ಶುಕ್ರವಾರ, ನವೆಂಬರ್ 15, 2019
22 °C
ಶಾಲಾ ಮಕ್ಕಳಿಗೆ ವಾಸ್ತವ್ಯ ಪ್ರಮಾಣ ಪತ್ರ ನೀಡಲು ದಾಖಲೆಯೇ ಇಲ್ಲ!

ಶಿರಸಿ: ಸೌಕರ್ಯ ವಂಚಿತ ಕಾಲೊನಿ: ನೆಲೆಗಾಗಿ ಲಿಡ್ಕರ್ ನಿವಾಸಿಗಳ ಅಲೆದಾಟ

Published:
Updated:

ಶಿರಸಿ: ನಗರದ ಹೊರವಲಯದಲ್ಲಿರುವ ಲಿಡ್ಕರ್ ಕಾಲೊನಿಯ ನಿವಾಸಿಗಳು ಅತ್ತ ಗ್ರಾಮ ಪಂಚಾಯ್ತಿಗೂ ಸೇರದೆ, ಇತ್ತ ನಗರಸಭೆಗೂ ಸಲ್ಲದೆ ಅತಂತ್ರರಾಗಿದ್ದಾರೆ.

ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಡಿಯಲ್ಲಿರುವ ಈ ಲಿಡ್ಕರ್ ಕಾಲೊನಿಯ ನಿವಾಸಿಗಳು ಮೂರೂವರೆ ದಶಕಗಳಿಂದ ಇಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿನ ನಿವಾಸಿಗಳು ಹೇಳುವ ಪ್ರಕಾರ 1983–84ರಲ್ಲಿ ಡಚ್ ಸರ್ಕಾರದ ಸಹಾಯಧನದಲ್ಲಿ ಕಡುಬಡತನದಲ್ಲಿದ್ದ 24 ಕುಟುಂಬಗಳಿಗೆ ಸರ್ಕಾರವು ವಸತಿಸಹಿತ ನಿವೇಶನ ಒದಗಿಸಿ, 10X12 ಅಳತೆಯ ಮೂರು ಕೊಠಡಿಗಳನ್ನು ನಿರ್ಮಿಸಿಕೊಟ್ಟಿತ್ತು. ಜೀವನೋಪಾಯಕ್ಕಾಗಿ ಚರ್ಮ ಉದ್ಯಮಕ್ಕೆ ಅವಕಾಶ ಮಾಡಿಕೊಟ್ಟಿತ್ತು. ನಂತರದ ವರ್ಷಗಳಲ್ಲಿ ಉದ್ದಿಮೆ ನಡೆಸುತ್ತಿದ್ದ ಕೇಂದ್ರಗಳು ಬಾಗಿಲು ಮುಚ್ಚಿದ ಮೇಲೆ, ನಿವಾಸಿಗಳು ಕೂಲಿ ಕೆಲಸ ಮಾಡಿ ಬದುಕುತ್ತಿದ್ದಾರೆ.

ಹಿಂದೆ ನಿರ್ಮಿಸಿರುವ ಮನೆಗಳು ಈಗ ಶಿಥಿಲಗೊಂಡಿವೆ. ಬಡತನದಲ್ಲಿ ಜೀವನ ನಡೆಸುತ್ತಿರುವ ಅವರಿಗೆ ಹೊಸದಾಗಿ ಮನೆ ನಿರ್ಮಿಸಿಕೊಳ್ಳಲು ಆಗುತ್ತಿಲ್ಲ. ಅಲ್ಲದೆ, ನಿವೇಶನವೇ ನಿವಾಸಿಗಳ ಹೆಸರಿಗಿಲ್ಲದ ಕಾರಣ, ಮನೆ ದುರಸ್ತಿಗೂ ಹಿಂದೇಟು ಹಾಕುತ್ತಿದ್ದಾರೆ. ಕೆಲವು ಮನೆಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ರಸ್ತೆ ಸಂಪೂರ್ಣ ಹಾಳಾಗಿದೆ. ರಸ್ತೆಯ ತುದಿಯಲ್ಲಿರುವ ನೀರಿನ ಟಾಕಿ, ಪಕ್ಕದಲ್ಲಿರುವ ವಿದ್ಯುತ್ ವಿತರಕ ಅಪಾಯಕಾರಿ ಸ್ಥಿತಿಯಲ್ಲಿದೆ.ಇದೇ ಬಡಾವಣೆಯಲ್ಲಿ ಅಂಗನವಾಡಿಗೆ ಹೋಗುವ 35 ಮಕ್ಕಳಿದ್ದಾರೆ. ಎರಡು ವರ್ಷಗಳ ಹಿಂದೆ ನಗರಸಭೆಯಿಂದ ಅಂಗನವಾಡಿ ನಿರ್ಮಾಣಕ್ಕೆ ₹ 10 ಲಕ್ಷ ಅನುದಾನ ಮಂಜೂರು ಆಗಿತ್ತು. ಆದರೆ, ಲಿಡ್ಕರ್ ನಿಗಮ ಕಟ್ಟಡ ನಿರ್ಮಾಣಕ್ಕೆ ಪತ್ರ ನೀಡದ ಕಾರಣ ಅನುದಾನ ವಾಪಸ್ ಹೋಯಿತು. ಈಗ ಮನೆಯೊಂದರ ಚಿಕ್ಕ ಜಗುಲಿಯ ಮೇಲೆ ಅಂಗನವಾಡಿ ನಡೆಯುತ್ತಿದೆ. ಅಲ್ಲಿಯೇ ಮಕ್ಕಳು ಕುಳಿತುಕೊಳ್ಳಬೇಕು, ಅಲ್ಲಿಯೇ ಪಕ್ಕದಲ್ಲಿ ಅಡುಗೆ ಮಾಡಬೇಕಾದ ಪರಿಸ್ಥಿತಿಯಿದೆ ಎನ್ನುತ್ತಾರೆ ಸ್ಥಳೀಯರು.

‘ಮನೆ ನಮ್ಮ ಹೆಸರಿಗೆ ಇಲ್ಲದ ಕಾರಣ ಎಲ್ಲಿಯೂ ನಮಗೆ ಸಾಲ ಸಿಗುತ್ತಿಲ್ಲ. ಸ್ವ ಸಹಾಯ ಸಂಘದಲ್ಲಿ ಅಧಿಕ ಬಡ್ಡಿಹಣ ಕೊಟ್ಟು ಸಾಲ ಪಡೆಯಬೇಕು. ಗರ್ಭಿಣಿಯರು, ಶಾಲಾ ಮಕ್ಕಳಿಗೆ ವಾಸ್ತವ್ಯ ಪ್ರಮಾಣಪತ್ರ ಕೇಳಿದರೆ ನೀಡಲು ದಾಖಲೆಯಿಲ್ಲ. ನಗರಸಭೆಗೆ ತುಂಬಿರುವ ತೆರಿಗೆ ಪಾವತಿಯ ದಾಖಲೆಯನ್ನೇ ನೀಡುತ್ತೇವೆ. ಹಲವಾರು ವರ್ಷಗಳಿಂದ ನಗರಸಭೆಗೆ ತೆರಿಗೆ ತುಂಬುತ್ತಿದ್ದೇವೆ. ಅದರಲ್ಲೂ ನಮ್ಮ ಹೆಸರಿಲ್ಲ. ಕೇವಲ ಮನೆ ಸಂಖ್ಯೆ ಇರುತ್ತದೆ’ ಎಂದು ಬೇಸರಿಸಿಕೊಂಡರು ಮುಖೇಶ ನೇತ್ರೆಕರ, ರಾಜೇಶ ಪಾವಸ್ಕರ.

‘52 ಮನೆಗಳಿಗೆ ಸೇರಿ ಒಂದು ತೆರೆದ ಬಾವಿಯಿದೆ. ಎಲ್ಲ ಮನೆಗಳೂ ಅದರ ನೀರನ್ನೇ ಆಶ್ರಯಿಸಿವೆ. ನಿತ್ಯವೂ ನೀರನ್ನು ಸೇದಬೇಕು. ಗಂಗಾ ಕಲ್ಯಾಣ ಯೋಜನೆಯಡಿ ನಗರಸಭೆ ನೀರಿನ ಸಂಪರ್ಕ ಕಲ್ಪಿಸಿತ್ತು. ಅದಕ್ಕೆ ಹಣ ತುಂಬಬೇಕೆಂಬ ಅರಿವಿರಲಿಲ್ಲ. ನಾಲ್ಕೈದು ವರ್ಷಗಳ ನಂತರ ಅಧಿಕ ಮೊತ್ತದ ಬಿಲ್ ಬಂತು. ನಮ್ಮ ಬಳಿ ಭರಣ ಮಾಡಲು ಆಗಲಿಲ್ಲ. ಹೀಗಾಗಿ ನಗರಸಭೆ ಅಧಿಕಾರಿಗಳು ನೀರಿನ ಸಂಪರ್ಕ ಕಡಿತಗೊಳಿಸಿದರು’ ಎನ್ನುತ್ತಾರೆ ಸತೀಶ ಕಾನಡೆ.

‘ರಾಜೀವಗಾಂಧಿ ಆಶ್ರಯ ಯೋಜನೆಯಡಿ ನಮ್ಮ ಎದುರಿನ 32 ಮನೆಗಳಿಗೆ ನಗರಸಭೆ ಪಟ್ಟಾ ನೀಡಿದೆ. ಆದರೆ, ಅಲ್ಲಿಯೂ ಮೂಲ ಸೌಕರ್ಯದ ಕೊರತೆಯಿದೆ. ನಮಗೆ ನೆಲದ ಹಕ್ಕು ಕೂಡ ದೊರೆತಿಲ್ಲ. ಲಿಡ್ಕರ್ ನಿಗಮದವರು ಆಗ ಇಲ್ಲಿಗೆ ಕರೆತಂದರು. ಈಗ ನಾವು ಅತಂತ್ರರಾಗಿದ್ದೇವೆ. ನಮ್ಮ ಮತದಾನದ ಹಕ್ಕು ದೊಡ್ನಳ್ಳಿ ಗ್ರಾಮ ಪಂಚಾಯ್ತಿಗೆ ಸೇರಿದೆ. ಆದರೆ, ಸೌಲಭ್ಯ ಒದಗಿಸಲು ಅವರು
ತಮ್ಮ ಜಾಗವಲ್ಲವೆಂದು ನುಣುಚಿಕೊಳ್ಳುತ್ತಾರೆ’ ಎಂದು ನೊಂದುಕೊಂಡರು ಅವರು.

‘ಹಿಂದಿನ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಆರ್.ವಿ.ದೇಶಪಾಂಡೆ ಅವರು ವಿಶೇಷ ಆಸಕ್ತಿವಹಿಸಿ, ಆಸ್ತಿ ನೋಂದಣಿ ಪ್ರಕ್ರಿಯೆಗೆ ಕ್ರಮವಹಿಸಿದ್ದರು. ನೋಂದಣಿಯ ಮೊತ್ತವನ್ನು ಕಡಿತ ಮಾಡಿಸಿ, ಅನುಕೂಲ ಕಲ್ಪಿಸಿದ್ದರು. ಆದರೆ, ನಂತರ ಬದಲಾದ ಸರ್ಕಾರ ಈಗ ಮುತುವರ್ಜಿ ವಹಿಸಿ, ಈ ಆಸ್ತಿಯನ್ನು ಲಿಡ್ಕರ್ ನಿಗಮಕ್ಕೆ ನೀಡಿ, ಅವರ ಮೂಲಕ ನಮಗೆ ಹಕ್ಕುಪತ್ರ ಕೊಡಿಸಬೇಕು’ ಎಂದು ಅಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.

‘ನೋಂದಣಿ ಮಾಡಿಕೊಡಲು ಬದ್ಧ’

‘ಶಿರಸಿಯ ಲಿಡ್ಕರ್‌ ಕಾಲೊನಿಯ ನಿವಾಸಿಗಳ ಮೂಲ ಸೌಕರ್ಯ ಅಭಿವೃದ್ಧಿಯ ಭಾಗವಾಗಿ ಸಮುದಾಯ ಭವನ ನಿರ್ಮಿಸಿಕೊಡಲಾಗಿದೆ. ಈ ಹಿಂದೆ ಅಲ್ಲಿ ಅನೇಕ ಬಾರಿ ತರಬೇತಿಗಳನ್ನು ಆಯೋಜಿಸಲಾಗಿತ್ತು. ನೀರು ಘಟಕ ನಿರ್ಮಿಸಲು ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ನಿಗಮಕ್ಕೆ ಅನುಮೋದನೆ ನೀಡಲಾಗಿದೆ. ರಸ್ತೆ, ಬೀದಿದೀಪ ವ್ಯವಸ್ಥೆ ಒದಗಿಸಲು ಅಂದಾಜು ಪಟ್ಟಿ ಸಿದ್ಧಪಡಿಸಿಕೊಡುವಂತೆ ಅವರಿಗೆ ತಿಳಿಸಲಾಗಿದೆ’ ಎಂದು ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಬೆಂಗಳೂರು ಕೇಂದ್ರ ಕಚೇರಿಯ ಅಭಿವೃದ್ಧಿ ವಿಭಾಗದ ವ್ಯವಸ್ಥಾಪಕ ಚಂದ್ರಶೇಖರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ನಿಗಮಕ್ಕೆ ವಾರ್ಷಿಕವಾಗಿ ₹ 50 ಕೋಟಿ ಅನುದಾನ ಸಿಗುತ್ತಿದೆ. ಇದನ್ನು ಇಡೀ ರಾಜ್ಯದಲ್ಲಿರುವ ಲಿಡ್ಕರ್ ಕಾಲೊನಿಗಳ ಅಭಿವೃದ್ಧಿಗೆ ಆದ್ಯತೆ ಮೇರೆಗೆ ಹಂಚಿಕೆ ಮಾಡಲಾಗುತ್ತಿದೆ. ಶಿರಸಿ ಲಿಡ್ಕರ್ ಕಾಲೊನಿ ನಿವಾಸಿಗಳು ವಾಸಿಸುವ ಜಾಗ ಇನ್ನೂ ನಿಗಮದ ಹೆಸರಿಗೆ ನೋಂದಣಿಯಾಗಿಲ್ಲ. ನಿಗಮದ ಹೆಸರಿಗೆ ದೊರೆತರೆ, ನಿಯಮ ರೂಪಿಸಿ, ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ನೀಡಲಾಗುವುದು’ ಎಂದು ಹೇಳಿದರು.

ನಿಗಮಕ್ಕೆ ಪತ್ರ

ಲಿಡ್ಕರ್ ಕಾಲೊನಿ ನಿವಾಸಿಗಳು ನಿಯಮಿತವಾಗಿ ತೆರಿಗೆ ಪಾವತಿಸುತ್ತಿರುವುದರಿಂದ ನಿಗಮದಿಂದ ಸ್ಪಷ್ಟೀಕರಣ ಪಡೆದು ಅಲ್ಲಿನ ಅಭಿವೃದ್ಧಿಗೆ ಯೋಚಿಸಲಾಗುವುದು. ಇಲ್ಲಿನ ಸ್ಥಿತಿಗತಿಯ ಬಗ್ಗೆ ಲಿಡ್ಕರ್ ನಿಗಮಕ್ಕೆ ಪತ್ರ ಬರೆದು ಗಮನಕ್ಕೆ ತರುತ್ತೇನೆ.

-ಡಾ.ಈಶ್ವರ ಉಳ್ಳಾಗಡ್ಡಿ, ಉಪವಿಭಾಗಾಧಿಕಾರಿ

‘ನೆಲೆ ಸ್ಪಷ್ಟವಾಗಲಿ‘

ಲಿಡ್ಕರ್ ಕಾಲೊನಿ ನಗರಸಭೆಗೆ ಸೇರಿದ್ದೋ, ಗ್ರಾಮ ಪಂಚಾಯ್ತಿಗೆ ಸೇರಿದ್ದೋ ಎಂಬುದು ಮೊದಲು ಸ್ಪಷ್ಟವಾಗಬೇಕು. ಆಗ ಮೂಲ ಸೌಕರ್ಯ ಕೇಳಲು ಹಕ್ಕು ಸಿಕ್ಕಂತಾಗುತ್ತದೆ

-ಅಮರ ನೇರಳಕಟ್ಟೆ, ಸಾಮಾಜಿಕ ಮುಖಂಡ

‘ನಿಗಮದ ಮುಖ್ಯಸ್ಥರು ಭೇಟಿ ನೀಡಲಿ’

ನಾವಿರುವ ಮನೆಗಳು ಕುಸಿದು ಬೀಳುವ ಸ್ಥಿತಿಯಲ್ಲಿವೆ. ಇಲ್ಲಿ ವಾಸ ಮಾಡಲು ಭಯವಾಗುತ್ತದೆ. ನಾವು ಹೊಸದಾಗಿ ಮನೆ ನಿರ್ಮಿಸಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ನಿಗಮದ ಮುಖ್ಯಸ್ಥರು ಇಲ್ಲಿಗೆ ಭೇಟಿ ನೀಡಿ, ನಮ್ಮ ಸ್ಥಿತಿಗತಿಯನ್ನು ಪರಿಶೀಲಿಸಬೇಕು.

-ಲಕ್ಷ್ಮಣ ಮಾಳಕ್ಕನವರ್, ಸ್ಥಳೀಯ ನಿವಾಸಿ

‘ಮನೆ ನಮ್ಮ ಹೆಸರಿಗೆ ಆಗಲಿ’

ಮನೆ ನಮ್ಮ ಹೆಸರಿಗೆ ಆಗಬೇಕು. ಆಗ ಜೀವನ ಭದ್ರತೆ ಸಿಕ್ಕಂತಾಗುತ್ತದೆ. 35 ವರ್ಷಗಳಿಂದ ವಾಸಿಸುತ್ತಿರುವ ಇಲ್ಲಿನ ಎಲ್ಲರಿಗೂ ಹಕ್ಕುಪತ್ರ ಕೊಡಬೇಕು

-ಕಿರಣ ಪಾವಸ್ಕರ್, ಸ್ಥಳೀಯ ನಿವಾಸಿ

‘ಹೋರಾಟ ಅನಿವಾರ್ಯ’

ನಿತ್ಯ ಬೆಳಿಗ್ಗೆ ಸರದಿಯಲ್ಲಿ ನಿಂತು ನೀರು ಸೇದಬೇಕು. ಬೇಸಿಗೆಯಲ್ಲಿ ಬಾವಿಯಲ್ಲಿ ನೀರಿಲ್ಲದಾಗ, ಕುಡಿಯುವ ನೀರಿಗೆ ಅಲೆದಾಡಬೇಕು. ಒಮ್ಮೆ ಮಳೆ ಬಂದರೆ ಎದುರಿನ ರಸ್ತೆಯ ತಗ್ಗಿನಲ್ಲಿ ನೀರು ನಿಲ್ಲುತ್ತದೆ. ಕೊಳಚೆ ವಾಸನೆ, ಸೊಳ್ಳೆ ಕಾಟ ಅನುಭವಿಸಬೇಕು. ಸಮಸ್ಯೆ ಬಗೆಹರಿಯದಿದ್ದರೆ ನಾವು ಹೋರಾಟ ಮಾಡುವುದು ಅನಿವಾರ್ಯ.

-ಸುಮಿತಾ ಕಾನಡೆ, ಸ್ಥಳೀಯ ಮಹಿಳೆ

 

ಪ್ರತಿಕ್ರಿಯಿಸಿ (+)