ಭಾನುವಾರ, ಜೂನ್ 26, 2022
29 °C
ಕಾರವಾರದ ಕೋಣೆ ಪ್ರದೇಶದಲ್ಲಿ ಸ್ಥಳೀಯರು, ನಗರಸಭೆ ಸದಸ್ಯರ ಆಕ್ಷೇಪ

ವಿದ್ಯುತ್ ಕೇಬಲ್ ಅಳವಡಿಕೆ ಅಸಮರ್ಪಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ (ಕ್ರಿಮ್ಸ್) ಭೂಗತ ವಿದ್ಯುತ್ ಕೇಬಲ್ ಅಳವಡಿಕೆ ಕಾಮಗಾರಿಯಲ್ಲಿ ಸುರಕ್ಷತೆಗೆ ಆದ್ಯತೆ ನೀಡಿಲ್ಲ ಎಂದು ಕೋಣೆ ಪ್ರದೇಶದ ನಿವಾಸಿಗಳು ಶುಕ್ರವಾರ ಆಕ್ಷೇಪಿಸಿದರು. ಕೇಬಲ್‌ಗಳನ್ನು ಕೇವಲ ಒಂದು ಅಡಿ ಆಳದ ಹೊಂಡದಲ್ಲಿ ಅಳವಡಿಸಲಾಗಿದೆ ಎಂದು ಆರೋಪಿಸಿದರು.

ಶಿರವಾಡ ಉಪ ಕೇಂದ್ರ ವಿದ್ಯುತ್ ಮಾರ್ಗದಿಂದ ‘ಕ್ರಿಮ್ಸ್’ಗೆ 33 ಕೆ.ವಿ ವಿದ್ಯುತ್ ಸಾಗಿಸಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತಿದೆ. ಲಂಡನ್ ಬ್ರಿಜ್ ಬಳಿಯ ಕಂಬದಿಂದ ರಾಷ್ಟ್ರೀಯ ಹೆದ್ದಾರಿಯ ಅಂಚಿನಲ್ಲೇ ಕೇಬಲ್ ಅಳವಡಿಸಲಾಗಿದೆ.

‘ಕೇಬಲ್ ಅನ್ನು ಮೂರು ಮೀಟರ್ ಆಳದಲ್ಲಿ ಅಳವಡಿಸಬೇಕಿದೆ. ಆದರೆ, ಈ ಪ್ರದೇಶದಲ್ಲಿ ಕೇವಲ ಒಂದು ಅಡಿ ಆಳದಲ್ಲಿ ಹಾಕಲಾಗಿದೆ. ಇಲ್ಲಿ ಸುಮಾರು ಎರಡು ಸಾವಿರ ಜನ ವಾಸವಿದ್ದಾರೆ. ಏನಾದರೂ ವಿದ್ಯುತ್ ಅವಘಡವಾದರೆ ಯಾರು ಜವಾಬ್ದಾರಿ? ಶಿರವಾಡದಿಂದ ಕ್ರಿಮ್ಸ್‌ಗೆ ನೇರವಾಗಿ ಯಾಕೆ ಕೇಬಲ್ ಅವಳಡಿಸಿಲ್ಲ’ ಎಂದು ಸ್ಥಳೀಯರು ಪ್ರಶ್ನಿಸಿದರು.

ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಪೌರಾಯುಕ್ತ ಆರ್.ಪಿ.ನಾಯ್ಕ, ನಗರಸಭೆ ಸದಸ್ಯರು ಕೂಡ ಸ್ಥಳಕ್ಕೆ ಬಂದರು. ಈ ಸಂದರ್ಭದಲ್ಲಿ ಕಾಮಗಾರಿಯ ಬಗ್ಗೆ ಸ್ಪಷ್ಟನೆ ನೀಡಿದ ಹೆಸ್ಕಾಂ ಅಧಿಕಾರಿ ಶಂಕರ ಸಿ.ಬಿಂಗಿ, ‘ಕೇಬಲ್‌ನ ಎರಡೂ ತುದಿಗಳಲ್ಲಿ ಅರ್ಥಿಂಗ್ ವ್ಯವಸ್ಥೆಯಿದೆ. ಮೂರು ಪದರಗಳ ಸುರಕ್ಷಾ ಕವಚವಿದೆ. ಒಂದುವೇಳೆ, ಎಲ್ಲಾದರೂ ವಿದ್ಯುತ್ ಸೋರಿಕೆಯಾದರೆ ಕ್ಷಣ ಮಾತ್ರದಲ್ಲಿ ಸಂಪರ್ಕ ಕಡಿತಗೊಳ್ಳುತ್ತದೆ’ ಎಂದು ಸ್ಪಷ್ಟನೆ ನೀಡಿದರು.

‘ಇದು ಕ್ರಿಮ್ಸ್ ಕಾಮಗಾರಿಯಾಗಿದ್ದು, ಜಿಲ್ಲಾಡಳಿತದ ಸೂಚನೆಯಂತೆ ಹೆಸ್ಕಾಂ ಉಸ್ತುವಾರಿ ನೋಡಿಕೊಂಡಿದೆ. ವಿದ್ಯುತ್ ಕೇಬಲ್ ಸಾಗಲು ಆರು ಮೀಟರ್ ಕಾರಿಡಾರ್ ಬೇಕು. ಹಾಗಾಗಿ ಹೆದ್ದಾರಿಯ ಬದಿಯಲ್ಲಿ ಅಳವಡಿಸಲಾಗಿದೆ’ ಎಂದು ಹೇಳಿದರು.

‘ಕಾಮಗಾರಿಗೆ ನಗರಸಭೆಯಿಂದ ನಿರಾಕ್ಷೇಪಣಾ ಪತ್ರ ನೀಡಲಾಗಿದೆಯೇ’ ಎಂದು ಸದಸ್ಯರು ಪ್ರಶ್ನಿಸಿದಾಗ ಅಧಿಕಾರಿಗಳು, ‘ರಸ್ತೆ ಬದಿ ಗುಂಡ ಅಗೆಯಲು ₹ 10 ಲಕ್ಷ ಶುಲ್ಕ ಪಡೆದುಕೊಂಡು ಅನುಮತಿ ನೀಡಲಾಗಿದೆ’ ಎಂದು ತಿಳಿಸಿದರು.

ಇದೇವೇಳೆ ಮಾತನಾಡಿದ ಡಾ.ನಿತಿನ್ ಪಿಕಳೆ, ‘ಆಸ್ಪತ್ರೆಗೆ ನಿರಂತರವಾಗಿ ವಿದ್ಯುತ್ ನೀಡುವ ಕಾಮಗಾರಿಗೆ ಯಾರದ್ದೂ ವಿರೋಧವಿಲ್ಲ. ಆದರೆ, ಸ್ಥಳೀಯರ ಸುರಕ್ಷತೆಯೂ ಮುಖ್ಯ. ಅದನ್ನು ಖಾತ್ರಿ ಪಡಿಸಿದ ನಂತರವೇ ಕಾಮಗಾರಿ ಮುಂದುವರಿಸಿ’ ಎಂದು ಸೂಚಿಸಿದರು.

ನಗರಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಸಂತೋಷ ಹಾಗೂ ಸಿಬ್ಬಂದಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು