ಹೊರತಾಗಿ ಬೇರೆಡೆ ಮದ್ಯದ ಸಂಗ್ರಹವೂ ಇಲ್ಲದಂತಾಗಿದೆ. ಪರಿಣಾಮ ಮದ್ಯ ವ್ಯಸನಿಗಳು ಕಂಗಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವೊಬ್ಬರಿಗೆ ಅಕ್ರಮವಾಗಿ ಮದ್ಯ ಸಿಗುತ್ತಿದ್ದರೂ, ಅವರಿಂದ ಪಡೆಯಲು ಮೂರು ಪಟ್ಟು ಹೆಚ್ಚು ಹಣ ನೀಡಬೇಕಾಗುತ್ತದೆ. ಅದೂ ಅವರು ಪರಿಚಯಸ್ಥರಿಗೆ ಮಾತ್ರ ಕೊಡುತ್ತಾರೆ. ಹೀಗಾಗಿ, ವ್ಯಸನಿಗಳು ಕಳ್ಳಬಟ್ಟಿ ಮೊರೆ ಹೋಗುತ್ತಿದ್ದಾರೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ವ್ಯಸನಿಯೊಬ್ಬರು.

ತಾಲ್ಲೂಕಿನ ಕಿರವತ್ತಿ, ಮದ್ನೂರು, ಕಣ್ಣಿಗೇರಿ ಗ್ರಾಮ ಪಂಚಾಯ್ತಿ ಭಾಗದಲ್ಲಿ ಕಬ್ಬನ್ನು ಸಾಕಷ್ಟು ಪ್ರಮಾಣದಲ್ಲಿ ಬೆಳೆಯುತ್ತಾರೆ. ಅಲ್ಲದೇ, ಬೆಲ್ಲವನ್ನು ತಯಾರಿಸುತ್ತಾರೆ. ಬೆಲ್ಲ ತಯಾರಿಸುವಾಗ ಒಂದು ರೀತಿಯ ಕೆಸರು ಬೆಲ್ಲ ಮೇಲಕ್ಕೆ ಬರುತ್ತದೆ, ಅದನ್ನು ಕಾಕಂಬಿ ಎನ್ನುತಾರೆ. ಈ ಕಾಕಂಬಿಗೆ, ಗೇರು ಹಣ್ಣು, ಅಥವಾ ಬೇರೆ ಹಣ್ಣುಗಳು, ನವಸಾಗರ ಮುಂತಾದ ಸಾಮಗ್ರಿಗಳನ್ನು ಹಾಕಿ ಕೊಳೆಸಿ, ಬಟ್ಟಿ ಇಳಿಸಿ ಕಂಟ್ರಿ ಮದ್ಯ ತಯಾರಿಸುತ್ತಾರೆ. ಮದ್ನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹುಲಗೋಡು ಹಾಗೂ ಕಣ್ಣಿಗೇರಿ ಪಂಚಾಯ್ತಿ ವ್ಯಾಪ್ತಿಯ ವಡೇಹುಕ್ಕಳಿ ಸುತ್ತ ಮುತ್ತ ಇದು ಹೆಚ್ಚಾಗಿದೆ. ತಯಾರಕರು ಸ್ವಂತ ಬಳಕೆ, ಸುತ್ತಮುತ್ತಲಿನ ಜನರಿಗೆ ನೀಡಲು ಮಾತ್ರ ಸೀಮಿತವಾಗಿದ್ದ ಈ ಕಳ್ಳಬಟ್ಟಿ, ಈಗ ಲಾಕ್‌ಡೌನ್ ಸಂದರ್ಭದಲ್ಲಿ ವ್ಯಾಪಾರದ ಸರಕಾಗಿ ರೂಪುಗೊಂಡಿದೆ. ಈ ಮಾಹಿತಿ ಬಹುಬೇಗ ಹಂಚಿಕೆಯಾಗುತ್ತಿರುವ ಕಾರಣ ಅನೇಕರು ಸ್ಥಳಕ್ಕೆ ಹೋಗಿ ಖರೀದಿಸುತ್ತಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಇದಕ್ಕೆ ಪುಷ್ಟಿಯೆಂಬಂತೆ, ಶುಕ್ರವಾರ ಮಧ್ಯಾಹ್ನ ನೋಂದಣಿಯಾಗದ ಟಾಟಾ ಎಸ್ ನಂತಹ ವಾಹನವೊಂದರಲ್ಲಿ ಬಂದ ಯಲ್ಲಾಪುರ ಪಟ್ಟಣದ ಕಾಳಮ್ಮನಗರದ ಕೆಲವು ಯುವಕರು ಕಣ್ಣಿಗೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಿಮ್ಮಾಪುರ ಚೆಕ್‌ಪೋಸ್ಟ್‌ನಲ್ಲಿ ಸಿಕ್ಕಿ ಬಿದ್ದಿದ್ದಾರೆ. ನೋಂದಣಿ ಇಲ್ಲದ ವಾಹನ, ವಾಹನಕ್ಕೆ ಸಂಬಂಧಿಸಿದ ದಾಖಲೆ, ಚಾಲನಾ ಪರವಾನಗಿ ಪತ್ರ, ಮೊಬೈಲ್ ನಂಬರ್ ಕೂಡ ಕೊಡದೆ, ಎಲ್ಲಿ ಹೋಗುತ್ತಿದ್ದಾರೆ ಎನ್ನುವ ಮಾಹಿತಿಯನ್ನು ತಿಳಿಸದೇ ಚೆಕ್‌ಪೋಸ್ಟ್ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾರೆ ಎಂದು ಅದೇ ಮೂಲ ತಿಳಿಸಿದೆ.

ಈ ತಂಡ ಎಲ್ಲಿ ಹೊರಟಿತ್ತು ಎಂಬುದನ್ನು ಪತ್ತೆ ಹಚ್ಚಿದಾಗ, ಕೊಳೆ ಬೆಲ್ಲ ಬಳಸಿ, ಮದ್ಯ ತಯಾರಿಸಲು ಹೊರಟಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

‘ತಾಲ್ಲೂಕಿನಲ್ಲಿ ಕಳ್ಳಬಟ್ಟಿ ಮದ್ಯ ತಯಾರಿಕೆ ನಡೆಯುತ್ತಿದೆ ಎಂಬ ಮಾಹಿತಿಯ ಮೇರೆಗೆ ತಾಲ್ಲೂಕಿನ ಮದ್ನೂರು, ಕಿರವತ್ತಿ, ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಲವು ಪ್ರದೇಶದಲ್ಲಿ ದಾಳಿ ನಡೆಸಿದ್ದೇವೆ. ಅರಣ್ಯ ಪ್ರದೇಶದಲ್ಲಿ ರಾಸಾಯನಿಕ ಹಾಗೂ ಪರಿಕರಗಳು ಸಿಕ್ಕಿದ್ದು, ಅವುಗಳನ್ನು ಜಪ್ತಿ ಮಾಡಿ, ಕಳ್ಳಬಟ್ಟಿ ನಾಶಪಡಿಸಿದ್ದೇವೆ. ಆದರೆ ಆರೋಪಿಗಳು ಸಿಕ್ಕಿಲ್ಲ’ ಎಂದು ಯಲ್ಲಾಪುರ ಉಪವಿಭಾಗದ ಪ್ರಭಾರಿ ಅಬಕಾರಿ ನಿರೀಕ್ಷಕ ಮಂಜುನಾಥ ಜೋಗಳೇಕರ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT