ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ದೇಶಿತ ಸ್ಟೇಡಿಯಂ ಸ್ಥಳಾಂತರಿಸಿ: ಸಾವರ್‌ಪೈ ಸ್ಥಳೀಯರ ಆಕ್ಷೇಪ

ಸಾವರ್‌ಪೈ ಸೂಕ್ತ ಸ್ಥಳವಲ್ಲ: ಸ್ಥಳೀಯರ ಆಕ್ಷೇಪ
Last Updated 3 ಏಪ್ರಿಲ್ 2021, 11:57 IST
ಅಕ್ಷರ ಗಾತ್ರ

ಕಾರವಾರ: ‘ಉದ್ದೇಶಿತ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಅನ್ನುಸದಾಶಿವಗಡದ ಸಾವರ್‌ಪೈ ಬದಲು ಬೇರೆ ಕಡೆ ನಿರ್ಮಿಸಿ. ಅದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ’ ಎಂದು ಸ್ಥಳೀಯರು ಸ್ಪಷ್ಟಪಡಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಥಳೀಯ ನಿವಾಸಿ ಲಿಂಗರಾಜು ಕಲ್ಗುಟಕರ್, ‘ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಉದ್ದೇಶಿಸಿರುವ ಜಾಗಕ್ಕೆ ಐತಿಹಾಸಿಕ ಮಹತ್ವವಿದೆ. ಶಿವಾಜಿ ಮಹಾರಾಜರ ಆಳ್ವಿಕೆಗೆ ಸಂಬಂಧಿಸಿದ ಕೋಟೆ ಅಲ್ಲಿದೆ. ಅಲ್ಲದೇ ಅದು ಗೋಮಾಳದ ಜಾಗವಾಗಿದೆ’ ಎಂದರು.

‘ಸಾವರ್‌ಪೈ ಗುಡ್ಡದ ಮೇಲೆ ಶಿವಾಜಿ ಜಯಂತಿಯಂದು ಕಂದಾಯ ಇಲಾಖೆಯವರು ಮೊದಲಿನಿಂದಲೂ ಧ್ವಜಾರೋಹಣ ಮಾಡುತ್ತಿದ್ದರು. ಆಗ ಕಟ್ಟಿಗೆಯ ಕಂಬವನ್ನು ನೆಡಲಾಗುತ್ತಿತ್ತು. ಈಗ ಶಾಶ್ವತವಾಗಿ ಇರುವಂತೆ ಕಬ್ಬಿಣದ ಕಂಬ ಸ್ಥಾಪಿಸಲಾಗಿದೆ. ಹಾಗಾಗಿ ಇತಿಹಾಸ, ಪ್ರಕೃತಿಯ ಸೌಂದರ್ಯವನ್ನು ಗಮನದಲ್ಲಿ ಇಟ್ಟುಕೊಂಡು ಅಲ್ಲೊಂದು ಸುಂದರ ಉದ್ಯಾನ ನಿರ್ಮಿಸಲಿ’ ಎಂದು ಆಗ್ರಹಿಸಿದರು.

‘ಗುಡ್ಡದ ಮೇಲಿರುವ ಜಾಗದಲ್ಲಿ ಸ್ಟೇಡಿಯಂ ನಿರ್ಮಾಣಕ್ಕೆ ಅಲ್ಲಿರುವ ಬಂಡೆಗಳನ್ನು ಒಡೆಯಬೇಕು. ಆಗ ಕೆಳಭಾಗದಲ್ಲಿರುವ ಮನೆಗಳಿಗೆ ಹಾನಿಯಾಗಬಹುದು’ ಎಂದು ಆತಂಕ ವ್ಯಕ್ತಪಡಿಸಿದರು.

‘ಸ್ಟೇಡಿಯಂ ನಿರ್ಮಾಣದಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ಸಿಗುತ್ತದೆ ಎಂದು ಹೇಳುತ್ತಾರೆ. ಆದರೆ, ಈಗಾಗಲೇ ಕೈಗಾ ಅಣು ವಿದ್ಯುತ್ ಸ್ಥಾವರ ಹಾಗೂ ನೌಕಾನೆಲೆಯಲ್ಲಿ ಸ್ಥಳೀಯರಿಗೆ ಎಷ್ಟು ಉದ್ಯೋಗ ಸಿಕ್ಕಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಸಚಿವರಾದ ಶಿವರಾಮ ಹೆಬ್ಬಾರ, ಜಗದೀಶ ಶೆಟ್ಟರ್, ಶಾಸಕಿ ರೂಪಾಲಿ ನಾಯ್ಕ ಕೂಡ ಇದು ಸ್ಟೇಡಿಯಂಗೆ ಸೂಕ್ತವಾದ ಜಾಗವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೂ ಅಲ್ಲೇ ಆಗಬೇಕು ಎಂದು ಕೆಲವರು ಒತ್ತಾಯಿಸುತ್ತಿರುವುದು ಯಾವ ಸ್ವಾರ್ಥಕ್ಕಾಗಿ ಎಂದು ತಿಳಿದಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯರಾದ ವಿನೋದ್ ಕಲ್ಗುಟ್ಕರ್, ಸಂದೀಪ ಕಲ್ಗುಟಕರ್, ಗಜಾನನ ಕಲ್ಗುಟ್ಕರ್, ರಾಜೇಶ ಅಂಬಿಗ, ಸಾಕ್ಷಿ ಕಲ್ಗುಟ್ಕರ್, ವಿನಂತಿ ಕಲ್ಗುಡ್ಕರ್, ಅನುಷಾ ಗಡ್ಕರ್, ಸರಿತಾ ಕಲ್ಗುಟ್ಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT