ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚಾರಣಾ ತಂಡದ ಎದುರು ಜನಾಕ್ಷೇಪ

ಭಟ್ಕಳ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್ ವಿರುದ್ಧ ದೂರಿನ ವಿಚಾರಣೆಗೆ ಬಂದಿದ್ದ ಅಧಿಕಾರಿಗಳು
Last Updated 7 ಏಪ್ರಿಲ್ 2021, 15:54 IST
ಅಕ್ಷರ ಗಾತ್ರ

ಭಟ್ಕಳ: ತಾಲ್ಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್ ವಿರುದ್ಧದ ದೂರಿನ ವಿಚಾರಣೆಗೆ ಬುಧವಾರ ಬಂದ ಅಧಿಕಾರಿಗಳ ತಂಡವು, ಸ್ಥಳೀಯ ಹಲವು ಮಂದಿಯ ಆಕ್ಷೇಪ ಎದುರಿಸಿದರು.

ಭಟ್ಕಳದ ಈಶ್ವರ ನಾಯ್ಕ ಎಂಬುವವರು ಡಾ.ಸವಿತಾ ಕಾಮತ್ ವಿರುದ್ಧ ದೂರು ನೀಡಿದ್ದರು. ಅದರ ವಿಚಾರಣೆಗೆಂದು ಬೆಳಗಾವಿಯ ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕ ಡಾ.ಪ್ರಭು ಬಿರಾದಾರ್ ನೇತೃತ್ವದಲ್ಲಿ ಅಧಿಕಾರಿಗಳು ಬಂದಿದ್ದರು.

ಈ ವಿಚಾರ ತಿಳಿದ ಸ್ಥಳೀಯರು ಆಸ್ಪತ್ರೆಗೆ ಬಂದು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯ ನಿವಾಸಿ ಕೃಷ್ಣ ನಾಯ್ಕ ಮಾತನಾಡಿ, ‘ಡಾ.ಸವಿತಾ ಕಾಮತ್ ಜನಪ್ರತಿನಿಧಿಗಳ, ದಾನಿಗಳ ಸಹಕಾರದಿಂದ ಸರ್ಕಾರಿ ಆಸ್ಪತ್ರೆಯನ್ನು ಹೈಟೆಕ್ ಆಗಿ ಪರಿವರ್ತಿಸಿದ್ದಾರೆ. ಅವರ ಮನೋಸ್ಥೈರ್ಯ ಕುಸಿಯುವಂಥ ಕಾರ್ಯ ಮಾಡಬೇಡಿ’ ಎಂದರು.

‘ದೂರು ನೀಡಿದವರ ವೈಯಕ್ತಿಕ ಹಿತಾಸಕ್ತಿ ಈಡೇರಿಲ್ಲ ಎಂಬ ಕಾರಣಕ್ಕೆ ದೂರು ನೀಡಿದ್ದಾರೆ. ಹಾಗಾಗಿ ಆರೋಗ್ಯಾಧಿಕಾರಿ ವಿರುದ್ಧ ತನಿಖೆ ನಡೆಸುವುದು ಎಷ್ಟು ಸೂಕ್ತ?’ ಎಂದು ಕಿಡಿಕಾರಿದರು.

‘ಒಂದು ವೇಳೆ ವೈದ್ಯರಿಗೆ ತೊಂದರೆ ಕೊಟ್ಟರೆ ಆಸ್ಪತ್ರೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು’ ಎಂದು ಖಾರ್ವಿ ಸಮಾಜದ ಮುಖಂಡ ರಮೇಶ ಖಾರ್ವಿ ಎಚ್ಚರಿಸಿದರು.

ಮಾಜಿ ಸೈನಿಕ ಶ್ರೀಕಾಂತ ನಾಯ್ಕ ಮಾತನಾಡಿ, ‘ದುರುದ್ದೇಶದಿಂದ ದಕ್ಷ ಅಧಿಕಾರಿಯನ್ನು ಹೊರದಬ್ಬಲು ಸಂಚು ರೂಪಿಸಿದ್ದಾರೆ. ಇದಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನಪ್ರತಿನಿಧಿಗಳು, ಮುಖಂಡರು, ವಿವಿಧ ಸಮುದಾಯಗಳ ಪ್ರಮುಖರು, ಸಂಘ ಸಂಸ್ಥೆಗಳು ವೈದ್ಯಾಧಿಕಾರಿಗೆ ಬೆಂಬಲ ಸೂಚಿಸಿ ಪತ್ರ ನೀಡಿದ್ದಾರೆ. ಕಾರಣವಿಲ್ಲದೇ ತೊಂದರೆ ನೀಡಿದರೆ ತೀವ್ರ ಹೋರಾಟ ಅನಿವಾರ್ಯ ಎಂದು ಸ್ಥಳೀಯರು ಎಚ್ಚರಿಕೆ ನೀಡಿದರು.

ಅಭಿನಂದನಾ ಪತ್ರ ನೀಡಿದರು!:

ಜಂಟಿ ನಿರ್ದೇಶಕ ಡಾ.ಬಿರಾದಾರ್, ‘ಡಾ.ಸವಿತಾ ಕಾಮತ್ ಅವರ ಶ್ರಮ ನಿಜಕ್ಕೂ ಅಭಿನಂದನೀಯ. ದೂರುಗಳು ಬಂದಾಗ ಇಲಾಖೆಯ ಸೂಚನೆಯಂತೆ ತನಿಖೆ ನಡೆಸುವುದು ನಮ್ಮ ಕರ್ತವ್ಯ’ ಎಂದು ಹೇಳಿದರು.

ಅದಕ್ಕೆ ಸಾರ್ವಜನಿಕರು, ‘ಆರೋಪ ಸುಳ್ಳೆಂದು ಸಾಬೀತಾದರೆ ದೂರು ಕೊಟ್ಟವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು’ ಎಂದು ಆಗ್ರಹಿಸಿದರು.

ಕೊನೆಗೆ ತನಿಖೆಗೆ ಬಂದ ಜಂಟಿ ನಿರ್ದೇಶಕರೇ ಡಾ.ಸವಿತಾ ಕಾಮತ್ ಅವರಿಗೆ ನಾಗಯಕ್ಷೇ ಧರ್ಮದೇವಿ ಸಂಸ್ಥಾನದವರು ತಂದಿದ್ದ ಅಭಿನಂದನೆ ಪತ್ರ ನೀಡಿ ಜನರನ್ನು ಸಮಾಧಾನ ಪಡಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರದ್ ನಾಯಕ, ತಾಲ್ಲೂಕುವೈದ್ಯಾಧಿಕಾರಿ ಮೂರ್ತಿರಾಜ ಭಟ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT